ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌ಗೆ ಜೋಕೋವಿಚ್‌ ಎಂಟ್ರಿ

KannadaprabhaNewsNetwork | Published : Jan 24, 2024 2:02 AM

ಸಾರಾಂಶ

ವಿಶ್ವ ನಂ.1 ಜೋಕೋವಿಚ್‌ ಗ್ರ್ಯಾನ್‌ಸ್ಲಾಂನಲ್ಲಿ ದಾಖಲೆಯ 48ನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಅಂತಿಮ 4ರ ಘಟ್ಟದಲ್ಲಿ ಜೋಕೋ ಇಟಲಿಯ 4ನೇ ಶ್ರೇಯಾಂಕಿತ ಜಾನಿಕ್‌ ಸಿನ್ನರ್‌ ವಿರುದ್ಧ ಸೆಣಸಲಿದ್ದಾರೆ.

ಮೆಲ್ಬರ್ನ್‌: ವಿಶ್ವ ನಂ.1 ಟೆನಿಸಿಗ ನೋವಾಕ್‌ ಜೋಕೋವಿಚ್‌ 25ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲುವಿನತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಆಸ್ಟ್ರೇಲಿಯನ್ ಓಪನ್‌ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಸರ್ಬಿಯಾದ ಜೋಕೋ ದಾಖಲೆಯ 11ನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಮಂಗಳವಾರ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ 10 ಬಾರಿ ಚಾಂಪಿಯನ್ ಜೋಕೋ, ಅಮೆರಿಕದ 12ನೇ ಶ್ರೇಯಾಂಕಿತ ಟೇಲರ್‌ ಫ್ರಿಟ್ಜ್‌ ವಿರುದ್ಧ 7-6(7/3), 4-6, 6-2, 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಇದರೊಂದಿಗೆ ಜೋಕೋ ಗ್ರ್ಯಾನ್‌ಸ್ಲಾಂನಲ್ಲಿ ದಾಖಲೆಯ 48ನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಅಂತಿಮ 4ರ ಘಟ್ಟದಲ್ಲಿ ಜೋಕೋ ಇಟಲಿಯ 4ನೇ ಶ್ರೇಯಾಂಕಿತ ಜಾನಿಕ್‌ ಸಿನ್ನರ್‌ ವಿರುದ್ಧ ಸೆಣಸಲಿದ್ದಾರೆ.ಸಬಲೆಂಕಾ, ಗಾಫ್‌ಗೆ ಜಯ: ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್‌ ಅರೈನಾ ಸಬಲೆಂಕಾ, ಹಾಲಿ ಯುಎಸ್‌ ಓಪನ್‌ ಚಾಂಪಿಯನ್‌ ಕೊಕೊ ಗಾಫ್‌ ಸೆಮೀಸ್‌ಗೇರಿದರು. ಕ್ವಾರ್ಟರ್‌ನಲ್ಲಿ 4ನೇ ಶ್ರೇಯಾಂಕಿತ ಗಾಫ್‌, ಉಕ್ರೇನ್‌ನ ಮಾರ್ಟಾ ಕೊಸ್ಟ್ಯುಕ್‌ ವಿರುದ್ಧ ಗೆದ್ದರೆ, ಸಬಲೆಂಕಾ ಅವರು ಮಾಜಿ ಫ್ರೆಂಚ್‌ ಓಪನ್‌ ಚಾಂಪಿಯನ್‌, ಬಾರ್ಬೊರಾ ಕ್ರೆಜಿಕೋವಾ ವಿರುದ್ಧ ಜಯಗಳಿಸಿದರು.ಸಾತ್ವಿಕ್‌-ಚಿರಾಗ್‌ ಶೆಟ್ಟಿ ಮತ್ತೆ ವಿಶ್ವ ನಂಬರ್‌ 1

ನವದೆಹಲಿ: ಭಾರತದ ತಾರಾ ಪುರುಷ ಡಬಲ್ಸ್ ಜೋಡಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಬಿಡಬ್ಲ್ಯುಎಫ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದೆ. ಸಾತ್ವಿಕ್-ಚಿರಾಗ್‌ ಈ ತಿಂಗಳು ಮಲೇಷ್ಯಾ ಓಪನ್‌, ಇಂಡಿಯಾ ಓಪನ್‌ನಲ್ಲಿ ರನ್ನರ್‌-ಅಪ್‌ ಆಗಿದ್ದು, ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 1 ಸ್ಥಾನ ಮೇಲಕ್ಕೇರಿ ಅಗ್ರಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಏಷ್ಯನ್‌ ಗೇಮ್ಸ್‌ನಲ್ಲಿ ಚಾಂಪಿಯನ್‌ ಆದ ಬಳಿಕ ಸಾತ್ವಿಕ್‌-ಚಿರಾಗ್‌ ಮೊದಲ ಬಾರಿ ನಂ.1 ಸ್ಥಾನಕ್ಕೇರಿದ್ದರು. ಇದೇ ವೇಳೆ ಪುರುಷರ ಸಿಂಗಲ್ಸ್‌ ರ್‍ಯಾಂಕಿಂಗ್‌ನಲ್ಲಿ ಎಚ್‌.ಎಸ್‌.ಪ್ರಣಯ್‌ 1 ಸ್ಥಾನ ಪ್ರಗತಿ ಸಾಧಿಸಿ 8ನೇ ಸ್ಥಾನಕ್ಕೇರಿದ್ದು, ಲಕ್ಷ್ಯ ಸೇನ್‌, ಕಿದಂಬಿ ಶ್ರೀಕಾಂತ್‌, ಪ್ರಿಯಾನ್ಶು ರಾಜಾವತ್‌ ಕ್ರಮವಾಗಿ 19, 25 ಮತ್ತು 30ನೇ ಸ್ಥಾನಗಳಲ್ಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು 11ನೇ ಸ್ಥಾನದಲ್ಲಿದ್ದಾರೆ.

Share this article