;Resize=(412,232))
ನವದೆಹಲಿ: 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಆಟಗಾರ್ತಿಯರ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 67 ಮಂದಿ 5 ತಂಡಗಳಿಗೆ ಬಿಕರಿಯಾದರು. ಭಾರತದ ತಾರಾ ಆಲ್ರೌಂಡರ್ ದೀಪ್ತಿ ಶರ್ಮಾ 3.2 ಕೋಟಿ ರು.ಗೆ ಯು.ಪಿ.ವಾರಿಯರ್ಸ್ ತಂಡವನ್ನು ಸೇರಿಕೊಂಡರು. ಕಳೆದ ವರ್ಷವೂ ಯು.ಪಿ. ತಂಡದಲ್ಲೇ ಆಡಿದ್ದ ದೀಪ್ತಿಯನ್ನು ಹರಾಜಿಗೂ ಮುನ್ನ ಫ್ರಾಂಚೈಸಿಯು ಕೈಬಿಟ್ಟಿತ್ತು. ಆದರೆ, ಗುರುವಾರ ಇಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ದೀಪ್ತಿ ತಮ್ಮ ವಾರಿಯರ್ಸ್ ತಂಡ ಕೂಡಿಕೊಂಡರು.
ಆರಂಭಿಕ ಹಂತದಲ್ಲಿ ಕೇವಲ ₹50 ಲಕ್ಷಕ್ಕೆ ಬಿಡ್ ಸಲ್ಲಿಸಿ ದೀಪ್ತಿಯನ್ನು ಡೆಲ್ಲಿ ತಂಡ ಖರೀದಿಸಿತ್ತು. ಆದರೆ ಯು.ಪಿ.ವಾರಿಯರ್ಸ್ ಆರ್‌ಟಿಎಂ ಕಾರ್ಡ್ ಬಳಕೆ ಮಾಡಿದಾಗ, ಡೆಲ್ಲಿ ಖರೀದಿ ಮೊತ್ತವನ್ನು 3.2 ಕೋಟಿ ರು.ಗೆ ಹೆಚ್ಚಿಸಿತು. ಆ ಮೊತ್ತವನ್ನು ತಾನೇ ಕೊಡಲು ಸಿದ್ಧವಿರುವುದಾಗಿ ತಿಳಿಸಿ ಯು.ಪಿ. ದೀಪ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು. ಇದರೊಂದಿಗೆ ದೀಪ್ತಿ, ಡಬ್ಲ್ಯುಪಿಎಲ್‌ನ 2ನೇ ಅತಿ ದುಬಾರಿ ಆಟಗಾರ್ತಿ ಎನಿಸಿದರು. ಸ್ಮೃತಿ ಮಂಧನಾ 3.6 ಕೋಟಿ ರು.ನೊಂದಿಗೆ ಅತಿ ದುಬಾರಿ ಆಟಗಾರ್ತಿ ಎನಿಸಿದ್ದಾರೆ.
ಇನ್ನು, ಆರ್‌ಸಿಬಿ 12 ಆಟಗಾರ್ತಿಯರನ್ನು ಖರೀದಿಸಿತು. ಹರಾಜಿನಲ್ಲಿ ಒಟ್ಟು 23 ವಿದೇಶಿ ಆಟಗಾರ್ತಿಯರು ಬಿಕರಿಯಾದರು. 5 ತಂಡಗಳು ಸೇರಿ ಒಟ್ಟಾರೆ 40.8 ಕೋಟಿ ರು. ಖರ್ಚು ಮಾಡಿದವು.
ಆಸ್ಟ್ರೇಲಿಯಾದ ನಾಯಕಿ, ತಾರಾ ಕ್ರಿಕೆಟರ್ ಅಲೀಸಾ ಹೀಲಿ ಹರಾಜಿನಲ್ಲಿ ಬಿಕರಿಯಾಗದೆ ಉಳಿದಿದ್ದು ಎಲ್ಲರಿಗೂ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತು.
ಹರಾಜಿನಿಲ್ಲಿ ಕರ್ನಾಟಕ 10 ಆಟಗಾರ್ತಿಯರು ಪಾಲ್ಗೊಂಡಿದ್ದರು. ಆದರೆ ಕೇವಲ ಇಬ್ಬರಷ್ಟೇ ಬಿಕರಿಯಾದರು. ರಾಜೇಶ್ವರಿ ಗಾಯಕ್ವಾಡ್ 40 ಲಕ್ಷ ರು.ಗೆ ಗುಜರಾತ್ ಜೈಂಟ್ಸ್ ಸೇರಿದರೆ, ಆರ್‌ಸಿಬಿ 10 ಲಕ್ಷ ರು. ನೀಡಿ ಪ್ರತ್ಯೂಷಾ ಕುಮಾರ್‌ರನ್ನು ಖರೀದಿ ಮಾಡಿತು.
ಟಾಪ್ 5 ದುಬಾರಿ ಆಟಗಾರ್ತಿಯರು
ಆಟಗಾರ್ತಿ ತಂಡ ಮೊತ್ತ (ಕೋಟಿ ರು.ಗಳಲ್ಲಿ)
ದೀಪ್ತಿ ಶರ್ಮಾ ಯು.ಪಿ. 3.2
ಅಮೇಲಿಯ ಕೆರ್ರ್ ಮುಂಬೈ 3
ಶಿಖಾ ಪಾಂಡೆ ಯು.ಪಿ. 2.4
ಸೋಫಿ ಡಿವೈನ್ ಗುಜರಾತ್ 2
ಮೆಗ್ ಲ್ಯಾನಿಂಗ್ ಯು.ಪಿ. 1.9