ಭಾರತ ಮಹಿಳಾ ಬ್ಯಾಡ್ಮಿಂಟನ್‌ ತಂಡಕ್ಕೆ ಐತಿಹಾಸಿಕ ಚಿನ್ನ!

KannadaprabhaNewsNetwork | Updated : Feb 19 2024, 01:15 PM IST

ಸಾರಾಂಶ

ಇತಿಹಾಸ - ಏಷ್ಯಾ ಬ್ಯಾಡ್ಮಿಂಟನ್‌ ಟೀಂ ಚಾಂಪಿಯನ್‌ಶಿಪ್‌ ಗೆದ್ದ ಭಾರತ ತಂಡ, ಫೈನಲ್‌ನಲ್ಲಿ ಥಾಯ್ಲೆಂಡ್‌ ವಿರುದ್ಧ 3-2ರ ರೋಚಕ ಗೆಲುವು ಸಾಧಿಸಿದೆ.

ಶಾ ಆಲಂ(ಮಲೇಷ್ಯಾ): ರೋಚಕ ಹಣಾಹಣಿಯಲ್ಲಿ 2 ಬಾರಿ ಕಂಚು ವಿಜೇತ ಥಾಯ್ಲೆಂಡ್ ತಂಡವನ್ನು ಬಗ್ಗುಬಡಿದ ಭಾರತ ಮಹಿಳಾ ತಂಡ ಬ್ಯಾಡ್ಮಿಂಟನ್‌ ಏಷ್ಯಾ ಟೀಂ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಸಾಧನೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿತು. 

ಭಾನುವಾರ ನಡೆದ ಫೈನಲ್‌ ಕದನದಲ್ಲಿ ಬಲಿಷ್ಠ ಥಾಯ್ಲೆಂಡ್ ವಿರುದ್ಧ 3-2ರಿಂದ ಜಯ ದಾಖಲಿಸಿ, ಟೂರ್ನಿಯಲ್ಲಿ ಮೊದಲ ಬಾರಿಗೆ ಪದಕ ಗಳಿಸಿತು. 

ಮತ್ತೊಮ್ಮೆ ನಿರ್ಣಾಯಕ ಸೆಣಸಾಟದಲ್ಲಿ ಜಯ ಸಾಧಿಸಿದ ಯುವ ತಾರೆ ಅನ್ಮೋಲ್‌ ಖಾರ್ಬ್‌ ಭಾರತಕ್ಕೆ ಆಸರೆಯಾದರು.ಕ್ವಾರ್ಟರ್‌ ಫೈನಲ್‌ನಲ್ಲಿ ಚೀನಾ, ಸೆಮಿಫೈನಲ್‌ನಲ್ಲಿ ಜಪಾನ್‌ ತಂಡಗಳನ್ನು ಬಗ್ಗುಬಡಿದಿದ್ದ ಭಾರತಕ್ಕೆ ಫೈನಲ್‌ನಲ್ಲೂ ಕಠಿಣ ಪೈಪೋಟಿ ಎದುರಾಯಿತು.

 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ.ಸಿಂಧು, ಸಿಂಗಲ್ಸ್‌ ಪಂದ್ಯದಲ್ಲಿ ವಿಶ್ವ ನಂ.17 ಸುಪನಿದಾ ಕಟೆಥೊಂಗ್‌ ವಿರುದ್ಧ 21-12, 21-12ರಿಂದ ಗೆಲುವು ಸಾಧಿಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿ ಚಿನ್ನದ ಗೆಲುವಿನ ವಿಶ್ವಾಸ ಹೆಚ್ಚಿಸಿದರು. 

ನಂತರ ನಡೆದ ಡಬಲ್ಸ್‌ ಹಣಾಹಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಯುವ ಜೋಡಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ವಿಶ್ವ ನ.10 ಜೊಂಗ್‌ಕೋಲ್ಫಾನ್ ಕಿಟಿತಾರಾಕುಲ್ ಮತ್ತು ರವಿಂಡಾ ಪ್ರ ಜೊಂಗ್‌ಜೈ ಜೋಡಿಯನ್ನು 21-16 18-21 21-16ರಲ್ಲಿ ಪರಾಭವಗೊಳಿಸಿ ಥಾಯ್ಲೆಂಡ್‌ನ ವಿರುದ್ಧ ಪಾರಮ್ಯ ಮೆರೆದರು.

ಸೆಮಿಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌, ಮಾಜಿ ವಿಶ್ವ ನಂ.1 ನಜೊಮಿ ಓಕುಹರಾ ವಿರುದ್ಧ ಗೆದ್ದು ಬೀಗಿದ್ದ ಅಶ್ಮಿತಾ ಚಾಲಿಯಾ 2ನೇ ಸಿಂಗಲ್ಸ್‌ ಪಂದ್ಯದಲ್ಲಿ ಪರಾಭವಗೊಂಡರು. 

ವಿಶ್ವ ನಂ.18 ಆಟಗಾರ್ತಿ ಬುಸಾನ್‌ ಓಂಗ್ಬಾಮ್ರುಂಗ್‌ಫಾನ್‌ ವಿರುದ್ಧ ಅಶ್ಮಿತಾ 11-21 14-21 ಗೇಮ್‌ಗಳಲ್ಲಿ ಸೋಲುಂಡರು. 2ನೇ ಗೇಮ್‌ನಲ್ಲಿ 14-14ರಿಂದ ಸಮಬಲದ ಹೋರಾಟ ನಡೆಯುತ್ತಿದ್ದಾಗ ಅನಗತ್ಯ ತಪ್ಪುಗಳನ್ನೆಗಿ ಅಶ್ಮಿತಾ ಪಂದ್ಯ ಕೈಚೆಲ್ಲಿದರು.

2ನೇ ಡಬಲ್ಸ್‌ ಪಂದ್ಯದಲ್ಲಿ ಭಾರತ ಯುವ ಜೋಡಿ ಶ್ರುತಿ ಮಿಶ್ರಾ ಮತ್ತು ಪ್ರಿಯಾ ಅವರನ್ನು ಕಣಕ್ಕಿಳಿಸಿತು. ಈ ಜೋಡಿಯು ವಿಶ್ವ ನಂ.13 ಬೆನ್ಯಾಪ್ ಏಮ್‌ಶಾರ್ಡ್‌ ಮತ್ತು ನುಂಟಕರನ್ ಏಮ್‌ಶಾರ್ಡ್‌ ವಿರುದ್ಧ 11-21, 14-21ರಲ್ಲಿ ಸೋಲುಂಡಿತು. 

ಇದರಿಂದಾಗಿ ಥಾಯ್ಲೆಂಡ್‌ 2-2ರಲ್ಲಿ ಸಮಬಲ ಸಾಧಿಸಿತು.5ನೇ ಹಾಗೂ ಅಂತಿಮ ಮುಖಾಮುಖಿಯಲ್ಲಿ ಭಾರತದ ತನ್ನ ನಿರೀಕ್ಷೆಯ ಭಾರವನ್ನು ಹೊತ್ತು ವಿಶ್ವ ರ್‍ಯಾಂಕಿಂಗ್‌ನಲ್ಲಿ 472ನೇ ಸ್ಥಾನದಲ್ಲಿರುವ 17 ವರ್ಷದ ಅನ್ಮೋಲ್‌ ಖಾರ್ಬ್‌ ಕಣಕ್ಕಿಳಿದರು.

 ನಗುತ್ತಲ್ಲೇ ಅಂಕಣಕ್ಕಿಳಿದ ಹಾಲಿ ರಾಷ್ಟ್ರೀಯ ಚಾಂಪಿಯನ್‌ ಅನ್ಮೋಲ್‌, ಪೋರ್ನ್‌ಪಿಚಾ ಚೋಯಿಕೀವಾಂಗ್ ವಿರುದ್ಧ 21-14 21-9 ಗೇಮ್‌ಗಳಲ್ಲಿ ಸುಲಭ ಗೆಲುವು ಸಾಧಿಸಿ, ಭಾರತ ಚಾಂಪಿಯನ್‌ ಆಗಲು ನೆರವಾದರು. 

ಈ ಗೆಲುವು ಏಪ್ರಿಲ್‌ನಲ್ಲಿ ಚೀನಾದ ಚೆಂಗ್ಡುನಲ್ಲಿ ನಡೆಯಲಿರುವ ಉಬರ್‌ ಕಪ್‌ ಪಂದ್ಯಾವಳಿಯಲ್ಲಿ ಭಾರತ ಪದಕ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುವಂತೆ ಮಾಡಲಿದೆ.

Share this article