ರಣಜಿ ಆಡಿದ್ರಷ್ಟೇ ಐಪಿಎಲ್‌ಗೆ?

KannadaprabhaNewsNetwork |  
Published : Feb 14, 2024, 02:20 AM ISTUpdated : Feb 14, 2024, 03:24 PM IST
ಇಶಾನ್‌ ಕಿಶನ್ ಸಾಂದರ್ಭಿಕ  ಚಿತ್ರ | Kannada Prabha

ಸಾರಾಂಶ

ದೇಸಿ ಕ್ರಿಕೆಟ್‌ ಕಡೆಗೆ ಯುವಕರ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಲು ಬಿಸಿಸಿಐ ಯೋಜನೆ ರೂಪಿಸುತ್ತಿದ್ದು, ವರ್ಷದಲ್ಲಿ ಕನಿಷ್ಠ 3-4 ರಣಜಿ ಪಂದ್ಯ ಆಡದಿದ್ದರೆ ಐಪಿಎಲ್‌ನಲ್ಲೂ ಆಡುವಂತಿಲ್ಲ ಎಂಬ ನಿಬಂಧನೆ ವಿಧಿಸುವ ಸಾಧ್ಯತೆ ಇದೆ.

ನವದೆಹಲಿ: ದೇಸಿ ಕ್ರಿಕೆಟ್‌ ಕಡೆಗೆ ಇಶಾನ್‌ ಕಿಶನ್‌ ಸೇರಿ ಹಲವು ಯುವ ಆಟಗಾರರು ಅಸಡ್ಡೆ ತೋರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಇದಕ್ಕೆ ಕಡಿವಾಣ ಹಾಕಲು ಹೊಸ ಯೋಜನೆ ರೂಪಿಸುತ್ತಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. 

ವರ್ಷದಲ್ಲಿ ಕನಿಷ್ಠ 3ರಿಂದ 4 ರಣಜಿ ಟ್ರೋಫಿ ಪಂದ್ಯಗಳನ್ನು ಆಡದಿರಷ್ಟೇ ಐಪಿಎಲ್‌ನಲ್ಲಿ ಆಡಲು ಅನುಮತಿ ನೀಡುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.

ಕಿಶನ್‌ಗೆ ಫೆ.16ರಿಂದ ಆರಂಭಗೊಳ್ಳಲಿರುವ ರಾಜಸ್ಥಾನ ವಿರುದ್ಧದ ರಣಜಿ ಪಂದ್ಯದಲ್ಲಿ ಜಾರ್ಖಂಡ್‌ ತಂಡದ ಪರ ಆಡುವಂತೆ ಬಿಸಿಸಿಐ ಸೂಚನೆ ನೀಡಿದೆ ತಿಳಿದುಬಂದಿದ್ದು, ಇದೇ ರೀತಿ ಕಠಿಣ ನಿಯಮವನ್ನು ಜಾರಿ ಮಾಡಿದರಷ್ಟೇ ಯುವಕರನ್ನು ಹದ್ದುಬಸ್ತಿನಲ್ಲಿ ಇಡಲು ಸಾಧ್ಯ ಎನ್ನುವ ಅರಿವು ಬಿಸಿಸಿಐಗೆ ಆದಂತಿದೆ.

ಅತಿಯಾದ ಪ್ರಯಾಣದಿಂದ ದಣಿದಿದ್ದು ವಿಶ್ರಾಂತಿ ಬೇಕು ಎಂದು ದ.ಆಫ್ರಿಕಾ ಪ್ರವಾಸವನ್ನು ಅರ್ಧಕ್ಕೇ ಬಿಟ್ಟು ಬಂದಿದ್ದ ಇಶಾನ್‌ ಕಿಶನ್‌, ಕೆಲವೇ ದಿನಗಳಲ್ಲಿ ದುಬೈನಲ್ಲಿ ಪಾರ್ಟಿವೊಂದರಲ್ಲಿ ಕಾಣಿಸಿಕೊಂಡಿದ್ದರು. 

ಅಲ್ಲದೇ ಈಗ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ ಸೂಚಿಸಿದರೂ ಲೆಕ್ಕಿಸದೆ, ರಣಜಿ ಟ್ರೋಫಿಯಲ್ಲಿ ಆಡುವುದನ್ನು ಬಿಟ್ಟು ತಮ್ಮ ಐಪಿಎಲ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಜೊತೆ ಬರೋಡಾದಲ್ಲಿ ಅಭ್ಯಾಸ ನಡೆಸುತ್ತಿರುವುದು, ಬಿಸಿಸಿಐ ಬಾಸ್‌ಗಳ ಪಿತ್ತ ನೆತ್ತಿಗೇರುವಂತೆ ಮಾಡಿದೆ.‘ಪ್ರಥಮ ದರ್ಜೆ ಕ್ರಿಕೆಟ್‌ ಆಡದೆ ಕೇವಲ ಐಪಿಎಲ್‌ ಕಡೆಗೆ ಗಮನ ನೀಡುವ ಕ್ರಿಕೆಟಿಗರನ್ನು ಸರಿಯಾದ ದಾರಿಗೆ ತರುವ ಕೆಲಸ ಆಗಬೇಕಿದೆ. 

ಈ ನಿಟ್ಟಿನಲ್ಲಿ ಕ್ರಿಕೆಟ್‌ ಮಂಡಳಿಯು ಕನಿಷ್ಠ 3-4 ಪಂದ್ಯಗಳನ್ನು ಆಡುವುದು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದು, ಮುಂದಿನ ಋತುವಿನಿಂದ ಜಾರಿಗೆ ಬರಬಹುದು. 

ಒಂದು ವೇಳೆ ರಣಜಿ ಪಂದ್ಯಗಳನ್ನು ಆಡದಿದ್ದರೆ ಐಪಿಎಲ್‌ನಲ್ಲಿ ಆಡಲು ಅನುಮತಿ ನೀಡದಿರಲು, ಐಪಿಎಲ್‌ ಹರಾಜಿನಲ್ಲೇ ಪಾಲ್ಗೊಳ್ಳುವಂತಿಲ್ಲ ಎನ್ನುವ ನಿಯಮ ಜಾರಿಯಾಗಬಹುದು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಿಸಿಸಿಐನಿಂದಲೇ ಈ ನಿಯಮ ಜಾರಿಯಾಗಬೇಕು ಎನ್ನುವುದು ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಒತ್ತಾಯವೂ ಆಗಿದೆ. 

ಅಲ್ಲದೇ, ಕೆಲ ಆಟಗಾರರ ವರ್ತನೆ ಭಾರತ ತಂಡದ ಆಡಳಿತಕ್ಕೂ ಸಿಟ್ಟು ತರಿಸಿದ್ದು, ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡದೆ ಹೋದರೆ, ಮುಂಬರುವ ದಿನಗಳಲ್ಲಿ ಭಾರತ ಟೆಸ್ಟ್‌ ತಂಡಕ್ಕೆ ಅಗತ್ಯವಿರುವ ಆಟಗಾರರನ್ನು ಹುಡುಕುವುದೇ ದೊಡ್ಡ ಸವಾಲಾಗಿ ಪರಿಣಮಿಸಬಹುದು ಎನ್ನುವ ಆತಂಕ ಎದುರಾಗಿದೆ ಎಂದು ಭಾರತೀಯ ಕ್ರಿಕೆಟ್‌ ವಲಯದಲ್ಲಿ ಚರ್ಚೆಯಾಗುತ್ತಿದೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ