ನಾಗ್ಪುರದಲ್ಲಿ ಭಾರತ ಗೆಲುವಿನ ನಾಗಾಲೋಟ: ಗಿಲ್‌, ಶ್ರೇಯಸ್ ಅಬ್ಬರಕ್ಕೆ ತತ್ತರಿಸಿದ ಇಂಗ್ಲೆಂಡ್‌

KannadaprabhaNewsNetwork |  
Published : Feb 06, 2025, 11:48 PM ISTUpdated : Feb 07, 2025, 04:54 AM IST
ಗಿಲ್‌ | Kannada Prabha

ಸಾರಾಂಶ

ಇಂಗ್ಲೆಂಡ್‌ ವಿರುದ್ಧ ಮೊದಲ ಏಕದಿನ. ಭಾರತಕ್ಕೆ 4 ವಿಕೆಟ್‌ ಗೆಲುವು. 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ. ಇಂಗ್ಲೆಂಡ್‌ 47.4 ಓವರಲ್ಲಿ 248ಕ್ಕೆ ಆಲೌಟ್‌. 38.4 ಓವರಲ್ಲೇ ಗೆದ್ದ ಭಾರತ. ಶುಭ್‌ಮನ್‌ 87, ಶ್ರೇಯಸ್‌ 59, ಅಕ್ಷರ್‌ 52 ರನ್‌

ನಾಗ್ಪುರ: ರವೀಂದ್ರ ಜಡೇಜಾ, ಹರ್ಷಿತ್‌ ರಾಣಾ ಮಾರಕ ದಾಳಿ ಬಳಿಕ ಶುಭ್‌ಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌ ಹಾಗೂ ಅಕ್ಷರ್‌ ಪಟೇಲ್‌ರ ಮನಮೋಹಕ ಬ್ಯಾಟಿಂಗ್‌ ಪ್ರದರ್ಶನದಿಂದಾಗಿ ಇಂಗ್ಲೆಂಡ್‌ ವಿರುದ್ಧ ನಾಗ್ಪುರ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್‌ ಸುಲಭ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 1-0 ಮುನ್ನಡೆ ಪಡೆದಿದೆ.ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಆರಂಭದಲ್ಲಿ ಅವರ ನಿರ್ಧಾರ ಸರಿ ಎನಿಸಿದರೂ, ದೊಡ್ಡ ಮೊತ್ತ ಕಲೆಹಾಕಲು ಭಾರತದ ಬೌಲರ್‌ಗಳು ಬಿಡಲಿಲ್ಲ. ತಂಡ 47.4 ಓವರ್‌ಗಳಲ್ಲಿ 248 ರನ್‌ಗೆ ಇನ್ನಿಂಗ್ಸ್‌ ಕೊನೆಗೊಳಿಸಿತು. ಈ ಮೊತ್ತ ಭಾರತಕ್ಕೆ ಸುಲಭ ತುತ್ತಾಯಿತು. ಇಂಗ್ಲೆಂಡ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಭಾರತೀಯ ಬ್ಯಾಟರ್ಸ್‌, ತಂಡವನ್ನು ಕೇವಲ 38.4 ಓವರ್‌ಗಳಲ್ಲೇ ಗೆಲ್ಲಿಸಿದರು.

ರೋಹಿತ್‌ ಫೇಲ್‌: ಟೆಸ್ಟ್‌ ಬಳಿಕ ಏಕದಿನದಲ್ಲೂ ನಾಯಕ ರೋಹಿತ್‌ ಶರ್ಮಾರ ಕಳಪೆ ಪ್ರದರ್ಶನ ಮುಂದುವರಿಯಿತು. ಅವರು ಕೇವಲ 2 ರನ್‌ ಗಳಿಸಿ ಪೆವಿಲಿಯನ್‌ ಮರಳಿದರು. ಯಶಸ್ವಿ ಜೈಸ್ವಾಲ್‌(15) ಕೂಡಾ ಮಿಂಚಲಿಲ್ಲ. 19ಕ್ಕೆ 2 ವಿಕೆಟ್‌ ಕಳೆದುಕೊಂಡಿದ್ದ ತಂಡವನ್ನು ಮೇಲೆತ್ತಿದ್ದು ಶುಭ್‌ಮನ್‌ ಗಿಲ್‌ ಹಾಗೂ ಶ್ರೇಯಸ್‌ ಅಯ್ಯರ್‌. ಈ ಜೋಡಿ 64 ಎಸೆತಗಳಲ್ಲಿ 94 ರನ್‌ ಸೇರಿಸಿತು.ಆಕ್ರಮಣಕಾರಿ ಆಟಕ್ಕೆ ಒತ್ತುಕೊಟ್ಟ ಶ್ರೇಯಸ್‌ 30 ಎಸೆತಗಳಲ್ಲೇ ಅರ್ಧಶತಕ ಪೂರ್ಣಗೊಳಿಸಿದರು. ಆದರೆ 36 ಎಸೆತಗಳಲ್ಲಿ 59 ರನ್‌ ಗಳಿಸಿದ್ದಾಗ ಬೆಥೆಲ್‌ ಎಸೆತದಲ್ಲಿ ಔಟಾದರು.

 ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳಿದ್ದವು. ಬಳಿಕ ಅಕ್ಷರ್‌ ಪಟೇಲ್‌ ಜೊತೆಗೂಡಿ ಗಿಲ್‌ ಇನ್ನಿಂಗ್ಸ್‌ ಕಟ್ಟಿದರು. ಇವರಿಬ್ಬರು 4ನೇ ವಿಕೆಟ್‌ಗೆ 108 ರನ್‌ ಜೊತೆಯಾಟವಾಡಿ, ತಂಡಕ್ಕೆ ಗೆಲುವು ಖಚಿತಪಡಿಸಿಕೊಂಡರು. ಅಕ್ಷರ್‌ 47 ಎಸೆತಗಳಲ್ಲಿ 52 ರನ್‌ ಗಳಿಸಿ ಔಟಾದರೆ, ಶತಕದ ನಿರೀಕ್ಷೆ ಮೂಡಿಸಿದ್ದ ಗಿಲ್‌ ತಂಡ ಗೆಲುವಿನ ಅಂಚಿನಲ್ಲಿದ್ದಾಗ ಎಡವಿದರು. 

ಅವರು 96 ಎಸೆತಗಳಲ್ಲಿ 87 ರನ್‌ ಬಾರಿಸಿ ಔಟಾದರು. ಬಳಿಕ ಹಾರ್ದಿಕ್‌, ಜಡೇಜಾ ತಂಡವನ್ನು ಗೆಲುವಿನ ದಡ ಸೇರಿಸಿದರು. ಸಾಕಿಬ್‌ ಮಹ್ಮೂದ್‌, ಆದಿಲ್‌ ರಶೀದ್‌ ತಲಾ 2 ವಿಕೆಟ್‌ ಕಿತ್ತರು.ಸ್ಫೋಟಕ ಆರಂಭ: ಇದಕ್ಕೂ ಮುನ್ನ ಇಂಗ್ಲೆಂಡ್‌ ಸ್ಫೋಟಕ ಆರಂಭ ಪಡೆದಿತ್ತು. ಬೆನ್ ಡಕೆಟ್‌-ಫಿಲ್‌ ಸಾಲ್ಟ್‌ 8.5 ಓವರ್‌ಗಳಲ್ಲಿ 75 ರನ್‌ ಸೇರಿಸಿದರು. ಆದರೆ ಸಾಲ್ಟ್‌(26 ಎಸೆತಗಳಲ್ಲಿ 43) ರನ್‌ಔಟ್‌ ಆಗುವುದರೊಂದಿಗೆ ತಂಡ ದಿಢೀರ್‌ ಪತನಗೊಂಡಿತು. 

ತಂಡ 77ಕ್ಕೆ 3 ವಿಕೆಟ್‌ ನಷ್ಟಕ್ಕೊಳಗಾಯಿತು. ಡಕೆಟ್‌ 32 ರನ್‌ ಗಳಿಸಿದರೆ, ಬ್ರೂಕ್‌ ಸೊನ್ನೆ ಸುತ್ತಿದರು. ಬಳಿಕ ಜೋಸ್‌ ಬಟ್ಲರ್‌(52), ಜೇಕಬ್‌ ಬೆಥೆಲ್‌(51) ತಂಡಕ್ಕೆ ಆಸರೆಯಾದರು. ರವೀಂದ್ರ ಜಡೇಜಾ ಹಾಗೂ ಹರ್ಷಿತ್‌ ರಾಣಾ ತಲಾ 2 ವಿಕೆಟ್‌ ಕಬಳಿಸಿದರು.ಸ್ಕೋರ್‌: ಇಂಗ್ಲೆಂಡ್‌ 47.4 ಓವರಲ್ಲಿ 248/10 (ಬಟ್ಲರ್‌ 52, ಬೆಥೆಲ್‌ 51, ಸಾಲ್ಟ್‌ 43, ಡಕೆಟ್‌ 32, ಜಡೇಜಾ 3-26, ಹರ್ಷಿತ್‌ 3-53), ಭಾರತ 38.4 ಓವರ್‌ಗಳಲ್ಲಿ 251/6 (ಗಿಲ್‌ 87, ಶ್ರೇಯಸ್‌ 59, ಅಕ್ಷರ್‌ 52, ಸಾಕಿಬ್‌ 2-47, ಆದಿಲ್‌ 2-49)

ಪಂದ್ಯಶ್ರೇಷ್ಠ: ಶುಭ್‌ಮನ್‌ ಗಿಲ್‌

07ನೇ ಸೋಲು: 2023ರ ಏಕದಿನ ವಿಶ್ವಕಪ್‌ ಬಳಿಕ ಇಂಗ್ಲೆಂಡ್‌ ತಂಡ ಮೊದಲು ಬ್ಯಾಟ್‌ ಮಾಡಿದ 8 ಪಂದ್ಯಗಳ ಪೈಕಿ 7ರಲ್ಲಿ ಸೋಲನುಭವಿಸಿದೆ.

14ನೇ ಫಿಫ್ಟಿ: ಶುಭ್‌ಮನ್‌ ಗಿಲ್‌ ಏಕದಿನ ಕ್ರಿಕೆಟ್‌ನ 48 ಪಂದ್ಯಗಳಲ್ಲಿ 14ನೇ ಅರ್ಧಶತಕ ಬಾರಿಸಿದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಬೆಂಗ್ಳೂರಲ್ಲಿ ಐಪಿಎಲ್‌ಗೆ ರಾಜ್ಯ ಸರ್ಕಾರ ಸಮ್ಮತಿ
ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿಗೆ ಧಕ್ಕೆ ಆಗದಿರಲಿ:ಎಚ್‌ಡಿಕೆ