ಮೆಲ್ಬರ್ನ್: ದಾಖಲೆಯ 25ನೇ ಗ್ರ್ಯಾನ್‌ಸ್ಲಾಂ ಟ್ರೋಫಿ ಮೇಲೆ ಕಣ್ಣಿಟ್ಟಿದ್ದ ದಿಗ್ಗಜ ಟೆನಿಸಿಗ ನೋವಾಕ್ ಜೋಕೋವಿಚ್‌ರ ಕನಸಿನ ಓಟಕ್ಕೆ ಬ್ರೇಕ್ ಬಿದ್ದಿದೆ. 10 ಬಾರಿ ಚಾಂಪಿಯನ್, ವಿಶ್ವ ನಂ.1 ಜೋಕೋವಿಚ್ ಶುಕ್ರವಾರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಆಘಾತಕಾರಿ ಸೋಲನುಭವಿಸಿದ್ದಾರೆ.
ಸರ್ಬಿಯಾದ ಜೋಕೋ ಅಂತಿಮ 4ರ ಘಟ್ಟದ ಪಂದ್ಯದಲ್ಲಿ 4ನೇ ಶ್ರೇಯಾಂಕಿತ, ಇಟಲಿಯ ಯುವ ತಾರೆ ಯಾನಿಕ್ ಸಿನ್ನರ್ ವಿರುದ್ಧ 6-1, 6-2, 6-7(6), 6-3 ಅಂತರದಲ್ಲಿ ಸೋಲನುಭವಿಸಿದರು. ಆರಂಭಿಕ 2 ಸೆಟ್‌ಗಳ ಹಿನ್ನಡೆ ಬಳಿಕ ಜೋಕೋ ಪುಟಿದೆದ್ದು 3ನೇ ಸೆಟ್ ತಮ್ಮದಾಗಿಸಿಕೊಂಡರೂ, 22ರ ಸಿನ್ನರ್ ವಿರುದ್ಧ ಪಂದ್ಯ ಗೆಲ್ಲಲಾಗಲಿಲ್ಲ. ಇದರೊಂದಿಗೆ ಆಸ್ಟ್ರೇಲಿಯನ್ ಓಪನ್ ಸೆಮೀಸ್‌ನಲ್ಲಿ ಇದೇ ಮೊದಲ ಬಾರಿ ಸೋಲುಂಡರು. ಈ ಮೊದಲು ಸೆಮೀಸ್‌ಗೇರಿದ್ದ 10 ಬಾರಿಯೂ ಫೈನಲ್‌ಗೇರಿ ಪ್ರಶಸ್ತಿ ಗೆದ್ದಿದ್ದರು. ಜೊತೆಗೆ ಟೂರ್ನಿಯಲ್ಲಿ 33 ಪಂದ್ಯಗಳ ಅಜೇಯ ಓಟಕ್ಕೂ ಬ್ರೇಕ್ ಬಿತ್ತು. ಸಿನ್ನರ್ ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ಗೇರಿದ್ದಾರೆ.ಮೆಡ್ವೆಡೆವ್ ಪ್ರಶಸ್ತಿ ಸುತ್ತಿಗೆ: ಮತ್ತೊಂದು ಸೆಮೀಸ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ 3ನೇ ಶ್ರೇಯಾಂಕಿತ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ರೋಚಕ ಗೆಲುವು ಸಾಧಿಸಿ, 3ನೇ ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೇರಿದರು. 2021, 2022ರ ರನ್ನರ್-ಅಪ್ ಮೆಡ್ವೆಡೆವ್ 5-7, 3-6, 7-6(7/4), 7-6(7/5), 6-3 ಸೆಟ್‌ಗಳಲ್ಲಿ ರೋಚಕವಾಗಿ ಜಯಭೇರಿ ಬಾರಿಸಿದರು. ಇದರೊಂದಿಗೆ ಜ್ವೆರೆವ್‌ರ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಫೈನಲ್ ಕನಸು ಭಗ್ನಗೊಂಡಿತು. ಭಾನುವಾರ ಫೈನಲ್‌ನಲ್ಲಿ ಸಿನ್ನರ್ ಹಾಗೂ ಮೆಡ್ವೆಡೆವ್ ಚೊಚ್ಚಲ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.-18 ವರ್ಷದಲ್ಲೇ ‘ಬಿಗ್ 3’ಇಲ್ಲದ ಮೊದಲ ಫೈನಲ್
2005ರ ಬಳಿಕ ಇದೇ ಮೊದಲ ಬಾರಿ ‘ಬಿಗ್ 3’ ಖ್ಯಾತಿಯ ರೋಜರ್ ಫೆಡರರ್, ರಾಫೆಲ್ ನಡಾಲ್, ಜೋಕೋವಿಚ್ ಇಲ್ಲದೆ ಆಸ್ಟ್ರೇಲಿಯನ್ ಓಪನ್ ಫೈನಲ್ ಪಂದ್ಯ ನಡೆಯಲಿದೆ. 2005ರಲ್ಲಿ ರಷ್ಯಾದ ಮಾರಟ್ ಸಫಿನ್-ಆಸ್ಟ್ರೇಲಿಯಾದ ಗ್ಲಿನ್ ಹೆವಿಡ್ ನಡುವೆ ಫೈನಲ್ ನಡೆದಿತ್ತು. ಆ ಬಳಿಕ ಪ್ರತಿ ಫೈನಲ್‌ನಲ್ಲಿ ಫೆಡರರ್, ನಡಾಲ್ ಅಥವಾ ಜೋಕೋ ಈ ಮೂವರಲ್ಲಿ ಒಬ್ಬರು ಆಡಿದ್ದರು.-ಇಂದು ಮಹಿಳಾ ಸಿಂಗಲ್ಸ್,
ಪುರುಷರ ಡಬಲ್ಸ್ ಫೈನಲ್ಇಂದು ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರೈನಾ ಸಬಲೆಂಕಾ ಹಾಗೂ ಚೀನಾದ ಕಿನ್ವಿನ್ ಝೆಂಗ್ ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಪುರುಷರ ಡಬಲ್ಸ್ ಫೈನಲ್‌ನಲ್ಲಿ ಭಾರತದ ರೋಹನ್ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ಗೆ ಇಟಲಿಯ ಬೊಲೆಲ್ಲಿ-ಆ್ಯಂಡ್ರಿಯಾ ವವಸ್ಸೊರಿ ಸವಾಲು ಎದುರಾಗಲಿದೆ.