ಬೆಂಗಳೂರು : ಸತತ 4 ಗೆಲುವಿನೊಂದಿಗೆ ತನ್ನ ಪ್ಲೇ-ಆಫ್ ಕನಸು ಜೀವಂತವಾಗಿರಿಸಿಕೊಳ್ಳುವುದರ ಜೊತೆಗೆ ಟೂರ್ನಿಯ ಇತರ ತಂಡಗಳ ನಾಕೌಟ್ ರೇಸ್ನಲ್ಲೂ ರೋಚಕತೆ ಸೃಷ್ಟಿಸಿರುವ ಆರ್ಸಿಬಿ ಈಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನಿರ್ಣಾಯಕ ಕದನಕ್ಕೆ ಸಜ್ಜಾಗಿದೆ. ಭಾನುವಾರ ಇತ್ತಂಡಗಳ ನಡುವೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಡು ಇಲ್ಲವೇ ಮಡಿ ಪಂದ್ಯ ನಡೆಯಲಿದ್ದು, ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ. ಟೂರ್ನಿಯ ಆರಂಭಿಕ 8 ಪಂದ್ಯಗಳಲ್ಲಿ ಫಾಫ್ ಡು ಪ್ಲೆಸಿ ನಾಯಕತ್ವದ ಆರ್ಸಿಬಿ 7ರಲ್ಲಿ ಪರಾಭವಗೊಂಡಿತ್ತು. ಆದರೆ ಕೊನೆ ಕ್ಷಣದಲ್ಲಿ ಎಚ್ಚೆತ್ತ ತಂಡ ಕಳೆದ 4 ಪಂದ್ಯಗಳಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿ ಜಯಭೇರಿ ಬಾರಿಸಿದ್ದು, ಅಂಕ ಗಳಿಕೆಯನ್ನು 12ಕ್ಕೆ ಹೆಚ್ಚಿಸಿದೆ. ಗುಜರಾತ್ ವಿರುದ್ಧ 9 ವಿಕೆಟ್ ಗೆಲುವು ಮತ್ತು ಪಂಜಾಬ್ ವಿರುದ್ಧದ ಕಳೆದ ಪಂದ್ಯದ 60 ರನ್ ಜಯ ತಂಡದ ನೆಟ್ ರನ್ರೇಟನ್ನು ಭರಪೂರ ಹೆಚ್ಚಿಸಿದ್ದು ತಂಡಕ್ಕೆ ಪ್ಲಸ್ ಪಾಯಿಂಟ್. ಸದ್ಯ ತಂಡಕ್ಕೆ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಿದ್ದು, ಅದೃಷ್ಟವಿದ್ದರೆ ಪ್ಲೇ-ಆಫ್ಗೇರುವ ಸಾಧ್ಯತೆಯಿದೆ.
ಡೆಲ್ಲಿಗೂ ಜಯ ಅನಿವಾರ್ಯ: ಸದ್ಯ ಆರ್ಸಿಬಿಗೆ ಹೋಲಿಸಿದರೆ ಡೆಲ್ಲಿ 1 ಪಂದ್ಯ ಜಾಸ್ತಿ ಗೆದ್ದಿದೆ. 12 ಪಂದ್ಯಗಳಲ್ಲಿ ತಂಡ 12 ಅಂಕ ಸಂಪಾದಿಸಿದ್ದು, ಪ್ಲೇ-ಆಫ್ಗೇರಬೇಕಿದ್ದರೆ ಇನ್ನೆರಡೂ ಪಂದ್ಯ ಗೆಲ್ಲಬೇಕು. ಒಂದು ವೇಳೆ ತಂಡ ಆರ್ಸಿಬಿ ವಿರುದ್ಧ ಸೋತರೆ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ.
ವಿರಾಟ್ ಆಟಕ್ಕೆ ಕಾತರ: ವಿರಾಟ್ ಕೊಹ್ಲಿ ಅಭೂತಪೂರ್ವ ಲಯ ಕಾಯ್ದುಕೊಂಡಿದ್ದು, ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಫೀಲ್ಡಿಂಗ್, ರನ್ಔಟ್ ಮೂಲಕವೂ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿರುವ ವಿರಾಟ್ರ ಆಟ ನೋಡಲು ತವರಿನ ಅಭಿಮಾನಿಗಳು ಕಾತರದಲ್ಲಿದ್ದಾರೆ. ವಿಲ್ ಜ್ಯಾಕ್ಸ್, ರಜತ್ ಪಾಟೀದಾರ್ ಕೂಡಾ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದ್ದಾರೆ. ಡು ಪ್ಲೆಸಿ, ಕಾರ್ತಿಕ್ ತಂಡದ ಕೈ ಹಿಡಿಯಬೇಕಿದ್ದು, ಬೌಲರ್ಗಳು ಕಳೆದ 4 ಪಂದ್ಯಗಳ ಪ್ರದರ್ಶನ ಮುಂದುವರಿಸಿದರೆ ತಂಡದ ಪ್ಲೇ-ಆಫ್ ಆಸೆ ಜೀವಂತವಾಗಿರುವುದು ಖಚಿತ.ಅತ್ತ ಡೆಲ್ಲಿ ತನ್ನ ಖಾಯಂ ನಾಯಕ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಆಡಲಿದೆ. ಹೀಗಾಗಿ ಅಕ್ಷರ್ ಪಟೇಲ್ ತಂಡ ಮುನ್ನಡೆಸಲಿದ್ದಾರೆ. ಡೆಲ್ಲಿ ಸ್ಫೋಟಕ ಬ್ಯಾಟರ್ಗಳದಾ ಜೇಕ್ ಫ್ರೇಸರ್, ಅಭಿಷೇಕ್ ಪೊರೆಲ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು, ಬೌಲರ್ಗಳೂ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಆರ್ಸಿಬಿ ಬ್ಯಾಟರ್ಗಳನ್ನು ಕಟ್ಟಿಹಾಕಬೇಕಿದೆ.
ಒಟ್ಟು ಮುಖಾಮುಖಿ: 30
ಆರ್ಸಿಬಿ: 18
ಡೆಲ್ಲಿ: 11ಫಲಿತಾಂಶವಿಲ್ಲ:
01ಸಂಭವನೀಯ ಆಟಗಾರರ ಪಟ್ಟಿ
ಆರ್ಸಿಬಿ: ಕೊಹ್ಲಿ, ಡು ಪ್ಲೆಸಿ(ನಾಯಕ), ಜ್ಯಾಕ್ಸ್, ಗ್ರೀನ್, ದಿನೇಶ್, ಲೊಮ್ರೊರ್. ಸ್ವಪ್ನಿಲ್, ಕರ್ಣ್, ಸಿರಾಜ್, ದಯಾಳ್, ಫರ್ಗ್ಯೂಸನ್.ಡೆಲ್ಲಿ: ಫ್ರೇಸರ್, ಪೃಥ್ವಿ ಶಾ, ಪೊರೆಲ್, ಹೋಪ್, ಸ್ಟಬ್ಸ್, ನೈಬ್, ಅಕ್ಷರ್(ನಾಯಕ), ಕುಲ್ದೀಪ್, ಮುಕೇಶ್, ಇಶಾಂತ್, ಖಲೀಲ್.
ಪಂದ್ಯ: ಸಂಜೆ 7.30ಕ್ಕೆ
ಪಿಚ್ ರಿಪೋರ್ಟ್: ಚಿನ್ನಸ್ವಾಮಿಯ ಪಿಚ್ ಬ್ಯಾಟರ್ಗಳ ಪಾಲಿಗೆ ಸ್ವರ್ಗ. ಇಲ್ಲಿ ನಡೆಯುವ ಬಹುತೇಕ ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗುತ್ತದೆ. ಚೇಸ್ ಮಾಡಿದ ತಂಡ ಗೆದ್ದ ಉದಾಹರಣೆ ಜಾಸ್ತಿಯಿದೆ. ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಬಹುದು.