ಅಹಮದಾಬಾದ್: ಸುಲಭದಲ್ಲಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಕೊನೆಯಲ್ಲಿ ಒತ್ತಡಕ್ಕೊಳಗಾದ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 17ನೇ ಆವೃತ್ತಿಯಲ್ಲಿ ಐಪಿಎಲ್‌ನಲ್ಲಿ ಸೋಲಿನ ಆರಂಭ ಪಡೆದಿದೆ. ಭಾನುವಾರ ಮುಂಬೈ ವಿರುದ್ಧ ಗುಜರಾತ್ ಟೈಟಾನ್ಸ್ 6 ರನ್ ರೋಚಕ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಗುಜರಾತ್ ಬೂಮ್ರಾ ಮಾರಕ ದಾಳಿ ಹೊರತಾಗಿಯೂ 6 ವಿಕೆಟ್‌ಗೆ 168 ರನ್ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮುಂಬೈ ಒಂದು ಹಂತದಲ್ಲಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದರೂ ಕೊನೆಯಲ್ಲಿ ಸತತ ವಿಕೆಟ್ ಕಳೆದುಕೊಂಡು ಪಂದ್ಯ ಕೈಚೆಲ್ಲಿತು. 9 ವಿಕೆಟ್‌ಗೆ 162 ರನ್ ಗಳಿಸಿ ಶರಣಾಯಿತು.
ಇಶಾನ್ ಕಿಶನ್ ಶೂನ್ಯಕ್ಕೆ ನಿರ್ಗಮಿಸಿದ ಬಳಿಕ ನಮನ್ ಧೀರ್ 10 ಎಸೆತಕ್ಕೆ 20 ರನ್ ಸಿಡಿಸಿದರು. ನಂತರ ರೋಹಿತ್ ಹಾಗೂ ಡೆವಾಲ್ಡ್ ಬ್ರೆವಿಸ್ ಜೊತೆಗೂಡಿ 3ನೇ ವಿಕೆಟ್‌ಗೆ 77 ರನ್ ಸೇರಿಸಿದರು. ಆದರೆ 48 ಎಸೆತದಲ್ಲಿ 62 ರನ್ ಬೇಕಿದ್ದಾಗ ರೋಹಿತ್(43) ಔಟಾಗುವುದರೊಂದಿಗೆ ಪಂದ್ಯಕ್ಕೆ ತಿರುವು ಲಭಿಸಿತು.
16ನೇ ಓವರಲ್ಲಿ ಬ್ರೆವಿಸ್(46) ನಿರ್ಗಮಿಸಿದ ಬಳಿಕ ಇತರರು ಕೈಕೊಟ್ಟರು. ಕೊನೆ 13 ಎಸೆತದಲ್ಲಿ 5 ವಿಕೆಟ್ ಕಳೆದುಕೊಂಡ ತಂಡ ಸೋಲೊಪ್ಪಿಕೊಂಡಿತು.
ಬೂಮ್ರಾ ಮ್ಯಾಜಿಕ್: ತಾನೇಕೆ ವಿಶ್ವಶ್ರೇಷ್ಠ ಬೌಲರ್ ಎಂಬುದನ್ನು ಬೂಮ್ರಾ ಈ ಪಂದ್ಯದಲ್ಲಿ ಮತ್ತೆ ಸಾಬೀತುಪಡಿಸಿದರು. ಇತರೆಲ್ಲಾ ಬೌಲರ್‌ಗಳನ್ನು ಗುಜರಾತ್ ಬ್ಯಾಟರ್‌ಗಳು ದಂಡಿಸಿದರೂ ಬೂಮ್ರಾ ಮುಂದೆ ನಿರುತ್ತರರಾದರು.
ಸಾಯಿ ಸುದರ್ಶನ್(45), ಶುಭ್‌ಮನ್ ಗಿಲ್(31), ರಾಹುಲ್ ತೆವಾಟಿಯಾ(22) ಹೊರತುಪಡಿಸಿ ಇನ್ಯಾರಿಗೂ ದೊಡ್ಡ ಮೊತ್ತ ಗಳಿಸಲಾಗಲಿಲ್ಲ. ಬೂಮ್ರಾ 4 ಓವರಲ್ಲಿ 14 ರನ್‌ಗೆ 3 ವಿಕೆಟ್ ಕಿತ್ತರು.
ಸ್ಕೋರ್: ಗುಜರಾತ್ 168/6 (ಸುದರ್ಶನ್ 45, ಗಿಲ್ 31, ಬೂಮ್ರಾ 3-14), ಮುಂಬೈ 162/9 (ಬ್ರೆವಿಸ್ 46, ರೋಹಿತ್ 43, ಅಜ್ಮತುಲ್ಲಾ 2-27)
2012ರ ಬಳಿಕ ಮೊದಲ ಪಂದ್ಯ ಗೆಲ್ಲದ ಮುಂಬೈ!
ಐಪಿಎಲ್‌ನ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಕೊನೆ ಬಾರಿ ಗೆಲುವು ಕಂಡಿದ್ದು 2012ರಲ್ಲಿ. ಆ ಬಳಿಕ ಪ್ರತಿ ವರ್ಷವೂ ಮುಂಬೈ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋತಿವೆ.