ಸಮಸ್ತ ಮಾನವ ಕಲ್ಯಾಣಕ್ಕೇ ಕೃತಕ ಬುದ್ಧಿಮತ್ತೆಯ ಲಾಭ ಸಿಗಬೇಕು- ಕೆಲ ದೇಶಗಳ ಸ್ವತ್ತಾಗಬಾರದು । ಜಾಗತಿಕ ಟೆಕ್‌ ಲೋಕಕ್ಕೆ ಸಂದೇಶಚಾಟ್‌ಜಿಪಿಟಿ ಖ್ಯಾತಿಯಓಪನ್‌ ಎಐನಿಂದಲೂ

ಬೆಂಗಳೂರಲ್ಲಿ ಕಚೇರಿ

ನವದೆಹಲಿ: ಬೆಂಗಳೂರಿನಲ್ಲಿ ಆಂಥ್ರೋಪಿಕ್ ತನ್ನ ಕಚೇರಿ ಆರಂಭಿಸಿದ ಬೆನ್ನಲ್ಲೇ ಮತ್ತೊಂದು ಟೆಕ್‌ ದೈತ್ಯ, ‘ಚಾಟ್‌ಜಿಪಿಟಿ’ ಸೇವೆ ನೀಡುವ ಓಪನ್‌ ಎಐ ಕರ್ನಾಟಕದ ರಾಜಧಾನಿಯಲ್ಲಿ ತನ್ನ ಶಾಖೆ ಪ್ರಾರಂಭಿಸುವುದಕ್ಕೆ ಮುಂದಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಭಾಗಿಯಾಗಿರುವ ಓಪನ್‌ ಎಐ ಸಿಇಒ ಸ್ಯಾಮ್‌ ಅಲ್ಟಮನ್‌ ಅವರೇ ಸ್ವತಃ ಈ ಬಗ್ಗೆ ಘೋಷಿಸಿದ್ದಾರೆ.

ವಿವರ 7

--


ಅಗ್ಗದ ದರದಲ್ಲಿ ಎಐ ಸೇವೆ

ಕೊಡಲು ₹10 ಲಕ್ಷ ಕೋಟಿ

ಹೂಡುತ್ತೇವೆ: ರಿಲಯನ್ಸ್‌

ನವದೆಹಲಿ: ಜನರಿಗೆ ಕೈಗೆಟಕುವ ದರದಲ್ಲಿ ಎಐ ಸೇವೆ ತಲುಪಿಸಲು 7 ವರ್ಷಗಳಲ್ಲಿ 10 ಲಕ್ಷ ಕೋಟಿ ರು. ಹೂಡಿಕೆ ಮಾಡುವುದಾಗಿ ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಭರವಸೆ ನೀಡಿದ್ದಾರೆ. ಜಿಯೋ ಈಗ ಇಂಟರ್ನೆಟ್‌ ಯುಗದ ನಂತರ ಇಂಟೆಲಿಜೆನ್ಸ್ ಯುಗವನ್ನು ಸಂಪರ್ಕಿಸಲಿದೆ. ಜಾಮ್‌ನಗರದಲ್ಲಿ ಕಂಪನಿಯು ಎಐ-ಸಿದ್ಧ ಡೇಟಾ ಸೆಂಟರ್ ಪಾರ್ಕ್ ಅಭಿವೃದ್ಧಿಪಡಿಸಲಿದೆ ಎಂದಿದ್ದಾರೆ.

ವಿವರ 7--

ನವದೆಹಲಿ: ಕೃತಕ ಬುದ್ಧಿಮತ್ತೆ(ಎಐ) ಕೆಲವೇ ದೇಶಗಳು, ವ್ಯಕ್ತಿಗಳ ಸ್ವತ್ತಾಗಬಾರದು. ಬದಲಾಗಿ ಸಮಸ್ತ ಮಾನವ ಕಲ್ಯಾಣಕ್ಕೇ ಅದರ ಲಾಭ ಸಿಗುವಂತಾಗಬೇಕು ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ನಿಟ್ಟಿನಲ್ಲಿ ಜಾಗತಿಕ ಸಮುದಾಯದ ಮುಂದೆ ಮಾನವ ಕೇಂದ್ರಿತ ‘ಮಾನವ್’ ಮಂತ್ರ ಜಪಿಸಿದ್ದಾರೆ.ಮಾನವ್‌ (ಎಂಎಎನ್‌ಎವಿ) ವಿಷನ್‌ನಲ್ಲಿ ‘ಎಂ’ ಅಂದರೆ ನೈತಿಕ ಮತ್ತು ನ್ಯಾಯಪರ ವ್ಯವಸ್ಥೆ, ‘ಎ’ ಅಂದರೆ ಆಡಳಿತದ ಉತ್ತರದಾಯಿತ್ವ, ‘ಎನ್‌’ ಅಂದರೆ ರಾಷ್ಟ್ರೀಯ ಸಾರ್ವಭೌಮತ್ವ, ‘ಎ’ ಅಂದರೆ ಎಲ್ಲರಿಗೂ ಲಭ್ಯವಾಗುವ ಮತ್ತು ಎಲ್ಲರನ್ನೂ ಒಳಗೊಂಡ, ‘ವಿ’ ಅಂದರೆ ಸ್ವೀಕಾರಾರ್ಹವಾದ ಮತ್ತು ಕಾನೂನುಬದ್ಧವಾದ ಎಂದು ಅರ್ಥ ಎಂದು ಮೋದಿ ವಿಶ್ಲೇಷಿಸಿದ್ದಾರೆ.

ದೆಹಲಿಯಲ್ಲಿ ಗುರುವಾರ ಜಾಗತಿಕ ಎಐ ಸಮ್ಮೇಳನದಲ್ಲಿ ಮಾತನಾಡಿದ ಮೋದಿ, ಮಾನವ ಕಲ್ಯಾಣದ ಉದ್ದೇಶದಿಂದ ಇಂಥದ್ದೊಂದು ದೂರದೃಷ್ಟಿಯನ್ನು ವಿಶ್ವದ ಮುಂದಿಟ್ಟಿದ್ದಾರೆ. ಇದೇ ವೇಳೆ ಕೃತಕಬುದ್ಧಿಮತ್ತೆಯನ್ನು ಜವಾಬ್ದಾರಿಯುತ ಮತ್ತು ನೈತಿಕವಾಗಿ ಬಳಸುವ ಸಂಬಂಧ ಮೂರು ಪ್ರಮುಖ ಸಲಹೆಗಳನ್ನೂ ಅವರು ಇದೇ ವೇಳೆ ನೀಡಿದ್ದಾರೆ. ಡೇಟಾ ಸಾರ್ವಭೌಮತ್ವ, ಪಾರದರ್ಶಕ ಸುರಕ್ಷತಾ ಮಾನದಂಡಗಳು ಮತ್ತು ತಂತ್ರಜ್ಞಾನವನ್ನು ನಿಯಂತ್ರಿಸುವ ಕುರಿತು ಸ್ಪಷ್ಟ ಮಾನವ ಕೇಂದ್ರಿತ ನಿಯಮಾವಳಿಗಳ ಅಗತ್ಯಗಳನ್ನು ಅವರು ಪ್ರತಿಪಾದಿಸಿದ್ದಾರೆ. ಹೀಗಾದಾಗ ಮಾತ್ರ ಎಐ ಅನ್ನು ಮಾನವ ಕಲ್ಯಾಣಕ್ಕೆ ಸಮರ್ಥವಾಗಿ ಬಳಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.ಕೆಲ ದೇಶಗಳು ಎಐ ಅನ್ನು ಗೌಪ್ಯವಾಗಿ ಮತ್ತು ಆಂತರಿಕವಾಗಿ ಅಭಿವೃದ್ಧಿಪಡಿಸಬೇಕೆಂದು ಬಯಸುತ್ತವೆ. ಆದರೆ, ‘ಸರ್ವೇ ಜನ ಹಿತಾಯ, ಸರ್ವೇ ಜನ ಸುಖಾಯ’ ಎಂಬ ಸಿದ್ಧಾಂತದೊಂದಿಗೆ ಎಐ ತಂತ್ರಜ್ಞಾನ ಮುನ್ನಡೆಯಬೇಕೆಂಬುದು ಭಾರತದ ನಿಲುವು. ಎಐ ಅನ್ನು ಹಂಚಿಕೊಂಡಾಗ ಮತ್ತು ಅದರ ಕೋಡ್‌ಗಳು ಎಲ್ಲರಿಗೂ ಮುಕ್ತವಾಗಿ ಲಭ್ಯವಾದಾಗ ಮಾತ್ರ ಅದು ನೈಜವಾಗಿ ವಿಶ್ವದ ಕಲ್ಯಾಣಕ್ಕಾಗಿ ಕೆಲಸ ಮಾಡಲಿದೆ ಎಂಬುದು ನಮ್ಮ ನಂಬಿಕೆ. ಎಐ ಎಲ್ಲರಿಗೂ ಲಭ್ಯವಾದಾಗ ಮಾತ್ರ ಕೋಟ್ಯಂತರ ಯುವಬುದ್ಧಿವಂತರು ಅವುಗಳನ್ನು ಇನ್ನಷ್ಟು ಸುಧಾರಣೆ ಮಾಡಲು ಸಾಧ್ಯವಿದೆ ಎಂದು ಮೋದಿ ಹೇಳಿದ್ದಾರೆ.

ನಾವು ಕಚ್ಚಾಸರಕು ಆಗಬಾರದು:ಎಐ ವಿಕಾಸದ ಹಾದಿಯಲ್ಲಿ ಮನುಷ್ಯ ಕೇವಲ ಡೇಟಾ ಪಾಯಿಂಟ್‌ ಅಥವಾ ಕಚ್ಚಾ ಸರಕು ಎಂಬಂತಾಗಬಾರದು. ಹೀಗಾಗಿ ಎಐ ಅನ್ನು ಎಲ್ಲರಿಗೂ ಲಭ್ಯವಾಗುವಂತೆ ನೋಡಿಕೊಳ್ಳಬೇಕಿದೆ. ಅದರಲ್ಲೂ ಮುಖ್ಯವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಾಲಿಗೆ ಎಐ ತಂತ್ರಜ್ಞಾನವು ಎಲ್ಲರನ್ನೂ ಒಳಗೊಳ್ಳುವ ಮತ್ತು ಸಶಕ್ತೀಕರಣದ ಮಾಧ್ಯಮವಾಗಬೇಕು ಎಂದಿದ್ದಾರೆ.

ಇದೇ ಕಾರಣಕ್ಕೆ ಎಂಎಎನ್‌ಎವಿ(ಮಾನವ್‌-ಮನುಷ್ಯ) ಎಂಬ ವಿಷನ್‌ ಅನ್ನು ನಾನು ಎಲ್ಲರ ಮುಂದಿಡುತ್ತಿದ್ದೇನೆ. ಎಐ ಎಂಬುದು ಪರಿವರ್ತನೆಯ ಶಕ್ತಿ. ಇದು ತನ್ನ ಉದ್ದೇಶದಿಂದ ದೂರವುಳಿದರೆ ವಿನಾಶಕ್ಕೆ ಕಾರಣವಾಗಬಹುದು, ಸರಿಯಾಗಿ ಬಳಸಿದರೆ ಪರಿಹಾರಗಳನ್ನು ಕಲ್ಪಿಸಬಹುದು. 21ನೇ ಶತಮಾನದ ಎಐ ನಿರ್ದೇಶಿತ ಜಗತ್ತಿನಲ್ಲಿ ಮಾನವ ಕಲ್ಯಾಣಕ್ಕೆ ಈ ನಮ್ಮ ‘ಮಾನವ್‌’ ದೃಷ್ಟಿಕೋನವು ಮಹತ್ವದ ಕೊಂಡಿಯಾಗಿ ಕೆಲಸ ಮಾಡಲಿದೆ ಎಂದು ಇದೇ ವೇಳೆ ಮೋದಿ ತಿಳಿಸಿದ್ದಾರೆ.==ಭಾರತ ಹೆದರಲ್ಲ, ಬದಲಾಗಿಅವಕಾಶವಾಗಿ ನೋಡುತ್ತಿದೆ

ಎಐ ಅನ್ನು ಎರಡು ರೀತಿಯಲ್ಲಿ ನೋಡುವ ಜನರಿದ್ದಾರೆ. ಕೆಲವರಿಗೆ ಇದು ಆತಂಕದಂತೆ ಕಂಡರೆ, ಇನ್ನು ಕೆಲವರಿಗೆ ಎಐನಲ್ಲಿ ಭವಿಷ್ಯ ಕಾಣುತ್ತದೆ. ಭಾರತವು ಪ್ರತಿಭೆ, ಇಂಧನ ಸಾಮರ್ಥ್ಯ ಮತ್ತು ನೀತಿಯ ಸ್ಪಷ್ಟತೆಯ ಸ್ಪಷ್ಟ ಬೆಂಬಲದೊಂದಿಗೆ ಎಐನಲ್ಲಿ ಭವಿಷ್ಯವನ್ನು ಕಾಣುತ್ತಿದೆ. ಭಾರತವು ಎಐಗೆ ಹೆದರಲ್ಲ, ಬದಲಾಗಿ ಎಐನಲ್ಲಿ ಭವಿಷ್ಯದ ನೀಲನಕ್ಷೆಯನ್ನು ನೋಡುತ್ತಿದೆ.---

ಆಗಸದೆತ್ತರಕ್ಕೆ ಹಾರಲು ಬಿಡಬೇಕುಆದ್ರೆ ದಾರ ನಮ್ಮ ಕೈಯಲ್ಲೇ ಇರ್ಬೇಕು

ಎಐಗೆ ಮುಕ್ತವಾಗಿ ಹಾರಾಡಲು ಬಿಡಬೇಕು ಆದರೆ ಅದರ ದಾರ ಅಂದರೆ ನಿಯಂತ್ರಣ ಮಾತ್ರ ಮನುಷ್ಯನ ಕೈಯಲ್ಲೇ ಇರಬೇಕು ಎಂದು ಪ್ರತಿಪಾದಿಸಿದ ಮೋದಿ, ಇದಕ್ಕಾಗಿ ಜಿಪಿಎಸ್‌ನ ಉದಾಹರಣೆಯನ್ನೂ ನೀಡಿದರು. ನ್ಯಾವಿಗೇಷನ್‌ ಟೂಲ್ಸ್‌ಗಳು ನೀವು ಯಾವ ದಾರಿಯಲ್ಲಿ ಹೋಗಬಹುದು ಎಂದು ಸಲಹೆಗಳನ್ನು ನೀಡುತ್ತವೆ. ಆದರೆ ಹೋಗುವ ದಾರಿಯನ್ನು ಆಯ್ಕೆ ಮಾಡುವ ಅಂತಿಮ ನಿರ್ಧಾರ ಬಳಕೆದಾರರನೇ ಮಾಡಬೇಕು ಎಂದರು. ನಾವು ಈಗ ಎಐ ಅನ್ನು ಯಾವ ದಿಕ್ಕಿನಲ್ಲಿ ಕರೆದೊಯ್ಯುತ್ತೇವೆಯೋ ಅದೇ ಮುಂದೆ ಭವಿಷ್ಯದ ಮಾರ್ಗವನ್ನು ನಿರ್ಧಾರ ಮಾಡಲಿದೆ ಎಂದು ತಿಳಿಸಿದರು.----

ಭಾರತ ಎಐ ಕ್ರಾಂತಿಯ ಸಣ್ಣಭಾಗ, ಆದ್ರೆ ನೇತೃತ್ವ ನಮ್ಮದೇ!

ಎಐ ನಮ್ಮ ವ್ಯವಸ್ಥೆಯನ್ನು ಇನ್ನಷ್ಟು ಸ್ಮಾರ್ಟ್‌, ಹೆಚ್ಚು ದಕ್ಷ ಹಾಗೂ ಪ್ರಭಾವಶಾಲಿ ಮಾಡುತ್ತದೆ. ಸೃಜನಶೀಲ ಪಾತ್ರ ನಿರ್ವಹಿಸುವವರಿಗೆ ಅವಕಾಶಗಳ ಬಾಗಿಲುಗಳನ್ನು ತೆರೆಯುತ್ತದೆ. ಎಐ ಎಂಬುದು ನಾವೀನ್ಯತೆ, ಉದ್ಯಮಶೀಲತೆ ಮತ್ತು ಹೊಸ ಉದ್ದಿಮೆಗಳ ಸೃಷ್ಟಿಗೆ ಒದಗಿದ ಅವಕಾಶ. ಕೃತಕ ಬುದ್ಧಿಮತ್ತೆಯು ಮಾನವ ಇತಿಹಾಸದಲ್ಲಿ ಬದಲಾವಣೆಯ ಹೊಸದೊಂದು ಅಧ್ಯಾಯವನ್ನು ತೆರೆದಿದೆ. ಭಾರತವು ಎಐ ಕ್ರಾಂತಿಯ ಸಣ್ಣ ಭಾಗ ನಿಜ. ಆದರೆ ಈ ಕ್ರಾಂತಿಯ ನೇತೃತ್ವವಹಿಸುವ ಮತ್ತು ಅದಕ್ಕೆ ರೂಪುರೇಷೆ ನೀಡುವ ಕೆಲಸವನ್ನು ಭಾರತ ಮಾಡುತ್ತಿದೆ.