ಇಂದಿನಿಂದ ಬಾಂಗ್ಲಾ ವಿರುದ್ಧ 2ನೇ ಟೆಸ್ಟ್‌ : ತವರಲ್ಲಿ ಸತತ 18ನೇ ಸರಣಿ ಗೆಲ್ಲುತ್ತಾ ಭಾರತ?

KannadaprabhaNewsNetwork |  
Published : Sep 27, 2024, 01:19 AM ISTUpdated : Sep 27, 2024, 04:11 AM IST
ಕೆ.ಎಲ್‌.ರಾಹುಲ್‌ | Kannada Prabha

ಸಾರಾಂಶ

ತವರಿನಲ್ಲಿ ಸತತ ಗೆಲುವಿನ ನಗೆ ಬೀರುತ್ತಿರುವ ಟೀಂ ಇಂಡಿಯಾ, ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಈ ಪಂದ್ಯ ಗೆದ್ದರೆ ಭಾರತ ಸರಣಿಯನ್ನು ವಶಪಡಿಸಿಕೊಳ್ಳುವುದಲ್ಲದೆ, ತವರಿನಲ್ಲಿ ಸತತ 18ನೇ ಟೆಸ್ಟ್‌ ಸರಣಿ ಗೆಲುವಿನ ದಾಖಲೆ ಬರೆಯಲಿದೆ.  

ಕಾನ್ಪುರ: ತವರಿನಲ್ಲಿ ತನ್ನ ಟೆಸ್ಟ್‌ ಕೋಟೆಯನ್ನು ಭದ್ರಗೊಳಿಸುತ್ತಲೇ ಇರುವ ಟೀಂ ಇಂಡಿಯಾ ಈಗ ಮತ್ತೊಂದು ಸವಾಲಿಗೆ ಸಿದ್ಧವಾಗಿದೆ. ತನ್ನ ನೆಲದಲ್ಲಿ ಸೋಲಿಲ್ಲದ ಸರದಾರನಂತೆ ಮೆರೆದಾಡುತ್ತಿರುವ ಭಾರತ ತಂಡ ಶುಕ್ರವಾರದಿಂದ ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. 

ಎದುರಾಳಿಯ ಸವಾಲು ದೊಡ್ಡದಲ್ಲದಿದ್ದರೂ ತನ್ನ ಭದ್ರಕೋಟೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರತಕ್ಕಿದು ಮಹತ್ವದ ಪಂದ್ಯ. ಈ ಪಂದ್ಯ ಗೆದ್ದರೆ ಭಾರತ 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶಪಡಿಸಿಕೊಳ್ಳಲಿದೆ. ಜೊತೆಗೆ ತವರಿನಲ್ಲಿ ಸತತ 18ನೇ ಟೆಸ್ಟ್‌ ಸರಣಿ ಗೆದ್ದ ದಾಖಲೆ ಬರೆಯಲಿದೆ.ಆರ್‌.ಆಶ್ವಿನ್‌ ಹಾಗೂ ರವೀಂದ್ರ ಜಡೇಜಾ ಆಲ್ರೌಂಡ್‌ ಶೋ, ಶುಭ್‌ಮನ್‌ ಗಿಲ್‌ ಅಬ್ಬರದ ಶತಕ ಹಾಗೂ ರಿಷಭ್‌ ಪಂತ್‌ರ ಕಮ್‌ಬ್ಯಾಕ್‌ ಸೆಂಚುರಿ ನೆರವಿನಿಂದ ಭಾರತ ತಂಡ ಮೊದಲ ಟೆಸ್ಟ್‌ನಲ್ಲಿ 280 ರನ್‌ ಗೆಲುವು ಸಾಧಿಸಿತ್ತು. 

ಹಿರಿಯ ಆಟಗಾರರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಲಯ ಕಂಡುಕೊಳ್ಳಲು ವಿಫಲರಾಗಿದ್ದರು. ಹೀಗಾಗಿ ಕಾನ್ಪುರ ಟೆಸ್ಟ್‌ನಲ್ಲಾದರೂ ಕೊಹ್ಲಿ, ರೋಹಿತ್‌ ಬ್ಯಾಟರ್‌ನಿಂದ ದೊಡ್ಡ ಇನ್ನಿಂಗ್ಸ್‌ ಮೂಡಿಬರಲಿದೆಯೇ ಎಂಬ ಕುತೂಹಲವಿದೆ. ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಬೇಕಿದ್ದರೆ ಕೆ.ಎಲ್‌.ರಾಹುಲ್‌ ಕೂಡಾ ಮಿಂಚಬೇಕಿದೆ. 3 ಸ್ಪಿನ್ನರ್‌ಗಳು ಕಣಕ್ಕೆ?: 2ನೇ ಟೆಸ್ಟ್‌ ಪಂದ್ಯಕ್ಕೆ ಸ್ಪಿನ್‌ ಸ್ನೇಹಿ ಪಿಚ್‌ ಬಳಸಲಾಗುತ್ತದೆ. ಹೀಗಾಗಿ ಭಾರತ ಮೂವರು ಸ್ಪಿನ್ನರ್‌ಗಳು ಕಣಕ್ಕಿಳಿಯುವ ಸಾಧ್ಯತೆಯಿದೆ. ಎಡಗೈ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಿದೆ. ತಂಡಕ್ಕೆ ಹೆಚ್ಚುವರಿ ಬ್ಯಾಟರ್‌ ಅಗತ್ಯವಿದ್ದರೆ ಆಗ ಅಕ್ಷರ್‌ ಪಟೇಲ್‌ಗೆ ಸ್ಥಾನ ಸಿಗಬಹುದು. ಹೀಗಾದರೆ ವೇಗಿಗಳಾದ ಮೊಹಮದ್‌ ಸಿರಾಜ್‌ ಅಥವಾ ಆಕಾಶ್‌ದೀಪ್‌ ಜಾಗ ಬಿಟ್ಟುಕೊಡಬೇಕಾಗಬಹುದು.

ಪುಟಿದೇಳುತ್ತಾ ಬಾಂಗ್ಲಾ?:  ಆರಂಭಿಕ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಬಾಂಗ್ಲಾ ಪುಟಿದೇಳುವ ನಿರೀಕ್ಷೆಯಲ್ಲಿದೆ. ಇತ್ತೀಚೆಗಷ್ಟೇ ಪಾಕಿಸ್ತಾನವನ್ನು ಅವರದೇ ತವರಿನಲ್ಲಿ ಸೋಲಿಸಿ ಸರಣಿ ಗೆದ್ದಿದ್ದ ಬಾಂಗ್ಲಾ, ಈ ಬಾರಿ ಭಾರತ ವಿರುದ್ಧ ಸರಣಿ ಸೋಲು ತಪ್ಪಿಸಿಕೊಳ್ಳುವ ಕಾತರದಲ್ಲಿದೆ. ಅಲ್ಲದೆ ಭಾರತ ವಿರುದ್ಧ ಈ ವರೆಗೂ ಟೆಸ್ಟ್‌ನಲ್ಲಿ ಗೆಲ್ಲದ ಬಾಂಗ್ಲಾ ಚೊಚ್ಚಲ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಪಂದ್ಯದಲ್ಲಿ ಭಾರತದಂತೆ ಬಾಂಗ್ಲಾ ಕೂಡಾ ಮೂವರು ತಜ್ಞ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಲಾಗುತ್ತಿದೆ. ವೇಗಿ ನಹೀದ್‌ ರಾಣಾ ಬದಲು ತೈಜುಲ್ ಇಸ್ಲಾಂರನ್ನು ಆಡಿಸುವ ಸಾಧ್ಯತೆ ಇದೆ.

ಒಟ್ಟು ಮುಖಾಮುಖಿ: 14ಭಾರತ: 12

ಬಾಂಗ್ಲಾದೇಶ: 00ಡ್ರಾ: 02

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌, ರವೀಂದ್ರ ಜಡೇಜಾ, ಆರ್‌.ಅಶ್ವಿನ್‌, ಕುಲ್ದೀಪ್‌ ಯಾದವ್‌, ಮೊಹಮದ್‌ ಸಿರಾಜ್‌, ಜಸ್‌ಪ್ರೀತ್‌ ಬೂಮ್ರಾ.

ಬಾಂಗ್ಲಾದೇಶ: ಶದ್ಮನ್‌ ಇಸ್ಲಾಂ, ಝಾಕಿರ್‌ ಹಸನ್‌, ನಜ್ಮುಲ್‌ ಶಾಂತೋ(ನಾಯಕ), ಮೊಮಿನುಲ್‌ ಇಸ್ಲಾಂ, ಮುಷ್ಫಿಕುರ್‌ ರಹೀಂ, ಲಿಟನ್‌ ದಾಸ್‌, ಶಕೀಬ್‌ ಅಲ್‌ ಹಸನ್‌, ಮೆಹಿದಿ ಹಸನ್‌, ಟಸ್ಕಿನ್‌ ಅಹ್ಮದ್‌, ಹಸನ್‌ ಮಹ್ಮುದ್‌, ತೈಜುಲ್‌.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, ನೇರ ಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌

ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ಗೆ ಕೆಂಪು ಮಣ್ಣಿನ ಪಿಚ್‌ ಬಳಸಲಾಗಿತ್ತು. ಕಾನ್ಪುರ ಟೆಸ್ಟ್‌ಗೆ ಕಪ್ಪು ಮಣ್ಣಿನ ಪಿಚ್‌ ಆಯ್ಕೆ ಮಾಡಲಾಗಿದೆ. ಹೀಗಾಗಿ ಪಿಚ್‌ ನಿಧಾನವಾಗಿ ವರ್ತಿಸಲಿದೆ. ಹೆಚ್ಚಿನ ಬೌನ್ಸರ್‌ಗಳು ಇರುವುದಿಲ್ಲ. ಆರಂಭದಲ್ಲಿ ಬ್ಯಾಟರ್‌ಗಳಿಗೆ ರನ್‌ ಗಳಿಸುವುದು ಸುಲಭವಾಗಬಹುದು. ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳ ಪಾತ್ರ ನಿರ್ಣಾಯಕವಾಗಲಿದೆ.

ತವರಿನಲ್ಲಿ ಸತತ 17 ಸರಣಿ ಗೆದ್ದಿದೆ ಭಾರತ

ಭಾರತ ತಂಡವನ್ನು ತವರಿನಲ್ಲಿ ಸೋಲಿಸುವು ಯಾವುದೇ ತಂಡಗಳಿಗೂ ಪ್ರಮುಖ ಸವಾಲು. ಭಾರತ ತನ್ನ ತವರಿನಲ್ಲಿ ಕೊನೆ ಬಾರಿ ಟೆಸ್ಟ್‌ ಸರಣಿ ಸೋತಿದ್ದು 2012ರಲ್ಲಿ. ಇಂಗ್ಲೆಂಡ್‌ ವಿರುದ್ಧ ಸೋತ ಬಳಿಕ ಭಾರತ ಸತತ 17 ಸರಣಿಗಳಲ್ಲಿ ಅಜೇಯವಾಗಿ ಉಳಿದಿದೆ. ಈ ದಾಖಲೆಯನ್ನು ಉತ್ತಮಗೊಳಿಸುವ ಅವಕಾಶ ಭಾರತಕ್ಕಿದೆ. 

ಗೆದ್ದರೆ ಟೆಸ್ಟ್‌ ವಿಶ್ವಕಪ್‌ ಅಗ್ರಸ್ಥಾನ ಮತ್ತಷ್ಟು ಭದ್ರ

ಭಾರತ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಸತತ 3ನೇ ಬಾರಿ ಫೈನಲ್‌ಗೇರಲು ಕಾತರಿಸುತ್ತಿದೆ. ತಂಡ ಸದ್ಯ 2023-25ರ ಅವಧಿಯ ವಿಶ್ವ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಶೇ.71.67 ಗೆಲುವಿನ ಪ್ರತಿಶತದೊಂದಿಗೆ ಅಗ್ರಸ್ಥಾನದಲ್ಲಿದೆ. ಬಾಂಗ್ಲಾ ವಿರುದ್ಧ 2ನೇ ಪಂದ್ಯದಲ್ಲಿ ಗೆದ್ದರೆ ತಂಡ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಗೊಳಿಸಲಿದೆ. ಜೊತೆಗೆ ಫೈನಲ್‌ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಲಿದೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಶೇ.62.50 ಗೆಲುವಿನ ಪ್ರತಿಶತ ಹೊಂದಿದೆ.

ಪಂದ್ಯಕ್ಕೆ ಮಳೆ ಭೀತಿ

2ನೇ ಪಂದ್ಯಕ್ಕೆ ಭಾರಿ ಬಿರುಗಾಳಿ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶುಕ್ರವಾರ ಹಾಗೂ ಭಾನುವಾರ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚು. ಇತರ ದಿನಗಳಲ್ಲೂ ಕೆಲ ಸಮಯ ಪಂದ್ಯಕ್ಕೆ ಮಳೆ ತೊಡಕಾಗುವ ಭೀತಿ ಇದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ನಾನು ಗೆಲ್ಲುವ ಬಹುಮಾನಗಳನ್ನು ನನ್ನ ತಾಯಿಗೆ ಕಳಿಸುತ್ತೇನೆ: ಕೊಹ್ಲಿ!
ಇಂದಿನಿಂದ 4ನೇ ಆವೃತ್ತಿ ಮಹಿಳಾ ಪ್ರೀಮಿಯರ್‌ ಲೀಗ್‌