ಪ್ರೊ ಕಬಡ್ಡಿಯಲ್ಲಿ ಮಿಂಚುತ್ತಿರುವ ಕನ್ನಡಿಗರು : ಯುಪಿ ಪರ ಗಗನ್‌ ಅಬ್ಬರ

KannadaprabhaNewsNetwork |  
Published : Sep 07, 2025, 01:00 AM IST
ಗಗನ್‌ ಗೌಡ | Kannada Prabha

ಸಾರಾಂಶ

ಹಲವು ಯುವ, ಪ್ರತಿಭಾವಂತ ಕಬಡ್ಡಿ ಪಟುಗಳನ್ನು ಕ್ರೀಡಾ ಜಗತ್ತಿಗೆ ಪರಿಚಯಿಸುವ ಪ್ರೊ ಕಬಡ್ಡಿಯಲ್ಲಿ ಈ ಬಾರಿಯೂ ಕರ್ನಾಟಕದ ಹಲವು ಆಟಗಾರರು ಮಿಂಚಲು ಸಜ್ಜಾಗಿದ್ದಾರೆ. ಗಗನ್‌ ಗೌಡ ಈಗಾಗಲೇ ತಮ್ಮ ಛಾಪು ಮೂಡಿಸಿದ್ದು, ಇತರ ಕೆಲ ಆಟಗಾರರು ಕೂಡಾ ಉತ್ತಮ ಆಟವಾಡುವ ನಿರೀಕ್ಷೆಯಲ್ಲಿದ್ದಾರೆ.

 ಬೆಂಗಳೂರು  : ಹಲವು ಯುವ, ಪ್ರತಿಭಾವಂತ ಕಬಡ್ಡಿ ಪಟುಗಳನ್ನು ಕ್ರೀಡಾ ಜಗತ್ತಿಗೆ ಪರಿಚಯಿಸುವ ಪ್ರೊ ಕಬಡ್ಡಿಯಲ್ಲಿ ಈ ಬಾರಿಯೂ ಕರ್ನಾಟಕದ ಹಲವು ಆಟಗಾರರು ಮಿಂಚಲು ಸಜ್ಜಾಗಿದ್ದಾರೆ. ಗಗನ್‌ ಗೌಡ ಈಗಾಗಲೇ ತಮ್ಮ ಛಾಪು ಮೂಡಿಸಿದ್ದು, ಇತರ ಕೆಲ ಆಟಗಾರರು ಕೂಡಾ ಉತ್ತಮ ಆಟವಾಡುವ ನಿರೀಕ್ಷೆಯಲ್ಲಿದ್ದಾರೆ. 

ಯುಪಿ ಯೋಧಾಸ್‌ ಪರ ಆಡುತ್ತಿರುವ ಮಂಗಳೂರಿನ ಗಗನ್‌ 10ನೇ ಆವೃತ್ತಿಯಲ್ಲಿ 92 ಹಾಗೂ 11ನೇ ಆವೃತ್ತಿಯಲ್ಲಿ 146 ಅಂಕ ಗಳಿಸಿದ್ದರು. ಈ ಬಾರಿ ಕೇವಲ 3 ಪಂದ್ಯಗಳಲ್ಲೇ 34 ಅಂಕ ಸಂಪಾದಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ಭವಿಷ್ಯದ ತಾರೆಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.ಇನ್ನು, ಬೆಂಗಳೂರು ಬುಲ್ಸ್‌ನಲ್ಲಿ ಸತ್ಯಪ್ಪ ಮಟ್ಟಿ ಹಾಗೂ ಗಣೇಶ ಹನಮಂತಗೋಲ್‌ ಉತ್ತಮ ಆಟವಾಡುತ್ತಿದ್ದು, ಮತ್ತಷ್ಟು ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. 

 ಈ ಬಗ್ಗೆ ‘ಕನ್ನಡಪ್ರಭ’ ಜೊತೆ ಮಾತನಾಡಿರುವ ಸತ್ಯಪ್ಪ, ‘11ನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್‌ ಪರ ಆಡಿದ್ದೆ. ಈ ಸಲ ಬೆಂಗಳೂರಿಗೆ ಸೇರಿದ್ದೇನೆ. ರಮೇಶ್‌ ಸರ್‌ ನಮ್ಮನ್ನು ಗುರುತಿಸಿ ತಂಡಕ್ಕೆ ಸೇರಿಸಿದ್ದಾರೆ. ನಮ್ಮ ರಾಜ್ಯದ ತಂಡ ಎಂಬ ವಿಶೇಷ ಖುಷಿ. ತಂಡ ಮೊದಲ ಕೆಲ ಪಂದ್ಯದಲ್ಲಿ ಚೆನ್ನಾಗಿ ಆಡಿಲ್ಲ. ಆದರೆ ಖಂಡಿತಾ ಟ್ರೋಫಿ ಗೆಲ್ಲುವ ವಿಶ್ವಾಸವಿದೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. 

ಜಮಖಂಡಿಯ ಅಕಾಡೆಮಿಯೊಂದರಲ್ಲಿ ಆಡುತ್ತಿದ್ದ ಸತ್ಯಪ್ಪರನ್ನು ಗುರುತಿಸಿ ಪ್ರೊ ಕಬಡ್ಡಿಗೆ ಕರೆ ತಂದಿದ್ದು ಕೋಚ್‌ ಬಿ.ಸಿ.ರಮೇಶ್‌. ಸತ್ಯಪ್ಪ ಜೊತೆಗೆ ಗಣೇಶ್‌ರನ್ನೂ ಪ್ರೊ ಕಬಡ್ಡಿಯಲ್ಲಿ ಬೆಳೆಸುತ್ತಿರುವ ರಮೇಶ್‌, ಇಬ್ಬರ ಬಗ್ಗೆಯೂ ಹೆಚ್ಚಿನ ಆತ್ಮವಿಶ್ವಾಸ ಹೊಂದಿದ್ದಾರೆ. 

 ‘ಸತ್ಯಪ್ಪ, ಗಣೇಶ್‌ ಇಬ್ಬರೂ ಉತ್ತಮ ಪ್ರತಿಭೆಗಳು. ಅವಕಾಶ ಸಿಕ್ಕರೆ ಖಂಡಿತಾ ದೊಡ್ಡ ಸಾಧನೆ ಮಾಡಬಲ್ಲರು. ಬುಲ್ಸ್‌ ಗೆಲ್ಲಲು ಅವರಿಬ್ಬರ ಕೊಡುಗೆ ಅತ್ಯಗತ್ಯ’ ಎಂದಿದ್ದಾರೆ.ಇನ್ನು, ಇದೇ ಮೊದಲ ಬಾರಿ ಪ್ರೊ ಕಬಡ್ಡಿ ಆಡುತ್ತಿರುವ ಗಣೇಶ ಕೂಡಾ ಹೊಸ ಭರವಸೆ ಮೂಡಿಸಿದ್ದಾರೆ. ಸಿಕ್ಕ ಅವಕಾಶದಲ್ಲೇ ತಮ್ಮ ರೈಡಿಂಗ್‌ ವೈಖರಿ ಮೂಲಕ ಗಮನ ಸೆಳೆದಿದ್ದಾರೆ.  

‘ಈ ಸಲ ತುಂಬಾ ಅವಕಾಶವೇನೂ ಸಿಕ್ಕಿಲ್ಲ. ಆದರೆ ಮುಂದಿನ ಪಂದ್ಯಗಳಲ್ಲಿ ಖಂಡಿತಾ ಅವಕಾಶ ಸಿಗುತ್ತೆ ಮತ್ತು ಉತ್ತಮ ಆಟವಾಡುತ್ತೇನೆ. ನನ್ನ ಆಟದ ಬಗ್ಗೆ ತಂಡದಲ್ಲಿ ಎಲ್ಲರಿಗೂ ಖುಷಿಯಿದೆ’ ಎನ್ನುತ್ತಾರೆ ವಿಜಯಪುರದ ಸಿಂಧಗಿಯ ಗಣೇಶ.ಇವರಷ್ಟೇ ಅಲ್ಲದೆ, ಪುಣೇರಿ ಪಲ್ಟನ್‌ನಲ್ಲಿರುವ ಅನುಭವಿ ಆಟಗಾರ ಸಚಿನ್‌, ಯುಪಿ ಯೋಧಾಸ್‌ ಪರ ಆಡುತ್ತಿರುವ ಸಚಿನ್‌ ಮಣಿಪಾಲ್‌, ಜೈಪುರ ಪಿಂಕ್‌ ಪ್ಯಾಂಥರ್ಸ್‌ನ ಅಭಿಷೇಕ್‌ ಕೆ.ಎಸ್‌., ಬೆಂಗಾಲ್‌ ವಾರಿಯರ್ಸ್‌ನಲ್ಲಿರುವ ವಿಶ್ವಾಸ್‌ ಎಸ್‌. ಕೂಡಾ ಟೂರ್ನಿಯಲ್ಲಿ ಅಬ್ಬರದ ಆಟವಾಡುವ ನಿರೀಕ್ಷೆಯಲ್ಲಿದ್ದಾರೆ. 

ಪ್ರತಿಭೆಗಳು ಮುನ್ನೆಲೆಗೆ

ಪ್ರೊ ಕಬಡ್ಡಿ ಬಳಿಕ ಕರ್ನಾಟಕದ ಹೆಸರು ಚಿರಪರಿಚಿತ. ನಮ್ಮ ರಾಜ್ಯದ ಹಲವು ಯುವ ಪ್ರತಿಭೆಗಳು ಮುನ್ನೆಲೆಗೆ ಬರುತ್ತಿವೆ. ಮೊದಲೆಲ್ಲಾ ನಮ್ಮ ರಾಜ್ಯ ಮಟ್ಟದ ಚಾಂಪಿಯನ್‌ಶಿಪ್‌ಗಳಲ್ಲಿ ಆಡಲು ಆಟಗಾರರ ಕೊರತೆಯಿತ್ತು. ಆದರೆ ಈಗ ಸಬ್‌ ಜೂನಿಯರ್‌, ಅಂಡರ್‌-16, ಅಂಡರ್‌-16, ಹಿರಿಯರ ವಿಭಾಗದಲ್ಲೂ ಹೆಚ್ಚಿನ ಆಟಗಾರರಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ದೇಶದ ಹಲವು ಸಣ್ಣ-ಪುಟ್ಟ ರಾಜ್ಯಗಳಲ್ಲೂ ಕಬಡ್ಡಿ ಬೆಳೆಯುತ್ತಿದೆ.- ಬಿ.ಸಿ.ರಮೇಶ್‌, ಬೆಂಗಳೂರು ಬುಲ್ಸ್‌ ಕೋಚ್‌

ದೊಡ್ಡ ಪ್ರಮಾಣದ ಕಾರ್ಯಾಚರಣೆ 

ಪ್ರೊ ಕಬಡ್ಡಿ ಲೀಗ್ ಎಂಬುದು ಕೌಶಲ್ಯ, ತಂತ್ರಜ್ಞಾನ ಮತ್ತು ಲಾಜಿಸ್ಟಿಕ್ಸ್‌ಅನ್ನು ಸಂಯೋಜಿಸುವ ದೊಡ್ಡ ಪ್ರಮಾಣದ ಕಾರ್ಯಾಚರಣೆ. ಇದರ ಯೋಜನೆ ಹಲವು ತಿಂಗಳುಗಳ ಮೊದಲೇ ಆರಂಭವಾಗುತ್ತದೆ. ನಿರೂಪಣೆ, ಕಂಟೆಂಟ್‌, ಮಾರ್ಕೆಟಿಂಗ್ ಹೀಗೆ ಬೇರೆ ಬೇರೆ ತಂಡಗಳಿವೆ. ಅಂಕಿ ಅಂಶ, ಗ್ರಾಫಿಕ್ಸ್ ಮತ್ತು ಬಹು ಭಾಷಾ ಕಾಮೆಂಟರಿ ಸೇರಿ ಅಭಿಮಾನಿ ಕೇಂದ್ರಿತ ಅಂಶಗಳನ್ನು ಆರಂಭದಿಂದಲೇ ಸಂಯೋಜಿಸಲಾಗುತ್ತದೆ. ಪ್ರತಿ ಪಂದ್ಯಗಳಿಗೆ ಅಲ್ಟ್ರಾ ಸ್ಲೋ ಮೋಷನ್ ರಿಗ್‌, ಸ್ಪೈಡರ್‌ ಕ್ಯಾಮ್‌, ಹ್ಯಾಂಡ್‌ಹೆಲ್ಡ್ ಆರ್‌ಎಫ್‌ ಘಟಕ ಸೇರಿದಂತೆ 20 ರಿಂದ 25 ಕ್ಯಾಮೆರಾಗಳು ಇರುತ್ತವೆ. ಕ್ಯಾಮೆರಾ ಸಿಬ್ಬಂದಿ, ರಿಪ್ಲೇ ತಜ್ಞರು, ಸೌಂಡ್ ಎಂಜಿನಿಯರ್‌ಗಳು, ನಿರ್ದೇಶಕರು ಮತ್ತು ಕಾಮೆಂಟರಿ ಮಾಡುವವವರು ಸೇರಿ 300ರಷ್ಟು ಮಂದಿ ಕೆಲಸ ಮಾಡುತ್ತಾರೆ.

- ಪ್ರಶಾಂತ್‌ ಖನ್ನಾ, ಮುಖ್ಯಸ್ಥರು

ಜಿಯೋಹಾಟ್‌ಸ್ಟಾರ್‌ ಪ್ರೊಡಕ್ಷನ್‌, ಸ್ಟುಡಿಯೋ ವಿಭಾಗ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಚಿನ್ನಸ್ವಾಮಿಯಲ್ಲಿ ಪಂದ್ಯಕ್ಕೆ ಇನ್ನೂ ಸಿಗದ ಅನುಮತಿ
ಟಿ20 ವಿಶ್ವಕಪ್‌ನಿಂದ ಉಪನಾಯಕ ಗಿಲ್‌ಗೆ ಗೇಟ್‌ಪಾಸ್‌, ಕಿಶನ್ ಆಯ್ಕೆ!