ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲೇ ಹೊರಬಿದ್ದ ಭಾರತ ಮಹಿಳಾ ತಂಡದ ಪ್ರದರ್ಶನದ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿದ್ದು, ಸದ್ಯದಲ್ಲೇ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ಬಿಸಿಸಿಐ, ಆಯ್ಕೆ ಸಮಿತಿ ಸದಸ್ಯರು ಹಾಗೂ ಪ್ರಧಾನ ಕೋಚ್ ಅಮೋಲ್ ಮಜುಂದಾರ್ ಜೊತೆ ಚರ್ಚಿಸಿ ನಿರ್ಧಾರ ಪ್ರಕಟಿಸಲಿದೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಭಾರತ ನಾಕೌಟ್ ಹಂತ ಪ್ರವೇಶಿಸಲು ವಿಫಲವಾಗಿದ್ದು, ಟ್ರೋಫಿ ಬರ ಈ ಸಲವೂ ನೀಗಲಿಲ್ಲ. ಇತ್ತೀಚೆಗೆ ಏಷ್ಯಾಕಪ್‌ನಲ್ಲೂ ಭಾರತ ಎಡವಿತ್ತು. ಹೀಗಾಗಿ, ಹರ್ಮನ್‌ಪ್ರೀತ್‌ರ ನಾಯಕತ್ವದ ಬಗ್ಗೆ ಕೆಲ ಪ್ರಶ್ನೆಗಳು ಮೂಡಿದ್ದು, ಅವರನ್ನು ಟಿ20 ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಭಾರತೀಯ ಕ್ರಿಕೆಟ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ.