ದುಬೈ: ಏಷ್ಯನ್ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಉನ್ನತಿ ಅಯ್ಯಪ್ಪ ಕಂಚಿನ ಪದಕ ಜಯಿಸಿದ್ದಾರೆ. ಕೂಟದ ಕೊನೆ ದಿನವಾದ ಶನಿವಾರ ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಉನ್ನತಿ 13.65 ಸೆಕೆಂಡ್‌ಗಳಲ್ಲಿ ಕ್ರಮಿಸಿ 3ನೇ ಸ್ಥಾನಿಯಾದರು. ಕೂಟದಲ್ಲಿ ಕರ್ನಾಟಕಕ್ಕಿದು 3ನೇ ಪದಕ.
ಇದಕ್ಕೂ ಮುನ್ನ ಗುರುವಾರ ಪಾವನ ನಾಗರಾಜ್ ಲಾಂಗ್‌ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಬಳಿಕ ಶ್ರೀಯಾ ರಾಜೇಶ್ 400 ಮೀ. ಹರ್ಡಲ್ಸ್‌ನಲ್ಲಿ 59.20 ಸೆಕೆಂಡ್‌ಗಳಲ್ಲಿ ಗುರಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.ಭಾರತ ಕೂಟದಲ್ಲಿ 6 ಚಿನ್ನ ಸೇರಿ 25 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. 10 ಬೆಳ್ಳಿ, 9 ಕಂಚು ಕೂಡಾ ಭಾರತೀಯ ಅಥ್ಲೀಟ್‌ಗಳ ಪಾಲಾಗಿವೆ. 2023ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಕೂಟದಲ್ಲಿ ಭಾರತ 19 ಪದಕಗಳನ್ನು ಪಡೆದಿತ್ತು. ಈ ಬಾರಿ 6 ಪದಕಗಳನ್ನು ಹೆಚ್ಚು ಗೆದ್ದುಕೊಂಡಿದೆ.
ಆರ್ಚರಿ ವಿಶ್ವಕಪ್: ಜ್ಯೋತಿ ಹ್ಯಾಟ್ರಿಕ್ ಸ್ವರ್ಣ ಸಾಧನೆ!
ಶಾಂಘೈ(ಚೀನಾ): ಏಷ್ಯನ್ ಗೇಮ್ಸ್ ಚಾಂಪಿಯನ್, ಭಾರತದ ಜ್ಯೋತಿ ಸುರೇಖಾ ವೆನ್ನಂ ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದಿದ್ದಾರೆ. ಒಟ್ಟಾರೆ ಭಾರತಕ್ಕೆ 4 ಚಿನ್ನ ಸೇರಿ 5 ಪದಕ ಒಲಿದಿದೆ.
ವಿಶ್ವ ನಂ.3 ಜ್ಯೋತಿ ಕಾಂಪೌಂಡ್ ಮಹಿಳಾ ತಂಡ ವಿಭಾಗದಲ್ಲಿ ಅದಿತಿ ಸ್ವಾಮಿ, ಪರ್‌ನೀತ್ ಕೌರ್, ಮಿಶ್ರ ತಂಡ ವಿಭಾಗದಲ್ಲಿ ಅಭಿಷೇಕ್ ವರ್ಮಾ ಜೊತೆಗೂಡಿ ಚಿನ್ನ ಗೆದ್ದರು. ವೈಯಕ್ತಿಕ ವಿಭಾಗದಲ್ಲೂ ಜ್ಯೋತಿಗೆ ಬಂಗಾರ ಒಲಿಯಿತು.
ಇದೇ ವೇಳೆ ಅಭಿಷೇಕ್ ಪುರುಷರ ತಂಡ ವಿಭಾಗದಲ್ಲಿ ಪ್ರಥಮೇಶ್, ಪ್ರಿಯಾನ್ಶ್ ಜೊತೆ ಸೇರಿ ಸ್ವರ್ಣ ಸಾಧನೆ ಮಾಡಿದರು. ಪುರುಷರ ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ಪ್ರಿಯಾನ್ಶ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ರೀಕರ್ವ್ ವಿಭಾಗದ ಪದಕ ಸುತ್ತಿನ ಪಂದ್ಯಗಳು ಭಾನುವಾರ ನಡೆಯಲಿದ್ದು, ಭಾರತ ಮತ್ತೆರಡು ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ.