ಸೇಂಟ್ ವಿನ್ಸೆಂಟ್: ನೆದರ್‌ಲೆಂಡ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 25 ರನ್ ಗೆಲುವು ಸಾಧಿಸಿದ ಬಾಂಗ್ಲಾದೇಶ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಸೂಪರ್-8 ಸನಿಹಕ್ಕೆ ತಲುಪಿದೆ. ಬಾಂಗ್ಲಾ ಟೂರ್ನಿಯಲ್ಲಿ ಆಡಿರುವ 3 ಪಂದ್ಯಗಳ್ಲಲಿ 2ನೇ ಗೆಲುವು ದಾಖಲಿಸಿದ್ದು ‘ಡಿ’ ಗುಂಪಿನಲ್ಲಿ 4 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ.
ನೆದರ್‌ಲೆಂಡ್ಸ್ 3 ಪಂದ್ಯಗಳಲ್ಲಿ 2 ಅಂಕದೊಂದಿಗೆ 3ನೇ ಸ್ಥಾನದಲ್ಲೇ ಬಾಕಿಯಾಗಿದೆ. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 20 ಓವರಲ್ಲಿ 5 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. 23 ರನ್‌ಗೆ 2 ವಿಕೆಟ್ ಕಳೆದುಕೊಂಡರೂ, ಶಕೀಬ್ ಅಲ್ ಹಸನ್ ಹಾಗೂ ತಂಜೀದ್ ಹಸನ್ ತಂಡವನ್ನು ಮೇಲಕ್ಕೆತ್ತಿದರು.
ತಂಜೀದ್ 35 ರನ್‌ಗೆ ವಿಕೆಟ್ ಒಪ್ಪಿಸಿದರೆ, ಕೊನೆವರೆಗೂ ಕ್ರೀಸ್‌ನಲ್ಲಿ ನಿಂತು ಹೋರಾಡಿದ ಶಕೀಬ್ 46 ಎಸೆತಗಳಲ್ಲಿ ಔಟಾಗದೆ 64 ರನ್ ಸಿಡಿಸಿದರು. ಮಹ್ಮೂದುಲ್ಲಾ 25, ಜಾಕರ್ ಅಲಿ ಔಟಾಗದೆ 14 ರನ್ ಗಳಿಸಿ ತಂಡವನ್ನು 150ರ ಗಡಿ ದಾಟಿಸಿದರು.ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ನೆದರ್‌ಲೆಂಡ್ಸ್, 20 ಓವರಲ್ಲಿ 8 ವಿಕೆಟ್‌ಗೆ 134 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪವರ್-ಪ್ಲೇನಲ್ಲಿ ಕೇವಲ 36 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಿತ್ತ ಬಾಂಗ್ಲಾ, ಡಚ್ ಪಡೆಯನ್ನು ಸುಲಭವಾಗಿ ಸೋಲಿಸಿತು.
ತಂಡದ ಪರ ಸೈಬ್ರಂಡ್ 33, ವಿಕ್ರಂಜಿತ್ ಸಿಂಗ್ 26, ನಾಯಕ ಎಡ್ವರ್ಡ್ಸ್ 25 ರನ್ ಗಳಿಸಿದರು. ರಿಶಾದ್ ಹೊಸೈನ್ 33 ರನ್‌ಗೆ 3 ವಿಕೆಟ್ ಕಬಳಿಸಿದರು.ಸ್ಕೋರ್: ಬಾಂಗ್ಲಾದೇಶ 20 ಓವರಲ್ಲಿ 159/9 (ಶಕೀಬ್ 64*, ತಂಜೀದ್ 35, ಮೀಕೆರನ್ 2-15, ಆರ್ಯನ್ 2-17), ನೆದರ್‌ಲೆಂಡ್ಸ್ 20 ಓವರಲ್ಲಿ 134/8 (ಸೈಬ್ರಂಡ್ 33, ವಿಕ್ರಂಜಿತ್ 26, ರಿಶಾದ್ 3-33)