ಪ್ಯಾರಿಸ್‌ ಗೇಮ್ಸ್‌ನಲ್ಲಿ 29 ಪದಕಗಳ ಪರಾಕ್ರಮ: ಭಾರತದ ಯಶಸ್ಸಿನ ಹಿಂದಿನ ಗುಟ್ಟೇನು ಗೊತ್ತಾ?

KannadaprabhaNewsNetwork | Published : Sep 9, 2024 1:31 AM

ಸಾರಾಂಶ

ಭಾರತದ ಅನಿರೀಕ್ಷಿತ ಪದಕ ಸಾಧನೆಯ ಹಿಂದೆ ಹಲವು ಮಹತ್ವದ ವಿಚಾರಗಳಿವೆ. ಕೇಂದ್ರ ಸರ್ಕಾರದ ಬೆಂಬಲ ಸೇರಿ ಹಲವು ಕಾರಣಗಳಿವೆ. ಒಂದೇ ಕ್ರೀಡಾಕೂಟದಲ್ಲಿ ಹಲವು ಪ್ರಥಮಗಳೂ ದಾಖಲಾಗಿವೆ.

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 25 ಪದಕ ಗೆಲ್ಲುವ ನಿರೀಕ್ಷೆ ಇತ್ತಾದರೂ, ಅದಕ್ಕಿಂತಲೂ ಹೆಚ್ಚಿನ ಮೆಡಲ್‌ ಸಾಧನೆ ಮಾಡಿದೆ. ಈ ಅನಿರೀಕ್ಷಿತ ಪದಕ ಸಾಧನೆಯ ಹಿಂದೆ ಹಲವು ಮಹತ್ವದ ವಿಚಾರಗಳಿವೆ.

1. ಕೇಂದ್ರ ಸರ್ಕಾರದ ಹೆಚ್ಚಿನ ಪ್ರೋತ್ಸಾಹ

ಕೇಂದ್ರ ಸರ್ಕಾರ ಈಗ ಕ್ರೀಡೆಗೆ ಹೆಚ್ಚಿನ ಮಹತ್ವದ ನೀಡುತ್ತಿದೆ. ಬಜೆಟ್‌ನಲ್ಲಿ ವಿವಿಧ ಯೋಜನೆಗಳ ಮೂಲಕ ಹೆಚ್ಚಿನ ಅನುದಾನ ಒದಗಿಸಿದ್ದಲ್ಲದೇ, ಅಥ್ಲೀಟ್‌ಗಳ ಅಭ್ಯಾಸಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಮಾಡಿತು. ಕ್ರೀಡಾಪಟುಗಳಲ್ಲಿ ಆರ್ಥಿಕ ಹಾಗೂ ಮಾನಸಿಕವಾಗಿ ಶಕ್ತಿ ತುಂಬಿದ್ದು ಕ್ರೀಡಾಕೂಟದಲ್ಲಿ ಫಲ ನೀಡಿತು.2. ಹೆಚ್ಚುವರಿ ಕೋಚ್‌, ಸಿಬ್ಬಂದಿ

ಭಾರತ ಈ ಬಾರಿ ಹೆಚ್ಚುವರಿ ಕೋಚ್‌ಗಳು ಹಾಗೂ ಸಹಾಯಕ ಸಿಬ್ಬಂದಿಯನ್ನು ಪ್ಯಾರಿಸ್‌ಗೆ ಕಳುಹಿಸಿತ್ತು. ಟೋಕಿಯೋ ಗೇಮ್ಸ್‌ನಲ್ಲಿ 45 ಸಿಬ್ಬಂದಿ ಇದ್ದರೆ, ಈ ಬಾರಿ 77 ಕೋಚ್‌ಗಳು ಹಾಗೂ ಸಿಬ್ಬಂದಿಗಳಿದ್ದರು. ಇದು ಭಾರತಕ್ಕೆ ವರವಾಗಿ ಪರಿಣಮಿಸಿತು.3. ಪುನಶ್ಚೇತನ ಕೇಂದ್ರ

ಇದೇ ಮೊದಲ ಬಾರಿ ಭಾರತೀಯ ಕ್ರೀಡಾಪಟುಗಳಿಗಾಗಿ ಪ್ಯಾರಿಸ್‌ ಕ್ರೀಡಾ ಗ್ರಾಮದಲ್ಲಿ ಪುನಶ್ಚೇತನ ಕೇಂದ್ರ ತೆರೆಯಲಾಗಿತ್ತು. ಪ್ಯಾರಾಲಿಂಪಿಕ್ಸ್‌ ನಡುವೆ ಕ್ರೀಡಾಪಟುಗಳು ಗಾಯಗೊಂಡರೆ ಅವರಿಗೆ ಬೇಕಾದ ಎಲ್ಲಾ ಆರೈಕೆ, ಚಿಕಿತ್ಸೆ ನೀಡಿ ಉಪಚರಿಸಲಾಗುತ್ತಿತ್ತು. ಮಾನಸಿಕವಾಗಿಯೂ ಅವರನ್ನು ಸಿದ್ಧಗೊಳಿಸಲು ವೈದ್ಯರಿದ್ದರು. 3. ಅನುಭವಿ ಅಥ್ಲೀಟ್‌ಗಳು

ಈ ಹಿಂದಿನ ಪ್ಯಾರಾಲಿಂಪಿಕ್ಸ್‌ ಸೇರಿ ಜಾಗತಿಕ ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿದ್ದ ಕ್ರೀಡಾಪಟುಗಳು ಈ ಬಾರಿಯೂ ಗೇಮ್ಸ್‌ನಲ್ಲಿ ಪಾಲ್ಗೊಂಡರು. ಜಾಗತಿಕ ಮಟ್ಟದ ಕೂಟಗಳಲ್ಲಿ ಒತ್ತಡ ಹೆಚ್ಚಿದ್ದರೂ, ಅನುಭವದ ಬಲದಿಂ ಅದನ್ನು ನಿಭಾಯಿಸಿದ್ದು ಪದಕ ಗೆಲ್ಲಲು ಕಾರಣವಾಯಿತು.4. ಅಥ್ಲೆಟಿಕ್ಸ್‌ನಲ್ಲಿ ಸುಧಾರಣೆ

ಭಾರತ ಜಾಗತಿಕ ಕ್ರೀಡಾಕೂಟಗಳ ಅಥ್ಲೆಟಿಕ್ಸ್‌ನಲ್ಲಿ ಹೆಚ್ಚಿನ ಸಾಧನೆ ಮಾಡಿದ್ದೇ ಇಲ್ಲ. ಆದರೆ ಈ ಬಾರಿ ಭಾರತಕ್ಕೆ ಹೆಚ್ಚಿನ ಯಶಸ್ಸು ತಂದುಕೊಟ್ಟಿದ್ದೇ ಅಥ್ಲೆಟಿಕ್ಸ್‌. ಕಳೆದ ಬಾರಿ 1 ಚಿನ್ನ ಸೇರಿ ಒಟ್ಟು 8 ಪದಕ ಗೆದ್ದಿದ್ದ ಭಾರತ, ಈ ಸಲ 4 ಚಿನ್ನ ಸೇರಿ 17 ಪದಕ ಬಾಚಿಕೊಂಡಿತು.ಈ ಬಾರಿ ಗೇಮ್ಸ್‌ನಲ್ಲಿ ಭಾರತದ ವಿಶೇಷತೆ

1. ಈ ಸಲ ಭಾರತಕ್ಕೆ ಲಭಿಸಿದ್ದು ಒಟ್ಟು 29 ಪದಕ. ಇದು ಸಾರ್ವಕಾಲಿಕ ಗರಿಷ್ಠ.2. ಭಾರತ ಪ್ಯಾರಿಸ್‌ನಲ್ಲಿ 7 ಚಿನ್ನ ಗೆದ್ದಿದೆ. ಟೋಕಿಯೋದಲ್ಲಿ 5 ಚಿನ್ನ ಗೆದ್ದಿದ್ದ ದಾಖಲೆ ಪತನ.3. ಪ್ಯಾರಾಲಿಂಪಿಕ್ಸ್‌ನಲ್ಲೇ ಭಾರತ ಮೊದಲ ಬಾರಿ ಜುಡೊ ಸ್ಪರ್ಧೆಯಲ್ಲಿ ಪದಕ ಗೆದ್ದಿತು.4. ಬ್ಯಾಡ್ಮಿಂಟನ್‌ನಲ್ಲಿ ಭಾರತ 5 ಪದಕ ಗೆದ್ದಿದೆ. ಟೋಕಿಯೋದಲ್ಲಿ 4 ಗೆದ್ದಿದ್ದು ಈವರೆಗಿನ ದಾಖಲೆ.5. ಪದಕ ಪಟ್ಟಿಯಲ್ಲಿ ಭಾರತ ಅಗ್ರ-20ರೊಳಗೆ ಸ್ಥಾನ ಪಡೆದಿದ್ದು ಇದೇ ಮೊದಲು.

ಒಂದು ಗೇಮ್ಸ್‌, ಹಲವು ಪ್ರಥಮಗಳು

1. ಪ್ಯಾರಾಲಿಂಪಿಕ್ಸ್‌ನಲ್ಲಿ ಒಂದಕ್ಕಿಂತ ಹೆಚ್ಚು ಚಿನ್ನದ ಪದಕ ಗೆದ್ದ ಭಾರತದ ಪ್ರಥಮ ಮಹಿಳೆ ಅವನಿ ಲೇಖರಾ.2. 1960ರ ಪ್ಯಾರಾಲಿಂಪಿಕ್ಸ್‌ನಲ್ಲೇ ಕ್ಲಬ್‌ ಥ್ರೋ ಸ್ಪರ್ಧೆ ಇದ್ದರೂ, ಭಾರತಕ್ಕೆ ಈ ಸ್ಪರ್ಧೆಯಲ್ಲಿ ಪದಕ ಸಿಕ್ಕಿದ್ದು ಇದೇ ಮೊದಲು.

3. ಹರ್ವಿಂದರ್‌ ಸಿಂಗ್‌ ಆರ್ಚರಿಯಲ್ಲಿ ಚಿನ್ನ ಗೆದ್ದರು. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚೊಚ್ಚಲ ಆರ್ಚರಿ ಚಿನ್ನ.4. ಮನಿಶಾ ರಾಮ್‌ದಾಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಬ್ಯಾಡ್ಮಿಂಟನ್‌ ಪಟು.

5. ಪ್ರೀತಿ 100 ಮೀ.ನಲ್ಲಿ ಕಂಚು ಗೆದ್ದರು. ಪ್ಯಾರಾಲಿಂಪಿಕ್ಸ್‌ ಅಥ್ಲೆಟಿಕ್ಸ್‌ನ ಟ್ರ್ಯಾಕ್‌ ಸ್ಪರ್ಧೆಯಲ್ಲಿದು ಭಾರತದ ಚೊಚ್ಚಲ ಪದಕ.6. ಸತತ 3 ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್‌ ಮರಿಯಪ್ಪನ್‌ ತಂಗವೇಲು(ಹೈಜಂಪ್‌).7. ಕಪಿಲ್‌ ಪಾರ್ಮರ್‌ ಪ್ಯಾರಾಲಿಂಪಿಕ್ಸ್‌ ಜುಡೊ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು.8. ಪ್ಯಾರಾಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ 2 ಪದಕ ಗೆದ್ದ ಭಾರತದ ಮೊದಲಿಗರು ಸುಹಾಸ್‌ ಯತಿರಾಜ್‌.

9. ಸುಮಿತ್‌ ಅಂತಿಲ್‌ ಸತತ 2 ಪ್ಯಾರಾಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಪುರುಷ ಅಥ್ಲೀಟ್‌.10. ಆರ್ಚರಿಯಲ್ಲಿ 2 ಪ್ಯಾರಾಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದ ಭಾರತದ ಮೊದಲಿಗರು ಹರ್ವಿಂದರ್‌ ಸಿಂಗ್‌.

Share this article