ಭಾರತೀಯ ಹಾಕಿಗಿದು ಮಹತ್ವದ ವರ್ಷ: ಸ್ವ್ಯಾಬ್‌ ವಿಶೇಷ ಚರ್ಚಾ ಕಾರ್ಯಕ್ರಮದಲ್ಲಿ ಎಂ.ಎಂ. ಸೋಮಯ್ಯ

KannadaprabhaNewsNetwork |  
Published : Jul 03, 2026, 01:15 AM IST
ಸ್ವ್ಯಾಬ್ | Kannada Prabha

ಸಾರಾಂಶ

ಈ ಕಾರ್ಯಕ್ರಮವನ್ನು ಸ್ಪೋರ್ಟ್ಸ್ ರೈಟರ್ಸ್ ಅಸೋಸಿಯೇಷನ್ ಆಫ್ ಬೆಂಗಳೂರು(ಸ್ವ್ಯಾಬ್‌) ಆಯೋಜಿಸಿತ್ತು. ಅಪಘಾತ ಪರಿಹಾರ ಸೇವಾ ಸಂಸ್ಥೆ (Accident Relief Care) ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂಬರುವ ಎಫ್‌ಐಎಚ್ ವಿಶ್ವಕಪ್ ಹಾಗೂ ಏಷ್ಯನ್ ಗೇಮ್ಸ್‌ಗಳ ಸವಾಲು ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ತಂಡಗಳ ಮುಂದಿದ್ದು, ಈ ಎರಡು ಪ್ರಮುಖ ಟೂರ್ನಿಗಳನ್ನು ಕೇಂದ್ರವಾಗಿಟ್ಟುಕೊಂಡು ‘ಭಾರತೀಯ ಹಾಕಿ: ದೊಡ್ಡ ವರ್ಷ, ಇನ್ನೂ ದೊಡ್ಡ ಕನಸುಗಳು’ ಎಂಬ ವಿಷಯದ ಕುರಿತು ಗುರುವಾರ ಕೆಎಸ್‌ಬಿಎ ಆವರಣದಲ್ಲಿ ವಿಶ್ವ ಕ್ರೀಡಾ ಪತ್ರಕರ್ತರ ದಿನಾಚರಣೆಯ ಅಂಗವಾಗಿ ವಿಶೇಷ ಚರ್ಚಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಸ್ಪೋರ್ಟ್ಸ್ ರೈಟರ್ಸ್ ಅಸೋಸಿಯೇಷನ್ ಆಫ್ ಬೆಂಗಳೂರು(ಸ್ವ್ಯಾಬ್‌) ಆಯೋಜಿಸಿತ್ತು. ಅಪಘಾತ ಪರಿಹಾರ ಸೇವಾ ಸಂಸ್ಥೆ (Accident Relief Care) ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿತ್ತು.

1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮಾಜಿ ಭಾರತೀಯ ಹಾಕಿ ಆಟಗಾರ ಎಂ.ಎಂ. ಸೋಮಯ್ಯ ಹಾಗೂ ಭಾರತೀಯ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಸ್ಜೋರ್ಡ್ ಮರೀನೆ ಈ ಚರ್ಚೆಯಲ್ಲಿ ಭಾಗವಹಿಸಿದರು. ‘ಭಾರತೀಯ ಹಾಕಿಗಿದು ಮಹತ್ವದ ವರ್ಷ. ವಿಶ್ವಕಪ್‌ಗೆ ನಮ್ಮ ತಂಡ ಪೂರ್ಣ ಸಾಮರ್ಥ್ಯದೊಂದಿಗೆ ಸಜ್ಜಾಗಿದೆ. ಇದರಿಂದ ನಾವು ಈ ಟೂರ್ನಿಗೆ ಎಷ್ಟು ಮಹತ್ವ ನೀಡುತ್ತಿದ್ದೇವೆ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಸೋಮಯ್ಯ ಹೇಳಿದರು. ‘ಪುರುಷರ ವಿಭಾಗದಲ್ಲಿ ಭಾರತ ವಿಶ್ವ ರ‍್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿದ್ದು, ಮಹಿಳೆಯರು ಒಂಬತ್ತನೇ ಸ್ಥಾನದಲ್ಲಿದ್ದಾರೆ. ಆದ್ದರಿಂದ ಸಾಧ್ಯವಾದಷ್ಟು ಹೆಚ್ಚು ಪಂದ್ಯಗಳನ್ನು ಗೆಲ್ಲುವುದು ಅತ್ಯಂತ ಮುಖ್ಯ’ ಎಂದರು.

ಟೋಕಿಯೊ 2020 ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ತಂಡವನ್ನು ಐತಿಹಾಸಿಕ 4ನೇ ಸ್ಥಾನಕ್ಕೆ ಮುನ್ನಡೆಸಿದ್ದ ಡಚ್ ಕೋಚ್‌ ಮರೀನೆ ಮಾತನಾಡಿ, ‘ವಿಶ್ವಕಪ್ ಮತ್ತು ಏಷ್ಯನ್ ಗೇಮ್ಸ್ ನಡುವೆ 20 ದಿನಗಳಿಗಿಂತ ಕಡಿಮೆ ಅಂತರ ಇರುವುದರಿಂದ ಆಟಗಾರರ ದೈಹಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀಳಬಹುದು ಎಂಬ ಅಭಿಪ್ರಾಯಗಳಿದ್ದರೂ, ಅದಕ್ಕೆ ಹೆಚ್ಚಿನ ಆತಂಕ ಬೇಡ. 2018ರಲ್ಲಿದ್ದಂತೆ ಈ ಬಾರಿಯೂ ವಿಶ್ವಕಪ್ ಏಷ್ಯನ್ ಗೇಮ್ಸ್‌ಗೆ ಉತ್ತಮ ಸಿದ್ಧತೆಯನ್ನು ನೀಡಲಿದೆ’ ಎಂದರು.ಈ ಸಂದರ್ಭದಲ್ಲಿ ಸೋಮಯ್ಯ ಮತ್ತು ಮರೀನೆ ಅವರು ತಮ್ಮ ಆಟಗಾರರ ದಿನಗಳಿಂದ ನಿವೃತ್ತಿಯ ನಂತರದವರೆಗಿನ ಕ್ರೀಡಾ ಪತ್ರಕರ್ತರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು.

‘ವರ್ಷಗಳ ಕಾಲ ಪತ್ರಕರ್ತರೊಂದಿಗೆ ನಮ್ಮ ಸಂಬಂಧ ಅತ್ಯಂತ ಉತ್ತಮವಾಗಿತ್ತು’ ಎಂದು ಸೋಮಯ್ಯ ಹೇಳಿದರು. ‘ನೀವು ಪತ್ರಕರ್ತರು ಯಾವಾಗಲೂ ರಚನಾತ್ಮಕ ಹಾಗೂ ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದೀರಿ. ಹಲವಾರು ಸಂದರ್ಭಗಳಲ್ಲಿ ನಮ್ಮ ದೋಷಗಳನ್ನು ಕನ್ನಡಿಯಂತೆ ತೋರಿಸಿದ್ದೀರಿ. ಅದರಿಂದ ನಾವು ಆತ್ಮಾವಲೋಕನ ಮಾಡಿಕೊಳ್ಳಲು ಸಾಧ್ಯವಾಯಿತು’ ಎಂದು ಅವರು ಹೇಳಿದರು.

ಆಟಗಾರನಾಗಿ ನಿವೃತ್ತಿಯಾದ ಬಳಿಕ 1989ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸಂದರ್ಭದಲ್ಲಿ ತಾವು ಕ್ರೀಡಾ ಪತ್ರಿಕೋದ್ಯಮದಲ್ಲೂ ಹೆಜ್ಜೆ ಇಟ್ಟಿದ್ದನ್ನು ಸೋಮಯ್ಯ ಇದೇ ವೇಳೆ ಸ್ಮರಿಸಿದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

12 ವರ್ಷ ಬಳಿಕ ಜರ್ಮನಿ ನಾಕೌಟ್‌ ಪ್ರವೇಶ
ಫಿಫಾ ವಿಶ್ವಕಪ್‌ ಮೆರುಗು ಹೆಚ್ಚಿಸಿದ ತಾರಾ ಸ್ಟ್ರೈಕರ್ಸ್‌!