ಆಸೀಸ್‌ ದಾಖಲೆ ರನ್‌ ಚೇಸ್‌!

KannadaprabhaNewsNetwork |  
Published : Oct 13, 2025, 02:00 AM IST
ಅಮೋಘ ಶತಕ ಸಿಡಿಸಿದ ಆಸ್ಟ್ರೇಲಿಯಾ ನಾಯಕಿ ಅಲೀಸಾ ಹೀಲಿ.  | Kannada Prabha

ಸಾರಾಂಶ

ಮಹಿಳಾ ಏಕದಿನ ವಿಶ್ವಕಪ್‌: ಭಾರತ ವಿರುದ್ಧ 331 ರನ್‌ಗಳ ಗುರಿ ಬೆನ್ನತ್ತಿ ಗೆದ್ದ ಆಸ್ಟ್ರೇಲಿಯಾ. ಭಾರತ 330/10, ಆಸೀಸ್‌ 49 ಓವರಲ್ಲಿ 331/7, ಅಲೀಸಾ 142, ಭಾರತಕ್ಕೆ 2ನೇ ಸೋಲು

ವಿಶಾಖಪಟ್ಟಣಂ: 7 ಬಾರಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ, ಮಹಿಳಾ ಏಕದಿನ ಕ್ರಿಕೆಟ್‌ ಇತಿಹಾಸದಲ್ಲೇ ಗರಿಷ್ಠ ರನ್‌ ಚೇಸ್‌ನೊಂದಿಗೆ ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲೂ ತಾನೇ ಗೆಲ್ಲುವ ಫೇವರಿಟ್‌ ಎನ್ನುವುದನ್ನು ತೋರಿದೆ.

ಭಾರತ ವಿರುದ್ಧ ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿ 331 ರನ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ಆಸ್ಟ್ರೇಲಿಯಾ 3 ವಿಕೆಟ್‌ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು. 4 ಪಂದ್ಯಗಳಿಂದ 7 ಅಂಕ ಗಳಿಸಿರುವ ಆಸೀಸ್‌, ಅಜೇಯವಾಗಿ ಉಳಿದಿದ್ದು ಸೆಮಿಫೈನಲ್‌ನತ್ತ ಮುನ್ನುಗ್ಗಿದೆ.

ಟಾಸ್‌ ಸೋತು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಆಸೀಸ್‌ಗೆ ಭಾರತದ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧನಾ ಹಾಗೂ ಪ್ರತಿಕಾ ರಾವಲ್‌ ಆಕರ್ಷಕ ಬ್ಯಾಟಿಂಗ್‌ ಮೂಲಕ ಕಾಡಿದರು. ಭಾರತದ ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ 155 ರನ್‌ ಜೊತೆಯಾಟವಾಡಿತು. ಸ್ಮೃತಿ 80 ರನ್‌ ಗಳಿಸಿ ಔಟಾದರೆ, ಪ್ರತಿಕಾ 75 ರನ್‌ ಕಲೆಹಾಕಿದರು.

ಹರ್ಲೀನ್‌ ಡಿಯೋಲ್‌ 38, ಹರ್ಮನ್‌ಪ್ರೀತ್‌ 22, ಜೆಮಿಮಾ 33 ರನ್‌ ಕೊಡುಗೆ ನೀಡಿದರು. ಭಾರತ ಒಂದು ಹಂತದಲ್ಲಿ 350ಕ್ಕೂ ಹೆಚ್ಚು ಮೊತ್ತ ದಾಖಲಿಸುವ ನಿರೀಕ್ಷೆಯಲ್ಲಿತ್ತು. ಆದರೆ ಕೊನೆ 7 ಓವರಲ್ಲಿ 36 ರನ್‌ಗೆ 6 ವಿಕೆಟ್‌ ಕಳೆದುಕೊಂಡಿದ್ದು ಭಾರತಕ್ಕೆ ಹಿನ್ನಡೆ ಉಂಟು ಮಾಡಿತು. 48.5 ಓವರಲ್ಲಿ ಭಾರತ 330 ರನ್‌ಗೆ ಆಲೌಟ್‌ ಆಯಿತು. ಆ್ಯನಾಬೆಲ್‌ ಸದರ್‌ಲೆಂಡ್‌ 5 ವಿಕೆಟ್‌ ಕಬಳಿಸಿದರು.

ಆಸ್ಟ್ರೇಲಿಯಾ ಕೂಡ ಸ್ಫೋಟಕ ಆರಂಭ ಪಡೆಯಿತು. ನಾಯಕಿ ಅಲೀಸಾ ಹೀಲಿ ಹಾಗೂ ಫೀಬಿ ಲಿಚ್‌ಫೀಲ್ಡ್‌ ಮೊದಲ ವಿಕೆಟ್‌ಗೆ 85 ರನ್‌ ಸೇರಿಸಿದರು. ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅಲೀಸಾ 107 ಎಸೆತದಲ್ಲಿ 21 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 142 ರನ್‌ ಗಳಿಸಿ ಔಟಾದರು.

ಭಾರತ ಸುಧಾರಿತ ಫೀಲ್ಡಿಂಗ್‌ ಪ್ರದರ್ಶನದೊಂದಿಗೆ ಕೊನೆವರೆಗೂ ಪಂದ್ಯದಲ್ಲಿ ಉಳಿಯುವ ಪ್ರಯತ್ನ ನಡೆಸಿತು. ಆದರೆ ಆಶ್ಲೆ ಗಾರ್ಡ್ನರ್‌ರ 45, ಗಾಯಗೊಂಡು ನಿವೃತ್ತಿ ಪಡೆದರೂ ಕೊನೆಯಲ್ಲಿ ಮತ್ತೆ ಕ್ರೀಸ್‌ಗಿಳಿದು ಔಟಾಗದೆ 47 ರನ್‌ ಗಳಿಸಿದ ಎಲೈಸಿ ಪೆರ್ರಿ ಇನ್ನೂ 1 ಓವರ್‌ ಬಾಕಿ ಇರುವಂತೆಯೇ ತಂಡವನ್ನು ಜಯದ ದಡ ಸೇರಿಸಿದರು. ಸ್ಕೋರ್‌: ಭಾರತ 48.5 ಓವರಲ್ಲಿ 330/10 (ಸ್ಮೃತಿ 80, ಪ್ರತಿಕಾ 75, ಸದರ್‌ಲೆಂಡ್‌ 5-40), ಆಸ್ಟ್ರೇಲಿಯಾ 49 ಓವರಲ್ಲಿ 331/7 (ಅಲೀಸಾ 142, ಪೆರ್ರಿ 47*, ಶ್ರೀ ಚರಣಿ 3-41)

 ಮಹಿಳಾ ಏಕದಿನದಲ್ಲಿ ಗರಿಷ್ಠ ರನ್‌ ಚೇಸ್‌ ದಾಖಲೆ

ತಂಡವಿರುದ್ಧಗುರಿವರ್ಷ

ಆಸ್ಟ್ರೇಲಿಯಾಭಾರತ3312025

ಶ್ರೀಲಂಕಾದ.ಆಫ್ರಿಕಾ3022024

ಆಸ್ಟ್ರೇಲಿಯಾನ್ಯೂಜಿಲೆಂಡ್‌2892012

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಈ ಸಲದ ಐಪಿಎಲ್‌: ಡಿ.ಕೆ.ಶಿವಕುಮಾರ್‌
ವೆಂಕಟೇಶ್‌ ಪ್ರಸಾದ್‌ ಕೆಎಸ್‌ಸಿಎ ನೂತನ ಅಧ್ಯಕ್ಷ: ಬ್ರಿಜೇಶ್‌ ಪಟೇಲ್‌ ಬಣಕ್ಕೆ ನಿರಾಸೆ