ಭಾರತದ ಬೋನಿಗೆ ಬಿದ್ದ ಬಾಂಗ್ಲಾ ಟೈಗರ್ಸ್‌: ಸರಣಿ 2-0 ಕ್ಲೀನ್‌ಸ್ವೀಪ್‌

KannadaprabhaNewsNetwork |  
Published : Oct 02, 2024, 01:09 AM IST
ಟ್ರೋಫಿ ಜೊತೆ ಭಾರತ | Kannada Prabha

ಸಾರಾಂಶ

2ನೇ ಟೆಸ್ಟ್‌. ಭಾರತಕ್ಕೆ 7 ವಿಕೆಟ್‌ ಗೆಲುವು. ಡ್ರಾಗೊಳ್ಳಬೇಕಿದ್ದ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದ ಭಾರತ. ಬಾಂಗ್ಲಾದೇಶ 2ನೇ ಇನ್ನಿಂಗ್ಸ್‌ನಲ್ಲಿ 146ಕ್ಕೆ ಆಲೌಟ್‌. 95 ರನ್‌ ಗುರಿ ಪಡೆದ ಭಾರತಕ್ಕೆ 17.2 ಓವರಲ್ಲೇ ಜಯ. ಜೈಸ್ವಾಲ್‌ ಅರ್ಧಶತಕ

ಕಾನ್ಪುರ: ಮಳೆ, ಒದ್ದೆ ಮೈದಾನದಿಂದಾಗಿ ಬರೋಬ್ಬರಿ ಎರಡೂವರೆ ದಿನದಾಟ ರದ್ದು. ಸಾಲದ್ದಕ್ಕೆ ಮಂದ ಬೆಳಕಿನ ಕಾಟ. ಹೀಗಾಗಿ ಇನ್ನುಳಿದ ಎರಡೂವರೆ ದಿನದಲ್ಲೇ ಟೆಸ್ಟ್‌ ಪಂದ್ಯ ಗೆಲ್ಲುವ ಟಾಸ್ಕ್‌. ಆದರೆ ಡ್ರಾಗೊಳ್ಳಲಿದೆ ಎಂದೇ ಊಹಿಸಲಾಗಿದ್ದ ಪಂದ್ಯವನ್ನು ಭಾರತ ಟಿ20 ಮೋಡ್‌ನಲ್ಲಿ ಆಡಿ ಗೆದ್ದಿದ್ದೇ ರೋಚಕ. ಮಂಗಳವಾರ ಬಾಂಗ್ಲಾದೇಶ ವಿರುದ್ಧ 2ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ 7 ವಿಕೆಟ್‌ ಭರ್ಜರಿ ಜಯಗಳಿಸಿತು. ಇದರೊಂದಿಗೆ 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿಕೊಂಡಿತು. ಭಾರತ ವಿರುದ್ಧ ಚೊಚ್ಚಲ ಟೆಸ್ಟ್‌ ಪಂದ್ಯ ಗೆಲ್ಲುವ ಬಾಂಗ್ಲಾದೇಶದ ಕನಸು ಮತ್ತೆ ನುಚ್ಚುನೂರಾಯಿತು.ಭಾರತದ ಆಕ್ರಮಣಕಾರಿ ಆಟಕ್ಕೆ ಸಾಕ್ಷಿಯಾಗಿದ್ದ ಪಂದ್ಯದ 4ನೇ ದಿನವಾದ ಸೋಮವಾರ ಬಾಂಗ್ಲಾ 2 ವಿಕೆಟ್‌ಗೆ 26 ರನ್‌ ಗಳಿಸಿತ್ತು. ಕೊನೆ ದಿನವಾದ ಮಂಗಳವಾರ ಬಾಂಗ್ಲಾವನ್ನು ಕಡಿಮೆ ಮೊತ್ತಕ್ಕೆ ಆಲೌಟ್‌ ಮಾಡುವ ಗುರಿ ಇಟ್ಟುಕೊಂಡಿದ್ದ ಭಾರತ ಅದರಲ್ಲಿ ಸಂಪೂರ್ಣ ಯಶ ಕಂಡಿತು. ಬಾಂಗ್ಲಾ ಕೇವಲ 146ಕ್ಕೆ ಗಂಟುಮೂಟೆ ಕಟ್ಟಿತು.ಭಾರತೀಯರ ದಾಳಿಯನ್ನು ಅಲ್ಪ ಮಟ್ಟಿಗೆ ಎದುರಿಸಿ ನಿಲ್ಲಲು ಸಾಧ್ಯವಾಗಿದ್ದು ಶದ್ಮನ್‌ ಇಸ್ಲಾಂ ಹಾಗೂ ಮುಷ್ಫಿಕುರ್‌ ರಹೀಂಗೆ ಮಾತ್ರ. ಆರಂಭಿಕ ಆಟಗಾರ ಶದ್ಮನ್‌ 101 ಎಸೆತಗಳಲ್ಲಿ 50 ರನ್‌ ಸಿಡಿಸಿದರು. ರಹೀಂ ಗಳಿಸಿದ್ದು 37 ರನ್‌. ಉಳಿದಂತೆ ನಾಯಕ ನಜ್ಮುಲ್‌ ಹೊಸೈನ್‌ 19 ರನ್‌ ಸಿಡಿಸಿದರು. 91ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದ ತಂಡ ಬಳಿಕ 3 ರನ್‌ ಸೇರಿಸುವಷ್ಟರಲ್ಲಿ ಮತ್ತೆ 4 ವಿಕೆಟ್‌ ನಷ್ಟಕ್ಕೊಳಗಾಯಿತು. ಆದ ಬಳಿಕ ತಂಡ ಚೇತರಿಸಿಕೊಳ್ಳಲಿಲ್ಲ. ಭಾರತ ಪರ ಅಶ್ವಿನ್‌, ಬೂಮ್ರಾ, ಜಡೇಜಾ ತಲಾ 3 ವಿಕೆಟ್‌ ಕಿತ್ತರು.ಜೈಸ್ವಾಲ್‌ ಅಬ್ಬರ: ಮೊದಲ ಇನ್ನಿಂಗ್ಸ್‌ನಲ್ಲಿ 52 ರನ್‌ ಹಿನ್ನಡೆಗೊಳಗಾಗಿದ್ದ ಬಾಂಗ್ಲಾ, 2ನೇ ಇನ್ನಿಂಗ್ಸ್‌ನ ಕಳಪೆ ಆಟದ ಬಳಿಕ ಭಾರತಕ್ಕೆ ನೀಡಿದ ಗುರಿ ಕೇವಲ 95 ರನ್‌. ಇದು ಭಾರತಕ್ಕೆ ಸುಲಭ ತುತ್ತಾಯಿತು. ತಂಡ 17.2 ಓವರ್‌ಗಳಲ್ಲಿ ಜಯಗಳಿಸಿತು. ನಾಯಕ ರೋಹಿತ್‌ ಶರ್ಮಾ 8 ರನ್‌ ಗಳಿಸಿ ಔಟಾದ ಬೆನ್ನಲ್ಲೇ, ಶುಭ್‌ಮನ್‌ ಗಿಲ್‌(6) ಕೂಡಾ ಪೆವಿಲಿಯನ್‌ ಮರಳಿದರು. ಆದರೆ ಯಶಸ್ವಿ ಜೈಸ್ವಾಲ್‌ ಮತ್ತೆ ಸ್ಫೋಟಕ ಆಟವಾಡಿದರು. ಅವರು 45 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್‌ನೊಂದಿಗೆ 51 ರನ್‌ ಸಿಡಿಸಿದರು. ಅವರ ಔಟಾದ ಬಳಿಕ ವಿರಾಟ್‌ ಕೊಹ್ಲಿ(ಔಟಾಗದೆ 29) ಹಾಗೂ ರಿಷಭ್‌ ಪಂತ್‌(ಔಟಾಗದೆ 4) ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ 233ಕ್ಕೆ ಆಲೌಟಾಗಿದ್ದರೆ, ಭಾರತ ಸ್ಫೋಟಕ ಆಟವಾಡಿ 9 ವಿಕೆಟ್‌ಗೆ 285 ರನ್‌ ಕಲೆಹಾಕಿ ಡಿಕ್ಲೇರ್‌ ಘೋಷಿಸಿತ್ತು. ಮೊದಲ ಪಂದ್ಯದಲ್ಲಿ ಭಾರತ 280 ರನ್‌ ಗೆಲುವು ಸಾಧಿಸಿತ್ತು.ಸ್ಕೋರ್: ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ 233/10 ಮತ್ತು 2ನೇ ಇನ್ನಿಂಗ್ಸ್‌ನಲ್ಲಿ 146/10 (ಶದ್ಮಾನ್‌ 50, ರಹೀಂ 37, ಬೂಮ್ರಾ 3-17, ಜಡೇಜಾ 3-34, ಅಶ್ವಿನ್‌ 3-50), ಭಾರತ ಮೊದಲ ಇನ್ನಿಂಗ್ಸ್‌ 285/9 ಡಿಕ್ಲೇರ್‌ ಮತ್ತು 2ನೇ ಇನ್ನಿಂಗ್ಸ್‌ನಲ್ಲಿ 98/3 (ಜೈಸ್ವಾಲ್‌ 51, ಕೊಹ್ಲಿ 29*, ಮೀರಾಜ್‌ 2-44)ಪಂದ್ಯಶ್ರೇಷ್ಠ: ಯಶಸ್ವಿ ಜೈಸ್ವಾಲ್‌, ಸರಣಿಶ್ರೇಷ್ಠ: ಆರ್‌.ಅಶ್ವಿನ್‌

PREV

Recommended Stories

ಭಾರತದ ‘ಬಾಜ್‌ಬಾಲ್‌’ ಆಟಕ್ಕೆ ಬೆಚ್ಚಿದ ಇಂಗ್ಲೆಂಡ್‌!
ಮಳೆಯ ನಡುವೆ ಜಾರಿ ಬಿದ್ದ ಟೀಂ ಇಂಡಿಯಾ!