ಹಾಂಗ್‌ಝೋ: ‘ಟಾರ್ಗೆಟ್ 100’ ಎಂಬ ಘೋಷವಾಕ್ಯದೊಂದಿಗೇ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಅಭಿಯಾನ ಆರಂಭಿಸಿದ್ದ ಭಾರತದ ಕ್ರೀಡಾಪಟುಗಳು ತಮ್ಮ ಗುರಿಯ ಸನಿಹಕ್ಕೆ ಬಂದು ನಿಂತಿದ್ದಾರೆ. ಪದಕ ಗಳಿಕೆಯಲ್ಲಿ ಈ ಬಾರಿ ಐತಿಹಾಸಿಕ ಶತಕ ಬಾರಿಸಲೇಬೇಕು ಎಂದು ದೃಢ ನಿಶ್ಚಯ ಮಾಡಿಕೊಂಡಿರುವ ಭಾರತ, ಕ್ರೀಡಾಕೂಟದಲ್ಲಿ ಬಾಕಿ ಉಳಿದಿರುವ ಎರಡು ದಿನಗಳಲ್ಲಿ ಅದನ್ನು ಸಾಧಿಸುವ ನಿರೀಕ್ಷೆಯಲ್ಲಿದೆ. ಶುಕ್ರವಾರ ಭಾರತೀಯ ಅಥ್ಲೀಟ್‌ಗಳು 3 ಚಿನ್ನ ಸೇರಿ 5 ಪದಕಗಳನ್ನು ಕೊರಳಿಗೇರಿಸಿಕೊಂಡರು. ಸದ್ಯ ಭಾರತದ ಗಳಿಕೆ 21 ಚಿನ್ನ, 32 ಬೆಳ್ಳಿ ಹಾಗೂ 33 ಕಂಚು ಸೇರಿ 86 ಪದಕ. ಕಬಡ್ಡಿ, ಹಾಕಿ, ಬ್ಯಾಡ್ಮಿಂಟನ್, ಬ್ರಿಡ್ಜ್ ಕ್ರೀಡೆಗಳಲ್ಲಿ ಭಾರತಕ್ಕೆ ಈಗಾಗಲೇ ಒಟ್ಟು 8 ಪದಕ ಖಚಿತವಾಗಿದೆ. ಹೀಗಾಗಿ ಕನಿಷ್ಠ ಪದಕ ಗಳಿಗೆ 94ಕ್ಕೇರಲಿದೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್, ಪುರುಷರ ಡಬಲ್ಸ್‌ನಲ್ಲಿ ಸೆಮೀಸ್‌ಗೇರಿದ್ದು 2 ಪದಕ ಖಚಿತ. ಹಾಕಿಯಲ್ಲಿ ಪುರುಷರ ತಂಡ ಫೈನಲ್‌ನಲ್ಲಿ ಆಡಲಿದ್ದು, ಕನಿಷ್ಠ ಬೆಳ್ಳಿಯಾದರೂ ಸಿಗಲಿದೆ. ಕಬಡ್ಡಿಯಲ್ಲಿ ಪುರುಷರ ಜೊತೆ ಮಹಿಳಾ ತಂಡಕ್ಕೂ ಕನಿಷ್ಠ ಕಂಚಿನ ಪದಕ ಲಭಿಸಲಿದೆ. ಇಸ್ಪೀಟ್ ಎಲೆ ಬಳಸಿ ಆಡುವ ಬ್ರಿಡ್ಜ್‌ನಲ್ಲೂ ಭಾರತಕ್ಕೆ ಕನಿಷ್ಠ ಬೆಳ್ಳಿ ಖಚಿತ. ಇನ್ನು, ಪುರುಷರ ಕಾಂಪೌಂಡ್ ಫೈನಲ್‌ನಲ್ಲಿ ಅಭಿಷೇಕ್, ಓಜಸ್ ಮುಖಾಮುಖಿಯಾಗಲಿದ್ದಾರೆ. ಹೀಗಾಗಿ ಅದರಲ್ಲೂ 2 ಪದಕ ಭಾರತ ಖಾತೆಗೆ ಸೇರಲಿವೆ. ಕ್ರಿಕೆಟ್, ಚೆಸ್, ಆರ್ಚರಿ, ಕುಸ್ತಿಯಲ್ಲಿ ಭಾರತಕ್ಕೆ ಪದಕ ಭರವಸೆ ಇದ್ದು, ಕ್ರೀಡಾಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ 100 ಪದಕಗಳ ಮೈಲಿಗಲ್ಲು ತಲುಪಲಿದೆ ಎನ್ನುವ ನಂಬಿಕೆ ಅಭಿಮಾನಿಗಳಲ್ಲಿದೆ. ಈ ನಡುವೆ ಚೀನಾ ತನ್ನ ನಾಗಾಲೋಟ ಮುಂದುವರಿಸಿ 179 ಚಿನ್ನದೊಂದಿಗೆ 333 ಪದಕ ಗೆದ್ದಿದ್ದು ಅಗ್ರಸ್ಥಾನ ಕಾಯ್ದುಕೊಂಡಿದೆ. ತಲಾ 150ಕ್ಕೂ ಹೆಚ್ಚು ಪದಕ ಜಯಿಸಿರುವ ಜಪಾನ್ ಹಾಗೂ ದ.ಕೊರಿಯಾ ಕ್ರಮವಾಗಿ ನಂತರದ 2 ಸ್ಥಾನಗಳಲ್ಲಿವೆ. ----- ಆರ್ಚರಿಯಲ್ಲಿ ಡಬಲ್ ಸ್ವರ್ಣ ಧಮಾಕ ಭಾರತಕ್ಕೆ ನಿರೀಕ್ಷೆಯಂತೆಯೇ ಆರ್ಚರಿಯಲ್ಲಿ ಗುರುವಾರ 2 ಚಿನ್ನದ ಪದಕ ಒಲಿಯಿತು. ಇದರೊಂದಿಗೆ ಕಾಂಪೌಂಡ್ ಆರ್ಚರಿ ತಂಡ ವಿಭಾಗದಲ್ಲಿ ಲಭ್ಯವಿದ್ದ ಎಲ್ಲಾ 3 ಬಂಗಾರವನ್ನೂ ಭಾರತ ತನ್ನ ಬುಟ್ಟಿಗೆ ಹಾಕಿಕೊಂಡಿತು. ಶುಕ್ರವಾರ ಜ್ಯೋತಿ ಸುರೇಖಾ ವೆನ್ನಂ, ಅದಿತಿ ಸ್ವಾಮಿ, ಪರ್ನೀತ್ ಕೌರ್ ಅವರನ್ನೊಳಗೊಂಡ ಮಹಿಳೆಯರ ಕಾಂಪೌಂಡ್ ತಂಡ ಫೈನಲ್‌ನಲ್ಲಿ ಚೈನೀಸ್ ತೈಪೆ ವಿರುದ್ಧ 230-229 ಅಂಕಗಳ ರೋಚಕ ಗೆಲುವು ಸಾಧಿಸಿತು. ಇದೇ ವೇಳೆ ಪುರುಷರ ಕಾಂಪೌಂಡ್ ವಿಭಾಗದಲ್ಲೂ ಭಾರತಕ್ಕೆ ಸ್ವರ್ಣ ಪದಕ ಲಭಿಸಿತು. ಅಭಿಷೇಕ್ ವರ್ಮಾ, ಓಜಸ್ ಹಾಗೂ ಪ್ರಥಮೇಶ್ ಅವರಿದ್ದ ತಂಡ ಫೈನಲ್‌ನಲ್ಲಿ ದ.ಕೊರಿಯಾ ವಿರುದ್ಧ 235-230 ಅಂಕಗಳ ಗೆಲುವು ಪಡೆದು ಚಿನ್ನಕ್ಕೆ ಕೊರಳೊಡ್ಡಿತು. ಓಜಸ್-ಜ್ಯೋತಿ ಜೋಡಿ ಕಾಂಪೌಂಡ್ ಮಿಶ್ರ ಡಬಲ್ಸ್‌ನಲ್ಲಿ ಚಿನ್ನ ಸಂಪಾದಿಸಿದ್ದರು. ಭಾರತಕ್ಕೆ ಆರ್ಚರಿಯಲ್ಲಿ ಇನ್ನೂ 2 ಪದಕ ಖಚಿತವಾಗಿದ್ದು, ಪುರುಷರ ಕಾಂಪೌಂಡ್ ಫೈನಲ್‌ನಲ್ಲಿ ಅಭಿಷೇಕ್, ಓಜಸ್ ಮುಖಾಮುಖಿಯಾಗಲಿದ್ದಾರೆ. ರೀಕರ್ವ್ ಪುರುಷ ಹಾಗೂ ಮಹಿಳಾ ತಂಡ ವಿಭಾಗಗಳಲ್ಲೂ ಭಾರತ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.