ನವದೆಹಲಿ : ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬಳಿ ಈಗ ಬರೋಬ್ಬರಿ 30 ಸಾವಿರ ಕೋಟಿ ರು. ನಿಧಿ ಇದೆ, ಅದರಿಂದ ಪ್ರತಿ ವರ್ಷ 1000 ಕೋಟಿ ರು. ಬಡ್ಡಿ ಗಳಿಸುತ್ತಿದೆ ಎಂಬ ಅಚ್ಚರಿಯ ಸಂಗತಿ ಹೊರಬಿದ್ದಿದೆ. ಈ ಬಗ್ಗೆ ರೆಡಿಫ್ಯೂಷನ್ ಸಂಸ್ಥೆ ವರದಿ ಮಾಡಿದ್ದು, ಬಿಸಿಸಿಐ 2023-24ರ ಆರ್ಥಿಕ ವರ್ಷದಲ್ಲಿ 9742 ಕೋಟಿ ರು. ಆದಾಯ ಗಳಿಸಿದೆ ಎಂದು ಉಲ್ಲೇಖಿಸಿದೆ.
ಬಿಸಿಸಿಐ ತನ್ನ ಹೆಚ್ಚಿನ ಆದಾಯವನ್ನು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮೂಲಕವೇ ಗಳಿಸುತ್ತದೆ. 2008ರಲ್ಲಿ ಆರಂಭಗೊಂಡಿದ್ದ ಐಪಿಎಲ್ ಈಗ ಬಿಸಿಸಿಐ ಪಾಲಿನ ಚಿನ್ನದ ಮೊಟ್ಟೆ ಇಡುವ ಕೋಳಿ ಎನಿಸಿಕೊಂಡಿದ್ದು, ಲೀಗ್‌ನಿಂದ 2023-24ರಲ್ಲಿ ಮಂಡಳಿಗೆ ₹5761 ಕೋಟಿ ಆದಾಯ ಲಭಿಸಿದೆ ಎಂದು ವರದಿಯಾಗಿದೆ. ಇದು ಬಿಸಿಸಿಐ ಆದಾಯದ ಶೇಕಡಾ 59ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು, ಐಸಿಸಿಯಿಂದಲೂ ಬಹುಪಾಲು ಮೊತ್ತ ಬಿಸಿಸಿಐಗೆ ಲಭಿಸುತ್ತದೆ. ಐಪಿಎಲ್ ಅಲ್ಲದ ಟೂರ್ನಿಗಳ ಮಾಧ್ಯಮ ಪ್ರಾಯೋಜಕತ್ವದಲ್ಲಿ ಬಿಸಿಸಿಐ ₹361 ಕೋಟಿ ಗಳಿಸಿದೆ. ಮಹಿಳಾ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನಿಂದ ₹378 ಕೋಟಿ ಆದಾಯ ಲಭಿಸಿದ್ದು, ಭಾರತದ ಪುರುಷರ ಕ್ರಿಕೆಟ್ ತಂಡದ ಸರಣಿಗಳ ಮೂಲಕ ₹350 ಕೋಟಿಗೂ ಹೆಚ್ಚು ಲಾಭವಾಗಿದೆ. ಬಡ್ಡಿ ಮೂಲಕ ₹987 ಕೋಟಿ, ಇತರ ಮೂಲಗಳಿಂದ ₹400ಕ್ಕೂ ಹೆಚ್ಚು ಕೋಟಿ ಆದಾಯ 2023-24ರಲ್ಲಿ ಬಿಸಿಸಿಐಗೆ ಲಭಿಸಿದೆ ಎಂದು ವರದಿಯಾಗಿದೆ.---₹30000 ಕೋಟಿಗೆ
1000 ಕೋಟಿ ಬಡ್ಡಿ!
ಐಪಿಎಲ್ ಅಲ್ಲದೆ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಅಥವಾ ಸಿ.ಕೆ.ನಾಯ್ಡು ಟ್ರೋಫಿಯಂತಹ ದೇಸಿ ಟೂರ್ನಿಗಳನ್ನು ವಾಣಿಜ್ಯೀಕರಿಸುವ ಮೂಲಕ ಬಿಸಿಸಿಐ ಅಪಾರ ಆದಾಯ ಗಳಿಸುವ ಸಾಮರ್ಥ್ಯ ಹೊಂದಿದೆ ಎಂದು ರೆಡಿಫ್ಯೂಷನ್ ಮುಖ್ಯಸ್ಥ ಸಂದೀಪ್ ಗೋಯಲ್ ತಿಳಿಸಿದ್ದಾರೆ. ಮಂಡಳಿಯು ಸುಮಾರು ₹30000 ಕೋಟಿ ಮೀಸಲು ಹಣವನ್ನು ಹೊಂದಿದೆ. ಇದರಿಂದಲೇ ಬಿಸಿಸಿಐಗೆ ವರ್ಷಕ್ಕೆ ಸುಮಾರು ₹1000 ಕೋಟಿ ಬಡ್ಡಿ ಮೊತ್ತ ಬರುತ್ತದೆ. ಇದು ವಾರ್ಷಿಕವಾಗಿ 10ರಿಂದ 12 ಶೇಕಡಾ ಹೆಚ್ಚಳವಾಗುತ್ತದೆ ಎಂದು ಅವರು ಹೇಳಿದ್ದಾರೆ.
9742 ಕೋಟಿ ರು.: 2023-24ರಲ್ಲಿ ಬಿಸಿಸಿಐ ಗಳಿಸಿದ ವಾರ್ಷಿಕ ಆದಾಯ
5761 ಕೋಟಿ ರು.: ಐಪಿಎಲ್ ಟೂರ್ನಿಯೊಂದರಿಂದಲೇ ಬಂದ ಆದಾಯ
361 ಕೋಟಿ ರು.: ಐಪಿಎಲ್ ಅಲ್ಲದ ಟೂರ್ನಿಗಳಿಂದ ಸಿಗುತ್ತಿರುವ ಆದಾಯ5000 ಕೋಟಿ ರು.: ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ವಾರ್ಷಿಕ ಸಂಪಾದನೆ
4000 ಕೋಟಿ ರು.: ಐಸಿಸಿ ಗಳಿಕೆಗೆ ಬಿಸಿಸಿಐ ನೀಡುವ ಪಾಲು
ಬಿಸಿಸಿಐಗೆ ಹೇಗೆ
ಬರುತ್ತೆ ಆದಾಯ?ಬಿಸಿಸಿಐ ತನ್ನ ಬಹುಪಾಲು ಆದಾಯವನ್ನು ಐಪಿಎಲ್ ಮೂಲಕವೇ ಗಳಿಸುತ್ತದೆ. ಐಪಿಎಲ್ ತಂಡಗಳ ಮಾರಾಟ, ಮಾಧ್ಯಮ ಹಕ್ಕು, ಜಾಹೀರಾತುಗಳಿಂದ ಬಹುಕೋಟಿ ಆದಾಯ ಬಿಸಿಸಿಐಗೆ ಬರುತ್ತದೆ. ಉಳಿದಂತೆ ಕಿಟ್ ಪ್ರಾಯೋಜಕತ್ವ, ಶೀರ್ಷಿಕೆ ಪ್ರಾಯೋಜಕತ್ವ, ಭಾರತ ತಂಡದ ಸರಣಿ ಆಯೋಜನೆ, ದೇಸಿ ಟೂರ್ನಿ, ಡಬ್ಲ್ಯುಪಿಎಲ್ ಹಾಗೂ ಇತರ ಮೂಲಗಳಿಂದಲೂ ಮಂಡಳಿಗೆ ಹಣ ಹರಿದುಬರುತ್ತಿದೆ.-ಐಸಿಸಿಗಿಂತ ಬಿಸಿಸಿಐ
ಆದಾಯವೇ ಹೆಚ್ಚು!
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಕೂಡಾ ಭಾರತೀಯ ಕ್ರಿಕೆಟ್ ಮಂಡಳಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ವಿಶೇಷವೆಂದರೆ ಐಸಿಸಿಗಿಂತ ಬಿಸಿಸಿಐ ವಾರ್ಷಿಕವಾಗಿ ಹೆಚ್ಚಿನ ಆದಾಯ ಗಳಿಸುತ್ತದೆ. ಜಾಗತಿಕ ಕ್ರಿಕೆಟ್‌ನ ಆರ್ಥಿಕತೆಯಲ್ಲಿ ಭಾರತ ಕೊಡುಗೆ ಶೇ.70ರಿಂದ 80ರಷ್ಟಿದೆ. ಅಂದರೆ ವಾರ್ಷಿಕವಾಗಿ ₹5000 ಕೋಟಿಗೂ ಹೆಚ್ಚಿನ ಹಣ ಸಂಪಾದಿಸುವ ಐಸಿಸಿ, 4000 ಕೋಟಿಯಷ್ಟು ಮೊತ್ತವನ್ನು ಬಿಸಿಸಿಐ ಮೂಲಕವೇ ಗಳಿಸುತ್ತದೆ. ಇದಕ್ಕೆ ಪ್ರತಿಯಾಗಿ ವಾರ್ಷಿಕವಾಗಿ ಐಸಿಸಿ ತನ್ನ ಸದಸ್ಯ ರಾಷ್ಟ್ರಗಳಿಗೆ ಹಂಚುವ ಆದಾಯದಲ್ಲಿ ಬಿಸಿಸಿಐ ಶೇ.38.5ರಷ್ಟು ಪಾಲು ಪಡೆಯುತ್ತದೆ.