ವಿಶ್ವ ಗೆದ್ದ ಭಾರತದ ಮಹಿಳಾ ಕ್ರಿಕೆಟಿಗರಿಗೆ ಭಾರಿ ಬಹುಮಾನ - ಬಿಸಿಸಿಐನಿಂದ 51 ಕೋಟಿ

| N/A | Published : Nov 04 2025, 02:00 AM IST

Team India
ವಿಶ್ವ ಗೆದ್ದ ಭಾರತದ ಮಹಿಳಾ ಕ್ರಿಕೆಟಿಗರಿಗೆ ಭಾರಿ ಬಹುಮಾನ - ಬಿಸಿಸಿಐನಿಂದ 51 ಕೋಟಿ
Share this Article
  • FB
  • TW
  • Linkdin
  • Email

ಸಾರಾಂಶ

ಚೊಚ್ಚಲ ಏಕದಿನ ವಿಶ್ವಕಪ್‌ ಗೆದ್ದ ಹರ್ಮನ್‌ಪ್ರೀತ್‌ ಕೌರ್‌ ಸಾರಥ್ಯದ ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ ಬಹುಮಾನಗಳ ಸುರಿಮಳೆಯಾಗುತ್ತಿದೆ. ಬಿಸಿಸಿಐ ಬರೋಬ್ಬರಿ 51 ಕೋಟಿ ರು. ನಗದು ಬಹುಮಾನ ಘೋಷಿಸಿದ್ದು, ಇದು ಚಾಂಪಿಯನ್ಸ್‌ ತಂಡಕ್ಕೆ ಐಸಿಸಿ ನೀಡುವ ಬಹುಮಾನಕ್ಕಿಂತಲೂ ಅಧಿಕ.

 ನವದೆಹಲಿ: ಚೊಚ್ಚಲ ಏಕದಿನ ವಿಶ್ವಕಪ್‌ ಗೆದ್ದ ಹರ್ಮನ್‌ಪ್ರೀತ್‌ ಕೌರ್‌ ಸಾರಥ್ಯದ ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ ಬಹುಮಾನಗಳ ಸುರಿಮಳೆಯಾಗುತ್ತಿದೆ. ಬಿಸಿಸಿಐ ಬರೋಬ್ಬರಿ 51 ಕೋಟಿ ರು. ನಗದು ಬಹುಮಾನ ಘೋಷಿಸಿದ್ದು, ಇದು ಚಾಂಪಿಯನ್ಸ್‌ ತಂಡಕ್ಕೆ ಐಸಿಸಿ ನೀಡುವ ಬಹುಮಾನಕ್ಕಿಂತಲೂ ಅಧಿಕ. 

ಇದೇ ವೇಳೆ ಟೀಂ ಇಂಡಿಯಾ ಆಟಗಾರ್ತಿಯರಿಗೆ ಸೂರತ್‌ನ ವಜ್ರದ ವ್ಯಾಪಾರಿಯೊಬ್ಬರು ವಜ್ರದ ಆಭರಣ ಹಾಗ ಸೌರ ಫಲಕವನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ಮಧ್ಯಪ್ರದೇಶ ಹಾಗೂ ಹಿಮಾಚಲಪ್ರದೇಶ ಸರ್ಕಾರಗಳೂ ತಮ್ಮ ರಾಜ್ಯಗಳ ಆಟಗಾರರಿಗೆ ತಲಾ 1 ಕೋಟಿ ರು. ಬಹುಮಾನ ಪ್ರಕಟಿಸಿವೆ.

ವಿಶ್ವಕಪ್‌ ಗೆದ್ದ ತಂಡಕ್ಕೆ ಐಸಿಸಿ ₹39.78 ಕೋಟಿ ನಗದು ಬಹುಮಾನ ನೀಡಿದೆ. ಆದರೆ ಬಿಸಿಸಿಐ ಅದಕ್ಕಿಂತ ಸುಮಾರು ₹11 ಕೋಟಿ ಅಧಿಕ ಮೊತ್ತ ನೀಡುವುದಾಗಿ ಘೋಷಿಸಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಮಾಹಿತಿ ನೀಡಿದ್ದು, ‘ವಿಶ್ವಕಪ್‌ ಗೆದ್ದ ಮಹಿಳಾ ತಂಡಕ್ಕೆ ಅಭಿನಂದನೆ ಸಲ್ಲಿಸುವ ಸಲುವಾಗಿ ಬಿಸಿಸಿಐ 51 ಕೋಟಿ ರು. ನಗದು ಬಹುಮಾನ ನೀಡಲಿದೆ. ಇದು ಎಲ್ಲಾ ಆಟಗಾರ್ತಿಯರು, ಸಹಾಯಕ ಸಿಬ್ಬಂದಿ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರಿಗೂ ಸಿಗಲಿದೆ’ ಎಂದಿದ್ದಾರೆ.

ಕಳೆದ ವರ್ಷ ಭಾರತ ಪುರುಷರ ತಂಡ ಟಿ20 ವಿಶ್ವಕಪ್‌ ಗೆದ್ದಾಗ ಆಟಗಾರರಿಗೆ ಬಿಸಿಸಿಐ ₹125 ಕೋಟಿ ಹಣ ಬಹುಮಾನವಾಗಿ ನೀಡಿತ್ತು. ವನಿತೆಯರಿಗೂ ಅಷ್ಟೇ ಪ್ರಮಾಣದಲ್ಲಿ ನೀಡಬಹುದು ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಬಿಸಿಸಿಐ 51 ಕೋಟಿ ರು.ಗಷ್ಟೇ ಸೀಮಿತಗೊಳಿಸಿದೆ.

ಸರ್ಕಾರಗಳಿಂದಲೂ ಬಹುಮಾನ:ಭಾರತ ತಂಡದಲ್ಲಿದ್ದ ಬೌಲರ್‌ ಕ್ರಾಂತಿ ಗೌಡ್‌ಗೆ ಮಧ್ಯಪ್ರದೇಶ ಸರ್ಕಾರ 1 ಕೋಟಿ ರು. ನಗದನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿದೆ. ಮತ್ತೊಂದೆಡೆ ಹಿಮಾಚಲ ಪ್ರದೇಶ ಸರ್ಕಾರ ವೇಗಿ ರೇಣುಕಾ ಸಿಂಗ್‌ಗೆ ₹1 ಕೋಟಿ ನಗದು ಬಹುಮಾನ ಪ್ರಕಟಿಸಿದೆ.

ಕ್ರಿಕೆಟಿಗರಿಗೆ ವಜ್ರ ಗಿಫ್ಟ್‌:

ಟೀಂ ಇಂಡಿಯಾ ಆಟಗಾರ್ತಿಯರಿಗೆ ಸೂರತ್‌ನ ವಜ್ರದ ವ್ಯಾಪಾರಿ, ರಾಜ್ಯಸಭಾ ಸದಸ್ಯ ಗೋವಿಂದ ಧೋಲಾಕಿಯಾ ವಜ್ರದ ಆಭರಣ ಮತ್ತು ಸೋಲಾರ್‌ ಫಲಕವನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ರಾಜೀವ್‌ ಶುಕ್ಲಾಗೆ ಪತ್ರ ಬರೆದಿರುವ ಶ್ರೀ ರಾಮಕೃಷ್ಣ ಎಕ್ಸ್‌ಪೋರ್ಟ್‌. ಪ್ರೈ. ಲಿಮಿಟೆಡ್‌ ಸ್ಥಾಪಕ ಧೋಲಾಕಿಯಾ , ‘ವಿಶ್ವಕಪ್‌ ತಂಡದಲ್ಲಿದ್ದ ಆಟಗಾರ್ತಿಯರಿಗೆ ಕೈಯಲ್ಲಿ ತಯಾರಿಸಿದ ನೈಸರ್ಗಿಕ ವಜ್ರದ ಆಭರಣ ಮತ್ತು ಅವರ ಮನೆಗಳಿಗೆ ಸೋಲಾರ್‌ ಅಳವಡಿಸಲು ಬಯಸಿದ್ದು, ದೇಶಕ್ಕೆ ಬೆಳಕು ನೀಡಿದವರ ಬದುಕು ಕೂಡ ಬೆಳಕಿನಿಂದ ಕೂಡಿರಲಿ’ ಎಂದಿದ್ದಾರೆ.

ಕ್ರಿಕೆಟ್‌ ಎಲ್ಲರ ಆಟ

ಭಾರತದ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರು ವಿಶ್ವಕಪ್‌ಅನ್ನು ಮಗ್ಗುಲಲ್ಲೇ ಇಟ್ಟುಕೊಂಡು ಭಾನುವಾರ ನಿದ್ರಿಸಿದರು. ‘ಕ್ರಿಕೆಟ್‌ ಎಂಬುದು ಜೆಂಟಲ್‌ಮನ್‌ಗಳಿಗಷ್ಟೇ ಸೀಮಿತವಾದದ್ದಲ್ಲ, ಅದು ಪ್ರತಿಯೊಬ್ಬರ ಆಟ’ ಎಂಬ ಬರಹವುಳ್ಳ ಅವರ ಟೀ-ಶರ್ಟ್‌ ಭಾರಿ ವೈರಲ್‌ ಆಗಿದೆ.

Read more Articles on