ಅಹಮದಾಬಾದ್: ಐಪಿಎಲ್‌ನ ಗುಜರಾತ್ ತಂಡ ತೊರೆದು ಮುಂಬೈ ಇಂಡಿಯನ್ಸ್‌ನ ನಾಯಕತ್ವ ವಹಿಸುತ್ತಿರುವ ಹಾರ್ದಿಕ್ ಪಾಂಡ್ಯ ಅವರನ್ನು ಭಾನುವಾರ ಗುಜರಾತ್ ವಿರುದ್ಧದ ಪಂದ್ಯಕ್ಕೂ ಮುನ್ನ ಪ್ರೇಕ್ಷಕರು ಕಿಚಾಯಿಸಿದ್ದಾರೆ.
ಹಾರ್ದಿಕ್ ಟಾಸ್‌ಗೆ ಆಗಮಿಸಿದ ವೇಳೆ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ರೋಹಿತ್...ರೋಹಿತ್...ಎಂದು ಕೂಗಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
ಹಾರ್ದಿಕ್ ತಮ್ಮ ಹಳೆ ತಂಡ ಮುಂಬೈ ಇಂಡಿಯನ್ಸ್‌ಗೆ ವಾಪಸಾಗಿ ನಾಯಕತ್ವ ವಹಿಸಿದ್ದು ರೋಹಿತ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು.
ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಫ್ರಾಂಚೈಸಿಯು ಹಾರ್ದಿಕ್ಗೆ ನಾಯಕತ್ವದ ಹೊಣೆಗಾರಿಕೆ ನೀಡಿತ್ತು. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.
ರೋಹಿತ್ ಶರ್ಮಾಗೆ ಅನ್ಯಾಯ ಮಾಡಿದ್ದಾರೆ ಎಂದು ಫ್ರಾಂಚೈಸಿ ವಿರುದ್ಧ ಎಂದು ರೋಹಿತ್ ಅಭಿಮಾನಿಗಳು ಕಿಡಿಕಾರಿದ್ದರು. ಅತ್ತ ಗುಜರಾತ್ ತೊರೆದಿದ್ದರಿಂದ ಗುಜರಾತ್ ಟೈಟಾನ್ಸ್ ಅಭಿಮಾನಿಗಳು ಕೂಡ ಪಾಂಡ್ಯ ವಿರುದ್ಧ ಕೋಪಗೊಂಡಿದ್ದರು.
ಇನ್ನು ಟಾಸ್ ವೇಳೆ ಮಾತನಾಡಿದ ಪಾಂಡ್ಯ, ಮುಂಬೈ ತಂಡಕ್ಕೆ ಮರಳಿ ಬಂದಿರುವುದು ಖುಷಿ ನೀಡುತ್ತಿದೆ. ನಾನು ಹುಟ್ಟಿದ್ದು ಗುಜರಾತ್ನಲ್ಲಿ. ಇಲ್ಲಿ ನನಗೆ ಸಾಕಷ್ಟು ಯಶಸ್ಸು ಸಿಕ್ಕಿದೆ.
ಅಭಿಮಾನಿಗಳಿಗೆ ಮತ್ತು ಈ ರಾಜ್ಯಕ್ಕೆ ತುಂಬಾ ಕೃತಜ್ಞನಾಗಿದ್ದೇನೆ. ಆದರೆ ನನ್ನ ಕ್ರಿಕೆಟ್ ಜನ್ಮ ಪಡೆದಿದ್ದು ಮುಂಬೈನಲ್ಲಿ. ಹಾಗಾಗಿ ಮರಳಿ ಸೇರಿದ್ದು ನಿಜವಾಗಿಯೂ ಸಂತೋಷವಾಗಿದೆ ಎಂದು ಹೇಳಿದ್ದಾರೆ.