ಇಂದು ಭಾರತ-ದಕ್ಷಿಣ ಆಫ್ರಿಕಾ 3ನೇ ಟಿ20 ಪಂದ್ಯ. ಟೀಂ ಇಂಡಿಯಾದ ಸುಧಾರಿತ ಬ್ಯಾಟಿಂಗ್ ಪ್ರದರ್ಶನ ತೋರುವ ವಿಶ್ವಾಸ. 1-1ರಲ್ಲಿ ಸಮಗೊಂಡಿರುವ 4 ಪಂದ್ಯಗಳ ಸರಣಿ.
ಸೆಂಚೂರಿಯನ್: ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಕುತೂಹಲ ಹೆಚ್ಚುತ್ತಿರುವುದರ ನಡುವೆ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಅಷ್ಟೇ ಮಹತ್ವ ಪಡೆದಿಲ್ಲವಾದರೂ, ಒಂದು ತಂಡವಾಗಿ ಕೆಲ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಟೀಂ ಇಂಡಿಯಾಗೆ ಈ ಸರಣಿ ಅವಕಾಶ ಒದಗಿಸಿದೆ. ಬುಧವಾರ ಇಲ್ಲಿ ಭಾರತ ಹಾಗೂ ದ.ಆಫ್ರಿಕಾ ನಡುವೆ 3ನೇ ಟಿ20 ಪಂದ್ಯ ನಡೆಯಲಿದ್ದು, ಬ್ಯಾಟರ್‌ಗಳ ಸ್ವರ್ಗ ಎಂದೇ ಕರೆಸಿಕೊಳ್ಳುವ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ. ಈ ಸರಣಿಯಲ್ಲಿ ಉಭಯ ತಂಡಗಳು ವೈಯಕ್ತಿಕ ಪ್ರದರ್ಶನಗಳ ಮೇಲೆ ಹೆಚ್ಚು ಗಮನ ಹರಿಸುವುದು ಅನುಮಾನ. ಆದರೆ ತಂಡಕ್ಕೆ ಎದುರಾಗಿರುವ ಕೆಲ ಪ್ರಮುಖ ಸಮಸ್ಯೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸುತ್ತಿವೆ.
ಸರಣಿಯ ಮೊದಲೆರಡು ಪಂದ್ಯಗಳನ್ನು ಗಮನಿಸಿದಾಗ, ಗೋಚರಿಸುವ ಪ್ರಮುಖ ಸಮಸ್ಯೆ ಎಂದರೆ ಭಾರತದ ಬ್ಯಾಟಿಂಗ್ ಬಲ 7ನೇ ಕ್ರಮಾಂಕದಲ್ಲೇ ಕೊನೆಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಬ್ಬರದ ಶತಕ ಸಿಡಿಸಿ ಉತ್ತಮ ವೇದಿಕೆ ಒದಗಿಸಿಕೊಟ್ಟರೂ, ಕೊನೆಯ 6 ಓವರಲ್ಲಿ ಭಾರತ ಗಳಿಸಿದ್ದು ಕೇವಲ 40 ರನ್. 2ನೇ ಪಂದ್ಯದಲ್ಲಿ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡು ಬಳಿಕ ಚೇತರಿಕೆಯನ್ನೇ ಕಾಣಲಿಲ್ಲ. ಇದು ಬ್ಯಾಟಿಂಗ್ ಆಳ ಎಷ್ಟಿದೆ ಎನ್ನುವುದಕ್ಕೆ ಉದಾಹರಣೆ. ಇದರೊಂದಿಗೆ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ ಲಯದ ಬಗ್ಗೆಯೂ ತಂಡಕ್ಕೆ ತಲೆನೋವು ಶುರುವಾಗಿದೆ. ಕಳೆದ 8 ಟಿ20ಗಳಲ್ಲಿ ಅಭಿಷೇಕ್ ಕೇವಲ 70 ರನ್ ಗಳಿಸಿದ್ದು, ಕೇವಲ 2 ಬಾರಿ 10 ಎಸೆತಕ್ಕಿಂತ ಹೆಚ್ಚು ಕಾಲ ಕ್ರೀಸ್‌ನಲ್ಲಿ ಉಳಿದಿದ್ದಾರೆ. ಹರಿಣಗಳಿಗೆ ಸ್ಪಿನ್ನರ್ಸ್ ಕಾಟ: ಇನ್ನು 2 ಪಂದ್ಯಗಳಲ್ಲಿ ಮಣಿಕಟ್ಟು ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಹಾಗೂ ರವಿ ಬಿಷ್ಣೋಯಿರಿಂದ ಒಟ್ಟು 16 ಓವರ್ ಎದುರಿಸಿರುವ ದಕ್ಷಿಣ ಆಫ್ರಿಕಾ, ಕೇವಲ 91 ರನ್ ಗಳಿಸಿ 12 ವಿಕೆಟ್‌ಗಳನ್ನು ಕಳೆದುಕೊಂಡಿದೆ. 2017-18ರಲ್ಲಿ ಭಾರತ ತಂಡ ಪ್ರವಾಸ ಕೈಗೊಂಡಾಗಲೂ ಏಕದಿನ ಸರಣಿಯಲ್ಲಿ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಲ್ ವಿರುದ್ಧ ದ.ಆಫ್ರಿಕಾ ಪರದಾಡಿತ್ತು. ಆ ಸರಣಿಯಲ್ಲಿ 5 ಪಂದ್ಯಗಳಲ್ಲಿ ಈ ಇಬ್ಬರು ಒಟ್ಟು 35 ವಿಕೆಟ್ ಕಬಳಿಸಿದ್ದರು.
ಇದನ್ನು ಗಮನಿಸಿದಾಗ, ಸ್ಪಿನ್ ಬೌಲಿಂಗ್ ಎದುರು ದ.ಆಫ್ರಿಕಾದ ಬ್ಯಾಟಿಂಗ್ ಗುಣಮಟ್ಟ ಸುಧಾರಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಈ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳಲು ಎರಡೂ ತಂಡಗಳು ಪ್ರಯತ್ನ ನಡೆಸಲಿವೆ. ಉಳಿದಂತೆ, ತಂಡಗಳಲ್ಲಿ ಹೆಚ್ಚಿನ ಬದಲಾವಣೆ ಆಗುವ ಸಾಧ್ಯತೆ ಕಡಿಮೆ.ಸಂಭವನೀಯ ಆಟಗಾರರ ಪಟ್ಟಿ:
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.