ಆಸೀಸ್‌ಗೆ ತಲೆಬಾಗಿದ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌

KannadaprabhaNewsNetwork |  
Published : Jun 10, 2024, 12:31 AM ISTUpdated : Jun 10, 2024, 04:43 AM IST
ಆ್ಯಡಂ ಝಂಪಾ ಸಂಭ್ರಮಾಚರಣೆ | Kannada Prabha

ಸಾರಾಂಶ

ಆಸ್ಟ್ರೇಲಿಯಾ 7 ವಿಕೆಟ್‌ಗೆ 201 ರನ್‌. ಬೃಹತ್‌ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 6 ವಿಕೆಟ್‌ ಕಳೆದುಕೊಂಡು ಕೇವಲ 165 ರನ್‌. ಹಾಲಿ ಚಾಂಪಿಯನ್ಸ್‌ಗೆ 36 ರನ್‌ ಸೋಲು.

ಬ್ರಿಡ್ಜ್‌ಟೌನ್‌(ಬಾರ್ಬಡೊಸ್): ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಮೊದಲ ಗೆಲುವಿಗಾಗಿ ಮತ್ತಷ್ಟು ಸಮಯ ಕಾಯಬೇಕಿದೆ. ಸ್ಕಾಟ್ಲೆಂಡ್ ವಿರುದ್ಧದ ಮೊದಲ ಪಂದ್ಯ ಮಳೆಯಿಂದ ರದ್ದಾಗಿ ಒಂದು ಅಂಕಕ್ಕೆ ತೃಪ್ತಿಪಟ್ಟುಕೊಂಡಿದ್ದ ಇಂಗ್ಲೆಂಡ್‌, ಶನಿವಾರ ರಾತ್ರಿ ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ಧ 36 ರನ್‌ ಸೋಲನುಭವಿಸಿತು. ತಂಡ ಸದ್ಯ 2 ಪಂದ್ಯಗಳಲ್ಲಿ ಕೇವಲ 1 ಅಂಕ ಸಂಪಾದಿಸಿದ್ದು, ಸತತ 2 ಜಯದೊಂದಿಗೆ 4 ಅಂಕ ಹೊಂದಿರುವ ಆಸೀಸ್‌ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.

ಮೊದಲು ಬ್ಯಾಟ್‌ ಮಾಡಿದ ಆಸೀಸ್‌ 7 ವಿಕೆಟ್‌ ಕಳೆದುಕೊಂಡು 201 ರನ್‌ ಕಲೆಹಾಕಿತು. ಇದು ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಮೊದಲ 200+ ಸ್ಕೋರ್‌. ಸ್ಫೋಟಕ ಆರಂಭ ಒದಗಿಸಿದ ವಾರ್ನರ್‌-ಟ್ರ್ಯಾವಿಸ್‌ ಹೆಡ್‌ ಮೊದಲ 5 ಓವರಲ್ಲೇ 70 ರನ್‌ ಸಿಡಿಸಿದರು. ವಾರ್ನರ್‌ 16 ಎಸೆತಗಳಲ್ಲಿ 39, ಹೆಡ್‌ 18 ಎಸೆತಗಳಲ್ಲಿ 34 ರನ್‌ ಸಿಡಿಸಿ ಔಟಾದ ಬಳಿಕ, ನಾಯಕ ಮಿಚೆಲ್‌ ಮಾರ್ಷ್‌ 35, ಮ್ಯಾಕ್ಸ್‌ವೆಲ್‌ 28, ಮಾರ್ಕಸ್‌ ಸ್ಟೋಯ್ನಿಸ್‌ 17 ಎಸೆತಗಳಲ್ಲಿ 30 ಹಾಗೂ ಮ್ಯಾಥ್ಯೂ ವೇಡ್‌ ಔಟಾಗದೆ 17 ರನ್‌ ಸಿಡಿಸಿ ತಂಡವನ್ನು 200ರ ಗಡಿ ತಲುಪಿಸಿದರು. 

ಬೃಹತ್‌ ಮೊತ್ತ ಬೆನ್ನತ್ತಿದ ಇಂಗ್ಲೆಂಡ್‌, ಉತ್ತಮ ಆರಂಭದ ಹೊರತಾಗಿಯೂ 20 ಓವರಲ್ಲಿ 6 ವಿಕೆಟ್‌ಗೆ 165 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ನಾಯಕ ಬಟ್ಲರ್‌ 28 ಎಸೆತಗಳಲ್ಲಿ 42, ಫಿಲ್‌ ಸಾಲ್ಟ್‌ 23 ಎಸೆತಗಳಲ್ಲಿ 37 ರನ್‌ ಸಿಡಿಸಿ ಗೆಲುವಿನ ಮುನ್ಸೂಚನೆ ನೀಡಿದರೂ, ಮಧ್ಯಮ ಓವರ್‌ಗಳಲ್ಲಿ ರನ್‌ ಗಳಿಸಲು ತಿಣುಕಾಡಿದ ತಂಡ ಸತತ ವಿಕೆಟ್‌ ಕಳೆದುಕೊಂಡು ಸೋಲಿಗೆ ಶರಣಾಯಿತು. ಆ್ಯಡಂ ಝಂಪಾ, ಕಮಿನ್ಸ್‌ ತಲಾ 2 ವಿಕೆಟ್‌ ಕಿತ್ತರು.ಸ್ಕೋರ್: ಆಸ್ಟ್ರೇಲಿಯಾ 20 ಓವರಲ್ಲಿ 201/7 (ವಾರ್ನರ್‌ 39, ಮಾರ್ಷ್‌ 35, ಜೊರ್ಡನ್‌ 2-44), ಇಂಗ್ಲೆಂಡ್‌ 20 ಓವರಲ್ಲಿ165/6 (ಬಟ್ಲರ್‌ 42, ಸಾಲ್ಟ್‌ 37, ಕಮಿನ್ಸ್‌ 2-23, ಝಂಪಾ 2-28) ಪಂದ್ಯಶ್ರೇಷ್ಠ: ಆ್ಯಡಂ ಝಂಪಾ.

14 ವರ್ಷ ಬಳಿಕ ಗೆಲುವು

ಇಂಗ್ಲೆಂಡ್‌ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ 14 ವರ್ಷಗಳ ಬಳಿಕ ಜಯ ದಾಖಲಿಸಿತು. 2007ರಲ್ಲಿ ಇಂಗ್ಲೆಂಡ್‌ ವಿರುದ್ಧ ಆಸೀಸ್‌ ಗೆದ್ದಿತ್ತು. ಬಳಿಕ 2010, 2021ರಲ್ಲಿ ಇಂಗ್ಲೆಂಡ್‌ ಗೆದ್ದಿದ್ದರೆ, 2022ರಲ್ಲಿ ಪಂದ್ಯ ಮಳೆಗೆ ರದ್ದಾಗಿತ್ತು.

01ನೇ ಬಾರಿ: ವೈಯಕ್ತಿಕ ಅರ್ಧಶತಕ ಇಲ್ಲದೆ ಟಿ20 ವಿಶ್ವಕಪ್‌ನ ಪಂದ್ಯವೊಂದರಲ್ಲಿ ಒಟ್ಟು 350+ ರನ್‌ ದಾಖಲಾಗಿದ್ದು ಇದೇ ಮೊದಲು.

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌