ಡರ್ಬನ್‌ ಕ್ರೀಡಾಂಗಣ ಶುಕ್ರವಾರ ಸಂಜು ಸ್ಯಾಮ್ಸನ್‌ ದರ್ಬಾರ್‌ : ಭರ್ಜರಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆ

ಸಾರಾಂಶ

ಇಲ್ಲಿನ ಡರ್ಬನ್‌ ಕ್ರೀಡಾಂಗಣ ಶುಕ್ರವಾರ ಸಂಜು ಸ್ಯಾಮ್ಸನ್‌ ದರ್ಬಾರ್‌ಗೆ ಸಾಕ್ಷಿಯಾಯಿತು. ಭರ್ಜರಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದ ಸ್ಯಾಮ್ಸನ್‌ ಸ್ಫೋಟಕ ಶತಕ ಸಿಡಿಸಿದ್ದು, ಸತತ 2 ಟಿ20 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಭಾರತ ಮೊದಲ ಬ್ಯಾಟರ್‌ ಎಂಬ ವಿಶೇಷ ದಾಖಲೆ ಬರೆದಿದ್ದಾರೆ.

ಡರ್ಬನ್: ಇಲ್ಲಿನ ಡರ್ಬನ್‌ ಕ್ರೀಡಾಂಗಣ ಶುಕ್ರವಾರ ಸಂಜು ಸ್ಯಾಮ್ಸನ್‌ ದರ್ಬಾರ್‌ಗೆ ಸಾಕ್ಷಿಯಾಯಿತು. ಭರ್ಜರಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದ ಸ್ಯಾಮ್ಸನ್‌ ಸ್ಫೋಟಕ ಶತಕ ಸಿಡಿಸಿದ್ದು, ಸತತ 2 ಟಿ20 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಭಾರತ ಮೊದಲ ಬ್ಯಾಟರ್‌ ಎಂಬ ವಿಶೇಷ ದಾಖಲೆ ಬರೆದಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯ ಭಾರತದ ಬ್ಯಾಟರ್‌ಗಳ ಪರಾಕ್ರಮಕ್ಕೆ ಸಾಕ್ಷಿಯಾಯಿತು. ಮೊದಲ ಓವರ್‌ನಲ್ಲೇ ಸ್ಫೋಟಕ ಆಟಕ್ಕೆ ಒತ್ತುಕೊಟ್ಟ ಭಾರತ ಪಂದ್ಯದಲ್ಲಿ ಕಲೆಹಾಕಿದ್ದು 202 ರನ್‌. ಇದರಲ್ಲಿ ಸಂಜು ಗಳಿಕೆ 107. ಅಭಿಷೇಕ್‌ ಜೊತೆ ಇನ್ನಿಂಗ್ಸ್‌ ಆರಂಭಿಸಿದ ಸಂಜು ಕೇವಲ 47 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ, 10 ಸಿಕ್ಸರ್‌ಗಳಿದ್ದವು.

ಸಂಜು ಇತ್ತೀಚೆಗೆ ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲೂ ಶತಕ ಬಾರಿಸಿದ್ದರು. ಈ ಮೂಲಕ ಸತತ 2 ಪಂದ್ಯಗಳಲ್ಲಿ ಶತಕ ಬಾರಿಸಿದ ವಿಶ್ವದ 4ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಫ್ರಾನ್ಸ್‌ನ ಗುಸ್ಟವ್‌ ಮೆಕೋನ್‌, ದ.ಆಫ್ರಿಕಾದ ರಿಲೀ ರೋಸೌ, ಇಂಗ್ಲೆಂಡ್‌ನ ಫಿಲ್‌ ಸಾಲ್ಟ್‌ ಕೂಡಾ ಸತತ 2 ಪಂದ್ಯಗಳಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.

10 ಸಿಕ್ಸರ್‌: ರೋಹಿತ್‌

ದಾಖಲೆ ಸರಿಗಟ್ಟಿದ ಸಂಜು

ಸಂಜು ಈ ಪಂದ್ಯದಲ್ಲಿ 10 ಸಿಕ್ಸರ್‌ ಬಾರಿಸಿ, ರೋಹಿತ್‌ ಶರ್ಮಾ ದಾಖಲೆ ಸರಿಗಟ್ಟಿದರು. ಇದು ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಭಾರತದ ಬ್ಯಾಟರ್‌ನ ಜಂಟಿ ಗರಿಷ್ಠ ಸಿಕ್ಸರ್‌. 2017ರಲ್ಲಿ ರೋಹಿತ್‌ ಶರ್ಮಾ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ 10 ಸಿಕ್ಸರ್‌ಗಳನ್ನು ಬಾರಿಸಿದ್ದರು.

20 ಸೆಂಚುರಿ ಬಾರಿಸಿದ

ಮೊದಲ ತಂಡ ಭಾರತ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 20 ವೈಯಕ್ತಿಕ ಶತಕಗಳನ್ನು ಬಾರಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಶುಕ್ರವಾರ ಸಂಜು ಗಳಿಸಿದ ಶತಕ ಭಾರತ ಪರ ದಾಖಲಾದ 20ನೇ ಶತಕ. ರೋಹಿತ್‌ ಶರ್ಮಾ 5, ಸೂರ್ಯಕುಮಾರ್‌ 4, ಸಂಜು ಹಾಗೂ ಕೆ.ಎಲ್‌.ರಾಹುಲ್‌ ತಲಾ 2, ಅಭಿಷೇಕ್‌ ಶರ್ಮಾ, ದೀಪಕ್‌ ಹೂಡಾ, ಋತುರಾಜ್‌, ವಿರಾಟ್‌ ಕೊಹ್ಲಿ, ಶುಭ್‌ಮನ್‌ ಗಿಲ್‌, ಜೈಸ್ವಾಲ್‌, ಸುರೇಶ್‌ ರೈನಾ ತಲಾ 1 ಶತಕ ಬಾರಿಸಿದ್ದಾರೆ. ಇನ್ನು, ಗರಿಷ್ಠ ಶತಕ ಬಾರಿಸಿದ ತಂಡಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್‌ 2, ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿದೆ. ಕಿವೀಸ್‌ ಪರ 12, ಆಸೀಸ್‌ ಪರ 11 ಶತಕ ದಾಖಲಾಗಿವೆ.

01ನೇ ಬ್ಯಾಟರ್‌

ಟಿ20ಯಲ್ಲಿ 2 ಶತಕ ಬಾರಿಸಿದ ವಿಶ್ವದ ಮೊದಲ ವಿಕೆಟ್‌ ಕೀಪರ್‌ ಬ್ಯಾಟರ್‌ ಸಂಜು ಸ್ಯಾಮ್ಸನ್‌.

Share this article