ಟಿ20 ವಿಶ್ವಕಪ್‌ ಸೆಮೀಸ್‌ ರೇಸ್‌ನಲ್ಲಿ ಮತ್ತೆ ಎಡವಿದ ಭಾರತ : ಪಾಕ್‌ ಮೇಲೆ ತಂಡದ ಭವಿಷ್ಯ

KannadaprabhaNewsNetwork |  
Published : Oct 14, 2024, 01:18 AM ISTUpdated : Oct 14, 2024, 04:58 AM IST
ಹರ್ಮನ್‌ | Kannada Prabha

ಸಾರಾಂಶ

ಐಸಿಸಿ ಮಹಿಳಾ ಟಿ20 ವಿಶ್ವಕಪ್‌. ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ 9 ರನ್‌ಗಳಿಂದ ಶರಣು. ಟೂರ್ನಿಯಲ್ಲಿ 2ನೇ ಸೋಲು. ಇಂದು ಕಿವೀಸ್‌ ವಿರುದ್ಧ ಪಾಕಿಸ್ತಾನ ಗೆದ್ದರೆ ಭಾರತ ಸೆಮೀಸ್‌ಗೆ. ಆಸೀಸ್‌ 151/8 । ಭಾರತ 9 ವಿಕೆಟ್‌ಗೆ 142. ಆಸೀಸ್‌ ಸೆಮಿಫೈನಲ್‌ಗೆ

ಶಾರ್ಜಾ: ಚೊಚ್ಚಲ ಐಸಿಸಿ ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದ ಭಾರತ ಮಹಿಳಾ ತಂಡದ ಕನಸು ಸದ್ಯಕ್ಕೆ ನನಸಾಗುವ ಸಾಧ್ಯತೆ ಕಾಣಿಸುತ್ತಿಲ್ಲ. 9ನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಗುಂಪು ಹಂತದಲ್ಲೇ ಹೊರಬೀಳುವ ಆತಂಕ್ಕೆ ಗುರಿಯಾಗಿದೆ. 

ಭಾನುವಾರ ನಿರ್ಣಾಯಕ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡ 6 ಬಾರಿ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ಧ 9 ರನ್‌ ಸೋಲನುಭವಿಸಿತು. ಇದು ಭಾರತಕ್ಕೆ ಟೂರ್ನಿಯಲ್ಲಿ 2ನೇ ಸೋಲು. ಅತ್ತ ಆಸೀಸ್‌ ಸತತ 4ನೇ ಗೆಲುವಿನೊಂದಿಗೆ ಅಜೇಯವಾಗಿ ಸೆಮಿಫೈನಲ್‌ ಪ್ರವೇಶಿಸಿತು.ಭಾರತ ತನ್ನೆಲ್ಲಾ 4 ಪಂದ್ಯಗಳನ್ನಾಡಿದ ಬಳಿಕ 4 ಅಂಕಗಳೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 8 ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.

 ಸೋಮವಾರ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ನ್ಯೂಜಿಲೆಂಡ್‌ ಗೆದ್ದರೆ, ಭಾರತ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ. ಒಂದು ವೇಳೆ ಪಾಕಿಸ್ತಾನ ಗೆದ್ದರೆ ಆಗ ಸೆಮೀಸ್‌ ರೇಸ್‌ ಕುತೂಹಲ ಕೆರಳಿಸಲಿದ್ದು, ಭಾರತ, ನ್ಯೂಜಿಲೆಂಡ್‌, ಪಾಕಿಸ್ತಾನ ತಂಡಗಳ ಪೈಕಿ ನೆಟ್‌ ರನ್‌ರೇಟ್‌ನಲ್ಲಿ ಮುಂದಿರುವ ತಂಡ ಸೆಮಿಫೈನಲ್‌ ಪ್ರವೇಶಿಸಲಿವೆ.ಭಾನುವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸೀಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 151 ರನ್‌ ಗಳಿಸಿತು.

 ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ಹರ್ಮನ್‌ಪ್ರೀತ್ ಕೌರ್‌ ಹೋರಾಟದ ಹೊರತಾಗಿಯೂ 9 ವಿಕೆಟ್‌ಗೆ 142 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಆರಂಭಿಕ ಆಟಗಾರರು ಈ ಪಂದ್ಯದಲ್ಲೂ ತಂಡಕ್ಕೆ ನೆರವಾಗಲಿಲ್ಲ. ಶಫಾಲಿ ವರ್ಮಾ 20 ರನ್‌ ಸಿಡಿಸಿದರೂ, ಸ್ಮೃತಿ ಮಂಧನಾ 6 ರನ್‌ ಗಳಿಸಲು 12 ಎಸೆತ ಬಳಸಿಕೊಂಡರು. ಜೆಮಿಮಾ ರೋಡ್ರಿಗ್ಸ್‌ 16 ರನ್‌ಗೆ ವಿಕೆಟ್‌ ಒಪ್ಪಿಸಿದರು. ಈ ಹಂತದಲ್ಲಿ ಜೊತೆಯಾದ ಹರ್ಮನ್‌ಪ್ರೀತ್‌ ಹಾಗೂ ದೀಪ್ತಿ ಶರ್ಮಾ 63 ರನ್‌ ಜೊತೆಯಾಟವಾಡಿದರು. ದೀಪ್ತಿ 29 ರನ್‌ಗೆ ಔಟಾದ ಬಳಿಕ ಹರ್ಮನ್‌(ಔಟಾಗದೆ 64) ಹೋರಾಟ ನಡೆಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ. ಸೋಫಿ ಮೋಲಿನ್ಯುಕ್ಸ್‌ 2 ವಿಕೆಟ್‌ ಕಿತ್ತರು.

ಹ್ಯಾರಿಸ್‌ ಮಿಂಚು: ಆಸೀಸ್‌ ಆರಂಭವೇನೂ ಉತ್ತಮವಾಗಿರಲಿಲ್ಲ. 3ನೇ ಓವರ್‌ನಲ್ಲಿ ರೇಣುಕಾ ಸಿಂಗ್‌ 2 ವಿಕೆಟ್‌ ಕಿತ್ತು ಭಾರತಕ್ಕೆ ಮುನ್ನಡೆ ಒದಗಿಸಿದರು. ಆದರೆ ಗ್ರೇಸ್‌ ಹ್ಯಾರಿಸ್‌ 40, ನಾಯಕಿ ತಹಿಲಾ ಮೆಗ್ರಾಥ್‌ 32, ಎಲೈಸಿ ಪೆರ್ರಿ 23 ಎಸೆತಗಳಲ್ಲಿ 32 ರನ್‌ ಸಿಡಿಸಿ ತಂಡವನ್ನು 150ರ ಗಡಿ ದಾಟಿಸಿದರು. ಭಾರತದ ಪರ ರೇಣುಕಾ ಸಿಂಗ್‌, ದೀಪ್ತಿ ಶರ್ಮಾ ತಲಾ 2 ವಿಕೆಟ್‌ ಕಿತ್ತರು.ಸ್ಕೋರ್‌: ಆಸ್ಟ್ರೇಲಿಯಾ 20 ಓವರಲ್ಲಿ 151/8 (ಹ್ಯಾರಿಸ್‌ 40, ಮೆಗ್ರಾಥ್‌ 32, ಪೆರ್ರಿ 32, ರೇಣುಕಾ 2-24, ದೀಪ್ತಿ 2-28), ಭಾರತ 20 ಓವರಲ್ಲಿ 142/9 (ಹರ್ಮನ್‌ಪ್ರೀತ್‌ ಔಟಾಗದೆ 54, ದೀಪ್ತಿ 29, ಸೋಫೀ 2-31)

04ನೇ ಫಿಫ್ಟಿ: ಹರ್ಮನ್‌ಪ್ರೀತ್‌ ಟಿ20 ವಿಶ್ವಕಪ್‌ನಲ್ಲಿ 4ನೇ ಅರ್ಧಶತಕ ಬಾರಿಸಿದರು. ಟೂರ್ನಿಯಲ್ಲಿ ಗರಿಷ್ಠ ಅರ್ಧಶತಕ ಬಾರಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಪಾಕ್‌ ಪಂದ್ಯಕ್ಕೆ ಮುನ್ನ ಭಾರತಕ್ಕೆ ನಮೀಬಿಯಾ ವಿರುದ್ಧ ರಿಹರ್ಸಲ್
ಭಾರತ ವಿರುದ್ಧ ಪಂದ್ಯಕ್ಕೆ ಪಾಕ್‌ನ ಮನವೊಲಿಸಿ ಐಸಿಸಿ ಈಗ ನಿರಾಳ : ಭಾರೀ ನಷ್ಟದಿಂದ ಪಾರು