ಅಹಮದಾಬಾದ್: ಆರಂಭಿಕ 2 ಪಂದ್ಯಗಳಲ್ಲಿ ಅಬ್ಬರಿಸಿ ಬೊಬ್ಬಿರಿಸಿದ್ದ ಸನ್‌ರೈಸರ್ಸ್ ಹೈದ್ರಾಬಾದ್ ತಂಡವನ್ನು ಈ ಬಾರಿ ಗುಜರಾತ್ ಟೈಟಾನ್ಸ್ ಕಟ್ಟಿಹಾಕಿದೆ. ಶಿಸ್ತುಬದ್ಧ ದಾಳಿ ಮೂಲಕ ಹೈದ್ರಾಬಾದ್ ಬ್ಯಾಟರ್‌ಗಳ ಓಟಕ್ಕೆ ಬ್ರೇಕ್ ಹಾಕಿದ ಟೈಟಾನ್ಸ್, ಪಂದ್ಯದಲ್ಲಿ 7 ವಿಕೆಟ್ ಸುಲಭ ಗೆಲುವು ಸಾಧಿಸಿತು.
ಗುಜರಾತ್ 2ನೇ ಜಯ ದಾಖಲಿಸಿದರೆ, ಹೈದ್ರಾಬಾದ್‌ಗೆ ಇದು ಮೊದಲ ಸೋಲು.ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ 20 ಓವರಲ್ಲಿ 8 ವಿಕೆಟ್‌ಗೆ 162 ರನ್ ಕಲೆಹಾಕಿತು.
ಟ್ರ್ಯಾವಿಸ್ ಹೆಡ್(19), ಅಭಿಷೇಕ್ ಶರ್ಮಾ(29), ಮಾರ್ಕ್‌ರಮ್(19 ಎಸೆತದಲ್ಲಿ 17) ಹಾಗೂ ಕ್ಲಾಸೆನ್(13 ಎಸೆತದಲ್ಲಿ 24) ಅಬ್ಬರಕ್ಕೆ ಕಡಿವಾಣ ಹಾಕಲು ಗುಜರಾತ್ ಬೌಲರ್‌ಗಳು ಯಶಸ್ವಿಯಾದರು. ತಂಡದ ಯಾರೊಬ್ಬರೂ 30+ ಮೊತ್ತ ಗಳಿಸಲಿಲ್ಲ. ಪವರ್-ಪ್ಲೇನಲ್ಲಿ 56 ರನ್ ಗಳಿಸಿದ್ದರೂ ಬಳಿಕ ಗುಜರಾತ್ ಬೌಲರ್‌ಗಳು ಮೇಲುಗೈ ಸಾಧಿಸಿ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.
ಮೋಹಿತ್ ಶರ್ಮಾ 3 ವಿಕೆಟ್ ಕಿತ್ತರು.ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಗುಜರಾತ್ 19.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಆರಂಭಿಕ ಆಟಗಾರರಾದ ವೃದ್ಧಿಮಾನ್ ಸಾಹ 25, ನಾಯಕ ಶುಭ್‌ಮನ್ ಗಿಲ್ 36 ರನ್ ಗಳಿಸಿದರೆ, ತಮ್ಮ ಅಭೂತಪೂರ್ವ ಪ್ರದರ್ಶನ ಮುಂದುವರಿಸಿದ ಸಾಯಿ ಸುದರ್ಶನ್ 45 ರನ್ ಸಿಡಿಸಿದರು. ಕೊನೆಯಲ್ಲಿ 27 ಎಸೆತಗಳಲ್ಲಿ 44 ರನ್ ಚಚ್ಚಿದ ಡೇವಿಡ್ ಮಿಲ್ಲರ್ ತಂಡವನ್ನು ಗೆಲುವಿನ ದಡ ಸೇರಿಸಿದರು.ಸ್ಕೋರ್: ಹೈದ್ರಾಬಾದ್ 20 ಓವರಲ್ಲಿ 162/8 (ಅಭಿಷೇಕ್ 29, ಸಮದ್ 29, ಮೋಹಿತ್ 3-25), ಗುಜರಾತ್ 19.1 ಓವರಲ್ಲಿ 168/3 (ಸುದರ್ಶನ್ 45, ಮಿಲ್ಲರ್ 44*, ಶಾಬಾಜ್ 1-20) ಪಂದ್ಯಶ್ರೇಷ್ಠ: ಮೋಹಿತ್ ಶರ್ಮಾ