ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್‌ನ ಮೊದಲ ದಿನ ಮಳೆ ಮೇಲುಗೈ ಸಾಧಿಸಿದೆ. ಪದೇ ಪದೇ ಮಳೆ ಅಡ್ಡಿಪಡಿಸಿದ ಕಾರಣ ಬಹುತೇಕ ಓವರ್‌ಗಳು ಕಡಿತಗೊಂಡವು. ಈ ನಡುವೆ ಭಾರತ ತಂಡ ಆರಂಭಿಕ ಆಘಾತಕ್ಕೆ ತುತ್ತಾಗಿದ್ದು, 100 ರನ್ ಗಳಿಸುವ ಮೊದಲೇ ಪ್ರಮುಖ ನಾಲ್ವರನ್ನು ಕಳೆದುಕೊಂಡಿತು.
ಭಾರತ ನಾಲ್ಕು ಬದಲಾವಣೆಗಳೊಂದಿಗೆ ಪಂದ್ಯದಲ್ಲಿ ಕಣಕ್ಕಿಳಿಯಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತಕ್ಕೆ 4ನೇ ಓವರ್‌ನಲ್ಲೇ ಆಘಾತ ಕಾದಿತ್ತು. ಯಶಸ್ವಿ ಜೈಸ್ವಾಲ್ 2 ರನ್‌ಗೆ ಔಟಾದರು. ಕೆ.ಎಲ್.ರಾಹುಲ್ ಮತ್ತೊಂದು ದೊಡ್ಡ ಇನ್ನಿಂಗ್ಸ್‌ನ ಮುನ್ಸೂಚನೆ ನೀಡಿದರಾದರೂ, 14 ರನ್ ಗಳಿಸಿದ್ದಾಗ ಕ್ರಿಸ್ ವೋಕ್ಸ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಊಟದ ವಿರಾಮದ ಬಳಿಕ ನಾಯಕ ಶುಭ್‌ಮನ್ ಗಿಲ್ ಕೂಡಾ ಪೆವಿಲಿಯನ್ ಸೇರಿದರು. ಟೂರ್ನಿಯ ಗರಿಷ್ಠ ರನ್ ಸರದಾರ ಎನಿಸಿಕೊಂಡಿರುವ ಗಿಲ್ ಅನಗತ್ಯ ರನ್ ಕಸಿಯುವ ಯತ್ನದಲ್ಲಿ ವಿಕೆಟ್ ಕಳೆದುಕೊಂಡರು. ಅವರು 21 ರನ್ ಗಳಿಸಿದರು. ಉತ್ತಮವಾಗಿ ಆಡುತ್ತಿದ್ದ ಸಾಯಿ ಸುದರ್ಶನ್ ಇನ್ನಿಂಗ್ಸ್ 38 ರನ್‌ಗೆ ಕೊನೆಗೊಂಡಿತು. ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ತಂಡದ ಕೈ ಹಿಡಿದಿದ್ದ ರವೀಂದ್ರ ಜಡೇಜಾ 9 ರನ್ ಗಳಿಸಿ ಔಟಾದರು.
ಮಳೆ ಕಾಟ: ಟಾಸ್ ತಡ,
ಬಹುತೇಕ ಓವರ್ ಕಡಿತ
ಮಳೆಯಿಂದಾಗಿ ಟಾಸ್ ಕೆಲ ನಿಮಿಷ ವಿಳಂಬವಾಯಿತು. ನಿಗದಿತ ಸಮಯಕ್ಕೆ ಪಂದ್ಯ ಆರಂಭಗೊಂಡಿತಾದರೂ, ಊಟದ ವಿರಾಮದ ವೇಳೆ ಮಳೆ ಸುರಿಯಲಾರಂಭಿಸಿತು. ಮೊದಲ ಅವಧಿಯಲ್ಲಿ 23 ಓವರ್ ಆಡಿಸಿದರೂ, 2ನೇ ಅವಧಿಯಲ್ಲಿ ಕೇವಲ 6 ಓವರ್ ಆಟ ನಡೆಯಿತು. ಪದೇ ಪದೇ ಮಳೆ ಸುರಿಯುತ್ತಿದ್ದ ಕಾರಣ 3ನೇ ಅವಧಿ ಕೂಡಾ ತಡವಾಗಿ ಆರಂಭಗೊಂಡಿತು.
ಸತತ 15 ಪಂದ್ಯದಲ್ಲಿ
ಟಾಸ್ ಸೋತ ಭಾರತ!
ಭಾರತ ಈ ಸರಣಿಯ ಎಲ್ಲಾ 5 ಪಂದ್ಯಗಳಲ್ಲಿ ಟಾಸ್ ಸೋತಿದೆ. ಒಟ್ಟಾರೆ 3 ಮಾದರಿಯಲ್ಲೂ ತಂಡಕ್ಕಿದು ಸತತ 15ನೇ ಟಾಸ್ ಸೋಲು. ಇದರೊಂದಿಗೆ ತಂಡ ಹೊಸ ದಾಖಲೆ ಬರೆದಿದೆ. 1999ರಲ್ಲಿ ವೆಸ್ಟ್‌ಇಂಡೀಸ್ ಸತತವಾಗಿ 12 ಟಾಸ್ ಸೋತಿತ್ತು.