ನ್ಯೂಯಾರ್ಕ್: 11 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳಲು ಪಣ್ಣತೊಟ್ಟು ಟಿ20 ವಿಶ್ವಕಪ್‌ಗೆ ಕಣಕ್ಕಿಳಿದಿರುವ ಭಾರತ, ತನ್ನ ಅಭಿಯಾನವನ್ನು ಸುಲಭ ಜಯದೊಂದಿಗೆ ಆರಂಭಿಸಿದೆ. ಬುಧವಾರ ‘ಎ’ ಗುಂಪಿನ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಗೆಲುವು ದಾಖಲಿಸಿತು. ವೇಗಿಗಳಿಗೆ ಹೆಚ್ಚು ನೆರವು ಸಿಕ್ಕ ಪಿಚ್‌ನಲ್ಲಿ ಟಾಸ್ ಗೆದ್ದು ಮೊದಲು ಬೌಲ್ ಮಾಡಿದ ಭಾರತ, ಐರ್ಲೆಂಡನ್ನು 16 ಓವರಲ್ಲಿ ಕೇವಲ 96 ರನ್‌ಗೆ ಆಲೌಟ್ ಮಾಡಿತು. ಸುಲಭ ಗುರಿ ಬೆನ್ನತ್ತಿದ ಭಾರತ, 12.2 ಓವರಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕ ರೋಹಿತ್, 52 ರನ್ ಗಳಿಸಿದರು.ಉತ್ತಮ ಲಯದೊಂದಿಗೆ ವಿಶ್ವಕಪ್‌ಗೆ ಕಾಲಿಟ್ಟ ಐರ್ಲೆಂಡ್, ಭಾರತೀಯ ವೇಗಿಗಳ ದಾಳಿಗೆ ತತ್ತರಿಸಿತು. ಪಿಚ್ ಬಗ್ಗೆ ಸರಿಯಾದ ಅಧ್ಯಯನ ನಡೆಸಿ ಹಾರ್ದಿಕ್ ಸೇರಿ ನಾಲ್ವರು ವೇಗಿಗಳೊಂದಿಗೆ ಆಡಿದ ಭಾರತಕ್ಕೆ ನಿರೀಕ್ಷಿತ ಯಶಸ್ಸು ದೊರೆಯಿತು. 3ನೇ ಓವರ್ ಮುಗಿಯುವ ವೇಳೆಗೆ ಸ್ಫೋಟಕ ಆರಂಭಿಕರಾದ ನಾಯಕ ಪಾಲ್ ಸ್ಟರ್ಲಿಂಗ್ ಹಾಗೂ ಆ್ಯಂಡಿ ಬಾಲ್ಬರ್ನಿ ವಿಕೆಟ್‌ಗಳನ್ನು ಕಿತ್ತ ಅರ್ಶ್‌ದೀಪ್, ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಪವರ್-ಪ್ಲೇನಲ್ಲಿ 2 ವಿಕೆಟ್‌ಗೆ ಕೇವಲ 26 ರನ್ ಗಳಿಸಿದ ಐರ್ಲೆಂಡ್ ಬಳಿಕ ಚೇತರಿಸಿಕೊಳ್ಳಲಿಲ್ಲ. ಗರೆತ್ ಡೆಲಾನಿ 26, ಜೋಶ್ ಲಿಟ್ಲ್ 14 ರನ್ ಗಳಿಸಿ ಪ್ರತಿರೋಧ ತೋರಿದರೂ, ತಂಡದ ಮೊತ್ತವನ್ನು 100 ರನ್ ದಾಟಿಸಲು ಸಾಧ್ಯವಾಗಲಿಲ್ಲ.
ರೋಹಿತ್ ಆಕರ್ಷಕ ಆಟ: ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ, ಕೇವಲ 1 ರನ್‌ಗೆ ಔಟಾದರು. ಆದರೆ, ರೋಹಿತ್ ಆಕರ್ಷಕ ಬ್ಯಾಟಿಂಗ್ ನಡೆಸಿ ತಂಡದ ಜಯಕ್ಕೆ ನೆರವಾದರು. 3ನೇ ಕ್ರಮಾಂಕದಲ್ಲಿ ಆಡಿದ ರಿಷಭ್ ಪಂತ್ ನಾಯಕರಿಗೆ ಉತ್ತಮ ಬೆಂಬಲ ನೀಡಿದರು. ಇನ್ನಿಂಗ್ಸ್‌ನ ಆರಂಭದಲ್ಲೇ ಜೀವದಾನ ಪಡೆದ ರೋಹಿತ್, ಅದರ ಸಂಪೂರ್ಣ ಲಾಭವೆತ್ತಲು ಸಫಲರಾದರು.ಸ್ಕೋರ್: ಐರ್ಲೆಂಡ್ 16 ಓವರಲ್ಲಿ 96/10 (ಡೆಲಾನಿ 26, ಲಿಟ್ಲ್ 14, ಹಾರ್ದಿಕ್ 3-27, ಬೂಮ್ರಾ 2-6), ಭಾರತ 00.0 ಓವರಲ್ಲಿ 97/1 (ರೋಹಿತ್ 52, ಪಂತ್36*, ಅಡೈರ್ 1-16)