ಬಿಸಿಸಿಐ ಅಧ್ಯಕ್ಷರಾಗಿ ಮಿಥುನ್‌ ಆಯ್ಕೆ ಖಚಿತ

| Published : Sep 22 2025, 01:01 AM IST

ಸಾರಾಂಶ

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ನೂತನ ಅಧ್ಯಕ್ಷರಾಗಿ ದೆಹಲಿಯ ಮಾಜಿ ಕ್ರಿಕೆಟಿಗ ಮಿಥುನ್‌ ಮನ್ಹಾಸ್‌ ಆಯ್ಕೆ ಖಚಿತವಾಗಿದೆ. ಶನಿವಾರ ಸಂಜೆ ಬಿಜೆಪಿ ಹಿರಿಯ ನಾಯಕರು ಹಾಗೂ ಬಿಸಿಸಿಐ ಅಧಿಕಾರಿಗಳು ಸಭೆ ಸೇರಿ, ಒಮ್ಮತದ ಅಭ್ಯರ್ಥಿಯನ್ನಾಗಿ ಮನ್ಹಾಸ್‌ರನ್ನು ಆಯ್ಕೆ ಮಾಡಿದ್ದಾರೆ.

ಮುಂಬೈ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ನೂತನ ಅಧ್ಯಕ್ಷರಾಗಿ ದೆಹಲಿಯ ಮಾಜಿ ಕ್ರಿಕೆಟಿಗ ಮಿಥುನ್‌ ಮನ್ಹಾಸ್‌ ಆಯ್ಕೆ ಖಚಿತವಾಗಿದೆ. ಶನಿವಾರ ಸಂಜೆ ಬಿಜೆಪಿ ಹಿರಿಯ ನಾಯಕರು ಹಾಗೂ ಬಿಸಿಸಿಐ ಅಧಿಕಾರಿಗಳು ಸಭೆ ಸೇರಿ, ಒಮ್ಮತದ ಅಭ್ಯರ್ಥಿಯನ್ನಾಗಿ ಮನ್ಹಾಸ್‌ರನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೆ, ಅಧ್ಯಕ್ಷ ಸ್ಥಾನಕ್ಕೆ ಮನ್ಹಾಸ್‌ ಮಾತ್ರ ನಾಮಪತ್ರ ಸಲ್ಲಿಸಿದ್ದು, ಇದರೊಂದಿಗೆ ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.

ದೆಹಲಿ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದಂತೆ ಕೇಂದ್ರ ಬಿಜೆಪಿಯು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೂ ಅಚ್ಚರಿಯ ಆಯ್ಕೆಗೆ ನಿರ್ಧರಿಸಿತು. ಅವರ ಆಯ್ಕೆಯನ್ನು ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಕೂಡಾ ಖಚಿತಪಡಿಸಿದ್ದಾರೆ. ‘ಮುಂದಿನ ಅವಧಿಗೆ ಹೊಸ ಸಮಿತಿ ಆಯ್ಕೆ ಮಾಡಲಾಗಿದೆ. ಮಾಜಿ ಕ್ರಿಕೆಟಿಗ ಮಿಥುನ್‌ ಮನ್ಹಾಸ್‌ರನ್ನುಅಧ್ಯಕ್ಷರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ. ಅರುಣ್‌ ಧುಮಾಲ್‌ ಐಪಿಎಲ್‌ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ’ ಎಂದು ಹೇಳಿದ್ದಾರೆ.

ಈಗ ಬಿಸಿಸಿಐ ಕಾರ್ಯದರ್ಶಿಯಾಗಿರುವ ದೇವಜಿತ್‌ ಸೈಕಿಯಾ ಅದೇ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಖಜಾಂಚಿಯಾಗಿದ್ದ ಪ್ರಭ್‌ತೇಜ್‌ ಭಾಟಿಯಾ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.

2022ರಿಂದ ಕರ್ನಾಟಕದ ರೋಜರ್‌ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗಿದ್ದರು. ಅವರಿಗೆ 70 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೊಸ ಸಮಿತಿಗೆ ಸೆ.28ರಂದು ಚುನಾವಣೆ ನಡೆಯಲಿದೆ. ಭಾನುವಾರ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿತ್ತು. ಎಲ್ಲಾ ಹುದ್ದೆಗೂ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಎಲ್ಲರೂ ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.---ಅಧ್ಯಕ್ಷ ಸ್ಥಾನ ರೇಸಲ್ಲಿದ್ದ

ರಘುರಾಮ್‌ ಖಜಾಂಚಿ

ಸದ್ಯ ಕರ್ನಾಟಕ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿರುವ ರಘುರಾಮ್ ಭಟ್ ಬಿಸಿಸಿಐ ಖಜಾಂಚಿಯಾಗಿ ಆಯ್ಕೆಯಾಗಲಿದ್ದಾರೆ. ಕೆಲ ದಿನಗಳಿಂದ ರಘುರಾಮ್‌ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದ್ದವು. ಶನಿವಾರದ ಸಭೆಯ ನಡೆದ ಬಳಿಕ ಮೊದಲಿಗೆ ರಘುರಾಮ್‌ ಅವರೇ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಸುದ್ದಿ ಹರಿದಾಡಿದ್ದವು. ಆದರೆ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. -

ಯಾವ ಸ್ಥಾನಕ್ಕೆ ಯಾರು?

ಹುದ್ದೆಯಾರು?

ಅಧ್ಯಕ್ಷಮಿಥುನ್‌ ಮನ್ಹಾಸ್‌

ಕಾರ್ಯದರ್ಶಿದೇವಜಿತ್‌ ಸೈಕಿಯಾ

ಉಪಾಧ್ಯಕ್ಷರಾಜೀವ್‌ ಶುಕ್ಲಾ

ಖಜಾಂಚಿರಘುರಾಮ್‌ ಭಟ್‌

ಜಂಟಿ ಕಾರ್ಯದರ್ಶಿಪ್ರಭ್‌ತೇಜ್‌

ಐಪಿಎಲ್‌ ಮುಖ್ಯಸ್ಥಅರುಣ್‌ ಧುಮಾಲ್ಯಾರಿವರು ಮನ್ಹಾಸ್‌?

ಜಮ್ಮುವಿನ ಮಿಥುನ್‌ ಮನ್ಹಾಸ್‌, ದೇಸಿ ಕ್ರಿಕೆಟ್‌ನಲ್ಲಿ ಡೆಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು 157 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 27 ಶತಕ ಒಳಗೊಂಡ 9714 ರನ್‌ ಕಲೆಹಾಕಿದ್ದಾರೆ. 130 ಲಿಸ್ಟ್‌ ‘ಎ’ ಪಂದ್ಯಗಳಲ್ಲಿ 4126 ರನ್‌, 91 ಟಿ20 ಪಂದ್ಯಗಳಲ್ಲಿ 1170 ರನ್‌ ಸಿಡಿಸಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ, ಪುಣೆ ವಾರಿಯರ್ಸ್‌ ಹಾಗೂ ಡೆಲ್ಲಿ ತಂಡಗಳಲ್ಲಿದ್ದ ಅವರು, ಒಟ್ಟು 55 ಪಂದ್ಯಗಳನ್ನಾಡಿದ್ದಾರೆ. 2015-16ರಲ್ಲಿ ಜಮ್ಮು-ಕಾಶ್ಮೀರ ತಂಡ ಸೇರ್ಪಡೆಗೊಂಡಿದ್ದ ಮಿಥುನ್‌, 2017ರಲ್ಲಿ ಐಪಿಎಲ್‌ನ ಪಂಜಾಬ್‌ ತಂಡ ಸಹಾಯಕ ಕೋಚ್‌ ಆಗಿ ನೇಮಕಗೊಂಡಿದ್ದರು. 2019ರಲ್ಲಿ ಆರ್‌ಸಿಬಿ, 2022ರಲ್ಲಿ ಗುಜರಾತ್‌ ಸಹಾಯಕ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಜಮ್ಮು-ಕಾಶ್ಮೀರ ಕ್ರಿಕೆಟ್‌ ಸಂಸ್ಥೆಯ ಆಡಳಿತಾಧಿಕಾಯಾಗಿದ್ದಾರೆ.