ನ್ಯೂಯಾರ್ಕ್: ಸ್ಫೋಟಕ ಬ್ಯಾಟರ್‌ಗಳಿದ್ದರೂ ಬೌಲರ್‌ಗಳ ಪರಾಕ್ರಮಕ್ಕೆ ಸಾಕ್ಷಿಯಾದ ಟಿ20 ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಸೋಲಿನ ರುಚಿ ತೋರಿಸಿದೆ. ಭಾನುವಾರ ನ್ಯೂಯಾರ್ಕ್ ಕ್ರೀಡಾಂಗಣದಲ್ಲಿ ನಡೆದ ಲೋ ಸ್ಕೋರ್ ಥ್ರಿಲ್ಲರ್ ಪಂದ್ಯದಲ್ಲಿ ರೋಹಿತ್ ಪಡೆಗೆ 6 ವಿಕೆಟ್ ಗೆಲುವು ಲಭಿಸಿತು. ಭಾರತ ಸತತ 2ನೇ ಜಯದೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದರೆ, ಪಾಕ್ ಸತತ 2ನೇ ಸೋಲಿನೊಂದಿಗೆ ಗುಂಪು ಹಂತದಲ್ಲೇ ಹೊರಬೀಳುವ ಆತಂಕಕ್ಕೆ ಒಳಗಾಗಿದೆ.
ಮೊದಲು ಬ್ಯಾಟ್ ಮಾಡಿದ ಭಾರತ 19 ಓವರಲ್ಲಿ 119ಕ್ಕೆ ಸರ್ವಪತನ ಕಂಡಿತು. ಗುರಿ ಸಣ್ಣದಾದರೂ ತನ್ನ ಬೌಲಿಂಗ್ ಪಡೆಯ ಮೇಲೆ ಹೆಚ್ಚಿನ ನಂಬಿಕೆ ಇರಿಸಿದ್ದ ಭಾರತ, ಗೆಲುವಿನ ವಿಶ್ವಾಸದೊಂದಿಗೆ ಫೀಲ್ಡ್‌ಗೆ ಇಳಿಯಿತು. ಒಂದೊಂದು ರನ್ ನೀಡಲೂ ಚೌಕಾಸಿ ಮಾಡಿದ ಭಾರತ, ಪಾಕ್‌ಅನ್ನು 7 ವಿಕೆಟ್ ಪಡೆದು 113 ರನ್‌ಗೆ ನಿಯಂತ್ರಿಸಿತು.
5ನೇ ಓವರಲ್ಲಿ ಬಾಬರ್ ಆಜಂ(13)ಗೆ ಪೆವಿಲಿಯನ್ ಹಾದಿ ತೋರಿದ ಬೂಮ್ರಾ, ಭಾರತದ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣರಾದರು. ದುಬೆ ಕೈಚೆಲ್ಲಿದ ಸುಲಭ ಕ್ಯಾಚ್‌ನ ಲಾಭ ಪಡೆದ ರಿಜ್ವಾನ್ 31 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಆದರೆ 15ನೇ ಓವರ್‌ನ ಮೊದಲ ಎಸೆತದಲ್ಲಿ ರಿಜ್ವಾನ್‌ಗೆ ಪೆವಿಲಿಯನ್ ಹಾದಿ ತೋರಿದ ಬೂಮ್ರಾ, ಪಂದ್ಯದ ದಿಕ್ಕು ಬದಲಿಸಿದರು. ಬಳಿಕ ತಂಡ ಸತತ ವಿಕೆಟ್ ಕಳೆದುಕೊಳ್ಳುವುದರ ಜೊತೆಗೆ ರನ್ ಗಳಿಸಲೂ ತಿಣುಕಾಡಿತು. ಉಸ್ಮಾನ್(13), ಫಖರ್ ಜಮಾನ್(13), ಶದಾಬ್ ಖಾನ್ (4), ಇಮಾದ್ ವಾಸಿಂ(15)ರನ್ನು ಕಟ್ಟಿಹಾಕಿದ ಭಾರತೀಯ ಬೌಲರ್ಸ್, ಪಾಕ್‌ನ 2ನೇ ಸೋಲಿಗೆ ಕಾರಣರಾದರು.ಬೆಂಕಿ ಉಂಡೆಗಳನ್ನು ಎಸೆದ ಬೂಮ್ರಾ 4 ಓವರ್‌ಗಳಲ್ಲಿ 14 ರನ್‌ಗೆ 3 ವಿಕೆಟ್ ಕಿತ್ತರು. ಹಾರ್ದಿಕ್ 2 ವಿಕೆಟ್ ಪಡೆದರು.
ಕೈಕೊಟ್ಟ ಬ್ಯಾಟರ್ಸ್: ಟಾಸ್ ಗೆದ್ದ ಬಾಬರ್ ಆಜಂ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಾಗಲೇ ಭಾರತಕ್ಕೆ ಆತಂಕ ಶುರುವಾಗಿತ್ತು. 2.4 ಓವರಲ್ಲಿ ತಂಡದ ಸ್ಕೋರ್ 19 ರನ್ ಆಗಿದ್ದಾಗ ವಿರಾಟ್ ಕೊಹ್ಲಿ(04), ರೋಹಿತ್ ಶರ್ಮಾ(13) ಔಟಾಗಿದ್ದು ತಂಡವನ್ನು ಮತ್ತಷ್ಟು ಕುಗ್ಗಿಸಿತು. ಆದರೆ ಭಡ್ತಿ ಪಡೆದು ಬಂದ ಅಕ್ಷರ್ ಪಟೇಲ್(20), ರಿಷಭ್ ಪಂತ್ ಜೊತೆ ಇನ್ನಿಂಗ್ಸ್ ಕಟ್ಟಿದರು. 8ನೇ ಓವರಲ್ಲಿ ಅಕ್ಷರ್ ಔಟಾದ ಬಳಿಕ ಕ್ರೀಸ್‌ಗೆ ಇಳಿದ ವಿಶ್ವ ನಂ.1 ಆಟಗಾರ ಸೂರ್ಯಕುಮಾರ್ 7 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. 11 ಓವರಲ್ಲಿ 89ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ತಂಡ ಬಳಿಕ ದಿಢೀರ್ ಕುಸಿತಕ್ಕೊಳಗಾಯಿತು.ದುಬೆ 3 ರನ್ ಗಳಿಸಲು 9 ಎಸೆತ ತೆಗೆದುಕೊಂಡರು. 17 ರನ್ ಗಳಿಸಿದ್ದಾಗ ಉಸ್ಮಾನ್ ಖಾನ್‌ರಿಂದ ಜೀವದಾನ ಪಡೆದಿದ್ದ ರಿಷಭ್, 31 ಎಸೆತಗಳಲ್ಲಿ 42 ರನ್ ಗಳಿಸಿ ಔಟಾಗುವುದರೊಂದಿಗೆ ತಂಡದ ರನ್ ಗಳಿಕೆಗೆ ಬ್ರೇಕ್ ಬಿತ್ತು. ಬಳಿಕ ಜಡೇಜಾ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾದರೆ, ಹಾರ್ದಿಕ್ ಗಳಿಸಿದ್ದು ಕೇವಲ 7 ರನ್. ನಸೀಂ ಶಾ, ಹ್ಯಾರಿಸ್ ರೌಫ್ ತಲಾ 3, ಅಮೀರ್ 2 ವಿಕೆಟ್ ಕಿತ್ತರು.
ಟರ್ನಿಂಗ್ ಪಾಯಿಂಟ್
ನಿಧಾನ ಆರಂಭ ಪಡೆದರೂ ರಿಜ್ವಾನ್ ಕ್ರೀಸ್‌ನಲ್ಲಿರುವ ವರೆಗೂ ಪಾಕ್ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಆದರೆ 15ನೇ ಓವರ್‌ನಲ್ಲಿ ಬೂಮ್ರಾ ಎಸೆತದಲ್ಲಿ ಬೌಲ್ಡ್ ಆಗಿ ರಿಜ್ವಾನ್ ಔಟಾಗುವುದರೊಂದಿಗೆ ಪಂದ್ಯ ಪಾಕ್‌ನ ಕೈ ಜಾರತೊಡಗಿತು. ಬಳಿಕ ಪಾಕ್ ಪುಟಿದೇಳಲಿಲ್ಲ.
63 ಡಾಟ್‌ಬಾಲ್: ಭಾರತದ ಇನ್ನಿಂಗ್ಸಲ್ಲಿ ಒಟ್ಟು 63 ಡಾಟ್‌ಬಾಲ್‌ಗಳಿದ್ದವು.
01ನೇ ಬಾರಿ: ಟಿ20ಯಲ್ಲಿ ಇದೇ ಮೊದಲ ಬಾರಿಗೆ ಭಾರತವನ್ನು ಪಾಕಿಸ್ತಾನ ಆಲೌಟ್ ಮಾಡಿತು.
01ನೇ ಬಾರಿ: ಟೀಂ ಇಂಡಿಯಾ ಟಿ20ಯಲ್ಲಿ ಆಲೌಟ್ ಆದ ಹೊರತಾಗಿಯೂ ಪಂದ್ಯ ಗೆದ್ದಿದ್ದು ಇದೇ ಮೊದಲು.