ಒಲವಿನ ನಗರಿ ಪ್ಯಾರಿಸ್‌ನ 17 ದಿನಗಳ ಕ್ರೀಡಾ ಕುಂಭಮೇಳಕ್ಕೆ ಹಲವು ಭೀತಿಗಳ ನಡುವೆಯೂ ಯಶಸ್ವಿಯಾಗಿ ತೆರೆ

KannadaprabhaNewsNetwork |  
Published : Aug 12, 2024, 12:45 AM ISTUpdated : Aug 12, 2024, 04:29 AM IST
ಐಫೆಲ್‌ ಟವರ್‌ | Kannada Prabha

ಸಾರಾಂಶ

ಹಲವು ಭೀತಿಗಳ ನಡುವೆಯೂ ಯಶಸ್ವಿಯಾಗಿ ಕ್ರೀಡಾಕೂಟ ಆಯೋಜಿಸಿದ ಫ್ರಾನ್ಸ್‌. ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿದ ಗೇಮ್ಸ್‌. ಲಿಂಗತ್ವ, ಅಂಪೈರಿಂಗ್‌, ಕ್ರೀಡಾ ಗ್ರಾಮ, ಸೀನ್‌ ನದಿ ಗುಣಮಟ್ಟ ಸೇರಿ ಹಲವು ವಿವಾದ. ಪದಕ ಗಳಿಕೆಯಲ್ಲಿ ಚೀನಾ, ಅಮೆರಿಕವೇ ಮುಂದೆ

ಪ್ಯಾರಿಸ್‌: ‘ಕ್ರೀಡಾ ಕುಂಭಮೇಳ’ ಎಂದೇ ಕರೆಸಿಕೊಳ್ಳುವ ಜಾಗತಿಕ ಮಟ್ಟದ ಅತಿ ದೊಡ್ಡ ಕ್ರೀಡಾ ಹಬ್ಬ ಒಲಿಂಪಿಕ್ಸ್‌ಗೆ ತೆರೆ ಬಿದ್ದಿದೆ. ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ 33ನೇ ಆವೃತ್ತಿಯ ಒಲಿಂಪಿಕ್ಸ್‌ ಭಾನುವಾರ ಸಂಜೆ ಮುಕ್ತಾಯಗೊಂಡಿತು. ಕೆಲವು ಹೊಸತನ, ಹಲವು ವಿವಾದಗಳ ನಡುವೆಯೂ ಫ್ರಾನ್ಸ್‌ ಸರ್ಕಾರ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ(ಐಒಸಿ) ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಿತು.

ಜು.26ರಂದು ಸೀನ್‌ ನದಿಯ ಮೇಲೆ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಲಭಿಸಿತ್ತು. 17 ದಿನಗಳ ಕಾಲ ನಗರದ ವಿವಿಧ ಕ್ರೀಡಾಂಗಣಗಳಲ್ಲಿ ಗೇಮ್ಸ್‌ ಆಯೋಜನೆಗೊಂಡಿತ್ತು. ಭಾನುವಾರ ರಾತ್ರಿ ಪ್ಯಾರಿಸ್‌ ನಗರದಲ್ಲಿರುವ ಸ್ಟೇಡ್‌ ಡೆ ಫ್ರಾನ್ಸ್‌ ಕ್ರೀಡಾಂಗಣದಲ್ಲಿ ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ ಗೇಮ್ಸ್‌ನ ಮುಕ್ತಾಯನ್ನು ಘೋಷಿಸಲಾಯಿತು.ಒಟ್ಟು 206 ದೇಶಗಳ 10700ಕ್ಕೂ ಹೆಚ್ಚಿನ ಅಥ್ಲೀಟ್‌ಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡರು.

 ಒಟ್ಟು 32 ಕ್ರೀಡೆಗಳ 339 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಪ್ಯಾರಿಸ್‌ ಹಾಗೂ ಇತರ ಕಡೆಗಳ ಒಟ್ಟು 35 ಕ್ರೀಡಾಂಗಣಗಳು ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದವು. ಪ್ರತಿ ಆವೃತ್ತಿಯಂತೆ ಈ ಬಾರಿಯೂ ಅಮೆರಿಕ, ಚೀನಾ ಅಥ್ಲೀಟ್‌ಗಳೇ ಪದಕ ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದರು. ಆತಿಥೇಯ ರಾಷ್ಟ್ರ ಫ್ರಾನ್ಸ್‌, ಜಪಾನ್‌, ಬ್ರಿಟನ್‌, ಆಸ್ಟ್ರೇಲಿಯಾ ಕೂಡಾ ಪದಕ ಗೆಲುವಿನಲ್ಲಿ ಹಿಂದೆ ಬೀಳಲಿಲ್ಲ.

ಲಾಸ್‌ ಏಂಜಲೀಸ್‌ನಲ್ಲಿ 2028ರ ಒಲಿಂಪಿಕ್ಸ್‌

ಮುಂದಿನ ಆವೃತ್ತಿಯ ಒಲಿಂಪಿಕ್‌ ಕ್ರೀಡಾಕೂಟ 2028ರಲ್ಲಿ ಅಮೆರಿಕ ಲಾಸ್‌ ಏಂಜಲೀಸ್‌ಲ್ಲಿ ನಡೆಯಲಿದೆ. ಈ ಮೂಲಕ 5ನೇ ಬಾರಿ ಅಮೆರಿಕ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲಿದೆ. ಈ ಮೊದಲು 1904ರಲ್ಲಿ ಸೇಂಟ್‌ ಲೂಯಿಸ್‌, 1932 ಹಾಗೂ 1984ರಲ್ಲಿ ಲಾಸ್‌ ಏಂಜಲೀಸ್‌, 1996ರಲ್ಲಿ ಅಟ್ಲಾಂಟಾದಲ್ಲಿ ಗೇಮ್ಸ್‌ ನಡೆದಿತ್ತು.

ಆರಂಭದಿಂದ ಕೊನೆವರೆಗೂ ಸಾಲು ಸಾಲು ವಿವಾದಗಳು

ಈ ಬಾರಿ ಕ್ರೀಡಾಕೂಟ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿತು. ಒಲಿಂಪಿಕ್ಸ್‌ಗೂ ಮುನ್ನವೇ ನ್ಯೂಜಿಲೆಂಡ್‌ ಮಹಿಳಾ ಫುಟ್ಬಾಲ್‌ ತಂಡದ ಆಟಗಾರ್ತಿಯರು ಅಭ್ಯಾಸ ನಡೆಸುತ್ತಿದ್ದಾಗ, ಅದರ ದೃಶ್ಯಗಳನ್ನು ಕೆನಡಾ ತಂಡ ಡ್ರೋನ್‌ ಕ್ಯಾಮರಾ ಮೂಲಕ ಸೆರೆ ಹಿಡಿದಿದ್ದು ವಿವಾದವಾಗಿತ್ತು. ಉದ್ಘಾಟನಾ ಸಮಾರಂಭದ ಪಥಸಂಚಲನದ ವೇಳೆ ಆಯೋಜಕರು ದಕ್ಷಿಣ ಕೊರಿಯಾವನ್ನು ಉತ್ತರ ಕೊರಿಯಾದ ಹೆಸರಿನಲ್ಲಿ ಸಂಬೋಧಿಸಿದ್ದು ದ.ಕೊರಿಯಾದ ಆಕ್ರೋಶಕ್ಕೆ ಕಾರಣವಾಯಿತು.

 ಉದ್ಘಾಟನೆಯ ವೇಳೆ ಪ್ರದರ್ಶಿಸಿದ ಟ್ಯಾಬ್ಲೋಗಳು ಧಾರ್ಮಿಕ ನಂಬಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಟೀಕೆಗೆ ಗುರಿಯಾಯಿತು. ಅಂಪೈರಿಂಗ್‌ನಲ್ಲಿ ತಾರತಮ್ಯದ ಬಗ್ಗೆ ವಿವಿಧ ದೇಶಗಳ ಅಥ್ಲೀಟ್‌ಗಳಿಂದ ದೂರುಗಳು ಕೇಳಿ ಬಂದವು.ಅಲ್ಜೇರಿಯಾದ ಬಾಕ್ಸರ್‌ ಇಮಾನೆ ಖೆಲಿಫ್‌ರ ಲಿಂಗತ್ವ ವಿಚಾರ ಪರ-ವಿರೋಧ ಚರ್ಚೆಗಳಿಗೆ ಎಡೆಮಾಡಿಕೊಟ್ಟರೆ, ಆಸ್ಟ್ರೇಲಿಯಾ ಹಾಕಿ ತಂಡದ ಆಟಗಾರನೋರ್ವ ಮಾದಕ ವಸ್ತು ಖರೀದಿ ವೇಳೆ ಸಿಕ್ಕಿ ಬಿದ್ದಿದ್ದು ಮತ್ತೊಂದು ವಿವಾದ. ಇನ್ನು, ಸೀನ್‌ ನದಿ ಈಜಲು ಯೋಗ್ಯ ಎಂದು ಫ್ಯಾರಿಸ್‌ ಆಡಳಿತ ಹೇಳಿತ್ತಾದರೂ, ನದಿಯಲ್ಲಿ ನಡೆದ ಸ್ಪರ್ಧೆ ಬಳಿಕ ಹಲವು ಅಥ್ಲೀಟ್‌ಗಳು ಅಸ್ವಸ್ಥಗೊಂಡು, ವಾಂತಿ ಮಾಡುವಂತಾಯಿತು. ಇದೇ ವೇಳೆ, ಅಥ್ಲೀಟ್‌ಗಳು ಉಳಿದುಕೊಳ್ಳಲು ನಿರ್ಮಿಸಿದ್ದ ಕ್ರೀಡಾ ಗ್ರಾಮದಲ್ಲಿನ ವ್ಯವಸ್ಥೆಗಳ ಬಗ್ಗೆಯೂ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಮುಳುಗುತ್ತಿದ್ದ ಭಾರತಕ್ಕೆ ಬೆಳಕಾದ ‘ಸೂರ್ಯ’!
ಪಾಕಿಸ್ತಾನದಿಂದ ಯು-ಟರ್ನ್‌: ಟಿ20 ವಿಶ್ವಕಪ್ಪಲ್ಲಿ ಭಾರತ ವಿರುದ್ಧ ಕಣಕ್ಕೆ?