ಬೆಂಗಳೂರು: ಕ್ಷಮತಾ ಇನ್ನೋವೇಷನ್ ಫೌಂಡೇಶನ್ ಮತ್ತು ದಿವ್ಯಾಂಗ್ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ ಆಯೋಜಿಸುತ್ತಿರುವ ಭಾರತದ ಮೊದಲ ವೀಲ್‌ಚೇರ್ ಕ್ರಿಕೆಟ್ ಪಂದ್ಯಾವಳಿ ಆಗಿರುವ ಎಬಿಲಿಟಿ ಸ್ಪೋರ್ಟ್ಸ್ ಲೀಗ್ ಟಿ20 ಡಿಸೆಂಬರ್ 9ರಿಂದ 13ರವರೆಗೆ ಬೆಂಗಳೂರಿನ ಕೆಎಸ್‌ಸಿಎ ಆಲೂರು ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. 2018ರಲ್ಲಿ ಆರಂಭವಾದಾಗಿನಿಂದಲೂ ಈ ಲೀಗ್ ಈವರೆಗೆ 600ಕ್ಕೂ ಹೆಚ್ಚು ವೀಲ್‌ಚೇರ್ ಆಟಗಾರರಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತಾ ಬಂದಿರುವುದು ಗಮನಾರ್ಹ.ಈ ಬಾರಿಯ ಟೇಕ್‌ಸ್ಪೋರ್ಟ್ಸ್ ಎಎಸ್ಎಲ್ ಟಿ20 ಪಂದ್ಯಾವಳಿಯಲ್ಲಿ ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಮತ್ತು ಲಖನೌ ಸೇರಿದಂತೆ 6 ತಂಡಗಳು ಭಾಗವಹಿಸುತ್ತಿವೆ. ಭಾರತದ 16 ರಾಜ್ಯಗಳ ಆಟಗಾರರು ಪಾಲ್ಗೊಳ್ಳಲಿದ್ದಾರೆ.ಕಳೆದ ಆವೃತ್ತಿಯಲ್ಲಿ ವೃತ್ತಿಪರ ಮಟ್ಟದ ಕ್ರಿಕೆಟ್ ಕಿಟ್ ಮತ್ತು ಸಲಕರಣೆಗಳನ್ನು ನೀಡಿದ್ದ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯು ಈ ಬಾರಿ ಪೂರ್ತಿ ಹಣಕಾಸು ಪ್ರಾಯೋಜಕತ್ವದ ಒದಗಿಸುತ್ತಿದೆ. ಇದರಿಂದ ಈ ಪಂದ್ಯಾವಳಿ ಮತ್ತಷ್ಟು ಉತ್ಕೃಷ್ಟವಾಗಿ ನಡೆಯಲು ಅನುವು ಮಾಡಿಕೊಟ್ಟಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ರಂಗ ಚೆಕ್ ಹಸ್ತಾಂತರಿಸಿದ್ದಾರೆ. ಈ ಮೂಲಕ ಎಲ್ಲರನ್ನೂ ಒಳಗೊಳ್ಳುವ ಕ್ರೀಡೆಯನ್ನು ಪ್ರೋತ್ಸಾಹಿಸುವ ತಮ್ಮ ಬದ್ಧತೆಯನ್ನು ಸಾರಿದ್ದಾರೆ.ಎಬಿಲಿಟಿ ಸ್ಪೋರ್ಟ್ಸ್ ಲೀಗ್ ಟಿ20ಯ ಆಯೋಜಕಿ ಕ್ಷಮತಾ ಇನ್ನೋವೇಷನ್ ಫೌಂಡೇಶನ್ ನ ನಿರ್ದೇಶಕಿ ಕ್ಷಮಾ ರಂಗನ್ ಅವರು ಮಾತನಾಡಿ, ‘ಸೈಕಲ್ ಪ್ಯೂರ್ ಅಗರಬತ್ತಿಯು ನೀಡುತ್ತಿರುವ ನಿರಂತರ ಬೆಂಬಲಕ್ಕೆ ನಾವು ಕೃತಜ್ಞರಾಗಿದ್ದೇವೆ. ಈ ಪಂದ್ಯಾವಳಿಯನ್ನು ನಡೆಸಲು ಮತ್ತು ಬೆಳೆಸಲು ಈ ನೆರವು ಬಹಳ ಮುಖ್ಯವಾಗಿದೆ. ಈ ಹಣಕಾಸಿನ ಬೆಂಬಲದಿಂದ ನಮ್ಮ ಆಟಗಾರರು ಆಟದ ಮೇಲೆಯೇ ಗಮನ ಹರಿಸುವುದು ಸಾಧ್ಯವಾಗಲಿದೆ. ನಾವು ಅವರಿಗೆ ಉತ್ಕೃಷ್ಟ ಕ್ರಿಕೆಟ್ ಅನುಭವ ಒದಗಿಸಲು ಎದುರು ನೋಡುತ್ತಿದ್ದೇವೆ’ ಎಂದರು.