ಮಹಿಳಾ ಏಷ್ಯಾಕಪ್‌ ಟಿ 20: ಯುಎಇಗೆ ಸೋಲುಣಿಸಿ ಭಾರತ ಸೆಮೀಸ್‌ ಸನಿಹಕ್ಕೆ -ಟೂರ್ನಿಯಲ್ಲಿ ಸತತ 2ನೇ ಜಯ

KannadaprabhaNewsNetwork |  
Published : Jul 22, 2024, 01:23 AM ISTUpdated : Jul 22, 2024, 04:27 AM IST
ರಿಚಾ ಘೋಷ್‌ | Kannada Prabha

ಸಾರಾಂಶ

ಯುಎಇ ವಿರುದ್ಧ ಟೀಂ ಇಂಡಿಯಾಕ್ಕೆ 78 ರನ್‌ ಭರ್ಜರಿ ಗೆಲುವು. ಟೂರ್ನಿಯಲ್ಲಿ ಸತತ 2ನೇ ಜಯ ರಿಚಾ ಘೋಷ್‌, ಹರ್ಮನ್‌ಪ್ರೀತ್‌ ಸ್ಫೋಟಕ ಅರ್ಧಶತಕ. ಭಾರತ 5 ವಿಕೆಟ್‌ಗೆ 201. ಭಾರತದ ಬಿಗು ದಾಳಿ, ಯುಎಇ 7 ವಿಕೆಟ್‌ಗೆ 123

ದಾಂಬುಲಾ: ಹಾಲಿ ಚಾಂಪಿಯನ್‌ ಭಾರತ ತಂಡ ಈ ಬಾರಿ ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದ್ದು, ಸೆಮಿಫೈನಲ್‌ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದೆ. ಭಾನುವಾರ ಯುಎಇ ವಿರುದ್ಧ ಹರ್ಮನ್‌ಪ್ರೀತ್‌ ಕೌರ್‌ ಪಡೆ 78 ರನ್‌ ಭರ್ಜರಿ ಗೆಲುವು ಸಾಧಿಸಿತು. 

ಯುಎಇ ಸತತ 2ನೇ ಸೋಲು ಕಂಡಿತು.ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ರಿಚಾ ಘೋಷ್‌ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ಸ್ಫೋಟಕ ಆಟದ ನೆರವಿನಿಂದ 5 ವಿಕೆಟ್‌ಗೆ 201 ರನ್‌ ಕಲೆಹಾಕಿತು. ಬೃಹತ್ ಗುರಿ ಬೆನ್ನತ್ತಿದ ಯುಎಇ 7 ವಿಕೆಟ್‌ಗೆ 123 ರನ್ ಗಳಿಸಿ ಸೋಲೊಪ್ಪಿಕೊಂಡಿತು.ಭಾರತದ ಬೌಲರ್‌ಗಳ ಸಂಘಟಿತ ದಾಳಿ ಮುಂದೆ ಯುಎಇ ಬ್ಯಾಟರ್‌ಗಳು ರನ್‌ ಗಳಿಸಲು ತಿಣುಕಾಡಿದರು.

 7.3 ಓವರ್‌ಗಳಲ್ಲಿ 36 ರನ್‌ ಗಳಿಸುವಷ್ಟರಲ್ಲೇ ಪ್ರಮುಖ 3 ಬ್ಯಾಟರ್‌ಗಳನ್ನು ಕಳೆದುಕೊಂಡ ಯುಎಇ ಬಳಿಕ ಚೇತರಿಸಿಕೊಳ್ಳಲಿಲ್ಲ. ನಾಯಕಿ ಈಶಾ ರೋಹಿತ್‌ 38 ರನ್‌ ಸಿಡಿಸಿದರೆ, ಕಾವಿಶಾ 32 ಎಸೆತಗಳಲ್ಲಿ 40 ರನ್‌ ಸಿಡಿಸಿ ಔಟಾಗದೆ ಉಳಿದರು. ಉಳಿದಂತೆ ಖುಷಿ ಶರ್ಮಾ(10) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಭಾರತದ ಪರ ದೀಪ್ತಿ ಶರ್ಮಾ 2 ವಿಕೆಟ್‌ ಕಿತ್ತರು.ಸ್ಫೋಟಕ ಆಟ: ಇದಕ್ಕೂ ಮುನ್ನ ಟಾಸ್‌ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತ ಅಬ್ಬರದ ಆಟವಾಡಿತು. ಸ್ಮೃತಿ ಮಂಧನಾ 13 ರನ್‌ಗೆ ವಿಕೆಟ್‌ ಒಪ್ಪಿಸಿದರೂ, ಶಫಾಲಿ ವರ್ಮಾ 18 ಎಸೆತಗಳಲ್ಲಿ 37 ರನ್‌ ಗಳಿಸಿ ಸ್ಫೋಟಕ ಆರಂಭ ಒದಗಿಸಿದರು. ಪವರ್‌-ಪ್ಲೇನಲ್ಲಿ ಭಾರತ 56 ರನ್ ದೋಚಿತು. 

ಆ ಬಳಿಕ ನಾಯಕಿ ಹರ್ಮನ್‌ಪ್ರೀತ್ ತಂಡದ ಕೈ ಹಿಡಿದರು. ಅವರು 47 ಎಸೆತಗಳಲ್ಲಿ 66 ರನ್‌ ಸಿಡಿಸಿದರು. ಕೊನೆಯಲ್ಲಿ ಯುಎಇ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ರಿಷಾ 29 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್‌ನೊಂದಿಗೆ 64 ರನ್‌ ಸಿಡಿಸಿ ತಂಡವನ್ನು 200ರ ಗಡಿ ದಾಟಿಸಿದರು. ಸ್ಕೋರ್‌: ಭಾರತ 20 ಓವರಲ್ಲಿ 201/5 (ಹರ್ಮನ್‌ಪ್ರೀತ್‌ 66, ರಿಚಾ 64*, ಶಫಾಲಿ 37, ಕಾವಿಶ 2-36), ಯುಎಇ 20 ಓವರಲ್ಲಿ123/7 (ಕಾವಿಶ 40*, ಈಶಾ 38, ದೀಪ್ತಿ 2-23) ಪಂದ್ಯಶ್ರೇಷ್ಠ: ರಿಚಾ ಘೋಷ್‌.

ಭಾರತ ಮೊದಲ ಬಾರಿ 200+ ಸ್ಕೋರ್‌

ಭಾರತ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿ 200+ ರನ್‌ ಗಳಿಸಿದ ಸಾಧನೆ ಮಾಡಿತು. 2018ರಲ್ಲಿ ಇಂಗ್ಲೆಂಡ್‌ ವಿರುದ್ಧ 4 ವಿಕೆಟ್‌ಗೆ 198 ರನ್‌ ಗಳಿಸಿದ್ದು ತಂಡದ ಈ ವರೆಗಿನ ಗರಿಷ್ಠ ಮೊತ್ತವಾಗಿತ್ತು. 

201: ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಗರಿಷ್ಠ

ಭಾರತ ಕಲೆಹಾಕಿದ 201 ರನ್‌ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತ. ಈ ಮೊದಲು 2022ರಲ್ಲಿ ಮಲೇಷ್ಯಾ ವಿರುದ್ಧ ಭಾರತ ತಂಡವೇ 181 ರನ್‌ ಗಳಿಸಿತ್ತು. 

01ನೇ ಬ್ಯಾಟರ್‌: ಮಹಿಳಾ ಟಿ20, ಏಕದಿನ ಹಾಗೂ ಟೆಸ್ಟ್‌ನಲ್ಲಿ ಅರ್ಧಶತಕ ಬಾರಿಸಿದ ಭಾರತದ ಮೊದಲ ವಿಕೆಟ್‌ ಕೀಪರ್‌ ರಿಚಾ ಘೋಷ್‌.

ಮೊದಲ ಬಾರಿ ಮಹಿಳಾ ಏಷ್ಯಾಕಪ್‌ನಲ್ಲಿ 300+ ರನ್‌

ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಇದೇ ಮೊದಲ ಬಾರಿ 300+ ರನ್‌ ದಾಖಲಾಯಿತು. ಪಂದ್ಯದಲ್ಲಿ ಇತ್ತಂಡಗಳು ಒಟ್ಟಾರೆ 324 ರನ್‌ ಕಲೆಹಾಕಿದವು. 2018ರಲ್ಲಿ ಭಾರತ-ಬಾಂಗ್ಲಾದೇಶ ಪಂದ್ಯದಲ್ಲಿ 283 ರನ್‌ ದಾಖಲಾಗಿದ್ದು ಈ ವರೆಗಿನ ದಾಖಲೆ.ಗರಿಷ್ಠ ಸ್ಕೋರ್‌: ಸ್ಮೃತಿಯನ್ನು ಹಿಂದಿಕ್ಕಿ ಹರ್ಮನ್‌ ಅಗ್ರಸ್ಥಾನಿ

ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಸರದಾರರ ಪಟ್ಟಿಯಲ್ಲಿ ಹರ್ಮನ್‌ಪ್ರೀತ್‌ ಅಗ್ರಸ್ಥಾನಕ್ಕೇರಿದ್ದಾರೆ. ಅವರು 171 ಪಂದ್ಯಗಳಲ್ಲಿ 3415 ರನ್‌ ಕಲೆಹಾಕಿದ್ದಾರೆ. ಇದರೊಂದಿಗೆ 138 ಪಂದ್ಯಗಳಲ್ಲಿ 3378 ರನ್‌ ಗಳಿಸಿರುವ ಸ್ಮೃತಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಿಥಾಲಿ ರಾಜ್‌(2364 ರನ್‌) ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!