6 ಪದಕಗಳೊಂದಿಗೆ ಪ್ಯಾರಿಸ್‌ ಗೇಮ್ಸ್‌ನಲ್ಲಿ ಅಭಿಯಾನ ಕೊನೆಗೊಳಿಸಿದ ಭಾರತದ ಕ್ರೀಡಾಪಟುಗಳು

KannadaprabhaNewsNetwork |  
Published : Aug 11, 2024, 01:37 AM ISTUpdated : Aug 11, 2024, 04:06 AM IST
ಪದಕ ವಿಜೇತರು | Kannada Prabha

ಸಾರಾಂಶ

6 ಪದಕಗಳೊಂದಿಗೆ ಪ್ಯಾರಿಸ್‌ ಗೇಮ್ಸ್‌ನಲ್ಲಿ ಅಭಿಯಾನ ಕೊನೆಗೊಳಿಸಿದ ಭಾರತದ ಕ್ರೀಡಾಪಟುಗಳು. ಕಳೆದ ಬಾರಿಗಿಂತಲೂ ಕಡಿಮೆ ಪದಕ, ಚಿನ್ನದ ಕನಸು ಭಗ್ನ. ಕೊನೆ ದಿನ ಕುಸ್ತಿ, ಗಾಲ್ಫ್‌ನಲ್ಲಿ ಪದಕವಿಲ್ಲ

ಪ್ಯಾರಿಸ್‌: ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ. ಎರಡಂಕಿ ಪದಕ ಗೆಲ್ಲುವ ನಿರೀಕ್ಷೆಯೊಂದಿಗೆ ಪ್ಯಾರಿಸ್‌ ವಿಮಾನವೇರಿದ್ದ ಭಾರತದ ಕ್ರೀಡಾಪಟುಗಳು, ಕೇವಲ 6 ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಕೊನೆ ದಿನವಾದ ಶನಿವಾರ ಭಾರತಕ್ಕೆ ಯಾವುದೇ ಪದಕ ಸಿಗಲಿಲ್ಲ.

ಭಾರತದಿಂದ ಈ ಬಾರಿ ಒಟ್ಟು 117 ಸ್ಪರ್ಧಿಗಳು ಪ್ಯಾರಿಸ್‌ಗೆ ತೆರಳಿದ್ದರು. ಒಟ್ಟು 16 ಕ್ರೀಡೆಗಳಲ್ಲಿ ಭಾರತ ಸ್ಪರ್ಧಿಸಿತ್ತು. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಕ್ರೀಡಾಪಟುಗಳು ಪದಕ ಗೆಲ್ಲದೆ ತವರಿಗೆ ಮರಳಿದರೆ, ಹೆಚ್ಚೇನೂ ಭರವಸೆ ಇಲ್ಲದಿದ್ದ ಸ್ಪರ್ಧಿಗಳು ಪದಕ ಗೆದ್ದು ಭಾರತದ ಮಾನ ಕಾಪಾಡಿದರು. ಶೂಟಿಂಗ್‌ನಲ್ಲಿ ಒಟ್ಟು 3 ಪದಕ ಗೆದ್ದರೆ, ಹಾಕಿ, ಅಥ್ಲೆಟಿಕ್ಸ್‌ ಹಾಗೂ ಕುಸ್ತಿಯಲ್ಲಿ ತಲಾ ಒಂದೊಂದು ಪದಕಗಳು ಭಾರತದ ಖಾತೆಗೆ ಸೇರ್ಪಡೆಗೊಂಡವು. 

ಪದಕ ವಿಜೇತರು: ಜಾವೆಲಿನ್‌ ಎಸೆತದಲ್ಲಿ ನೀರಜ್‌ ಚೋಪ್ರಾ ಬೆಳ್ಳಿ ಪದಕ ಗೆದ್ದರೆ, ಶೂಟಿಂಗ್‌ನ 10 ಮೀ. ಏರ್‌ ಪಿಸ್ತೂಲ್‌ನಲ್ಲಿ ಮನು ಭಾಕರ್‌, 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಮನು ಹಾಗೂ ಸರಬ್ಜೋತ್‌ ಸಿಂಗ್‌, ಪುರುಷರ 50 ಮೀ. ರೈಫಲ್‌ 3 ಪೊಸಿಷನ್‌ನಲ್ಲಿ ಸ್ವಪ್ನಿಲ್‌ ಕುಸಾಲೆ ಕಂಚು ತಮ್ಮದಾಗಿಸಿಕೊಂಡಿದ್ದಾರೆ. ಪುರುಷರ ಹಾಕಿ ತಂಡ ಕಂಚು ಹಾಗೂ ಕುಸ್ತಿಯ 57 ಕೆ.ಜಿ. ವಿಭಾಗದಲ್ಲಿ ಅಮನ್‌ ಶೆರಾವತ್‌ ಕಂಚು ಜಯಿಸಿದ್ದಾರೆ.

ಕಳೆದ ಬಾರಿಗಿಂತ ಒಂದು ಪದಕ ಕಡಿಮೆ ಗೆದ್ದ ಭಾರತ

ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಸಾರ್ವಕಾಲಿಕ ಶ್ರೇಷ್ಠ 7 ಪದಕ ಗೆದ್ದಿತ್ತು. 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಭಾರತೀಯರು ತಮ್ಮದಾಗಿಸಿಕೊಂಡಿದ್ದರು. ಈ ಬಾರಿ ಭಾರತಕ್ಕೆ ಕಳೆದ ಬಾರಿಗಿಂತ ಕಡಿಮೆ ಪದಕ ಲಭಿಸಿದೆ.

ಒಂದೂ ಚಿನ್ನದ ಪದಕವಿಲ್ಲ

ಭಾರತದ ಕ್ರೀಡಾಪಟುಗಳು ಈ ಬಾರಿ ಒಂದಕ್ಕಿಂತ ಹೆಚ್ಚು ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದರೆ ಪ್ಯಾರಿಸ್‌ನಲ್ಲಿ ಒಂದೂ ಚಿನ್ನದ ಪದಕ ಲಭಿಸಿಲ್ಲ. ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್‌ ಚಿನ್ನ ಗೆದ್ದಿದ್ದರು. ಅದಕ್ಕೂ ಮುನ್ನ 2008ರಲ್ಲಿ ಶೂಟರ್‌ ಅಭಿನವ್‌ ಬಿಂದ್ರಾ ಚಿನ್ನ ಪಡೆದಿದ್ದರು. ಈ ವರ್ಷ ವಿನೇಶ್‌ ಫೋಗಟ್‌ ಫೈನಲ್‌ಗೇರಿದ್ದಾಗ ಚಿನ್ನದ ಭರವಸೆಯಿತ್ತು. ಆದರೆ ಪಂದ್ಯಕ್ಕೂ ಮುನ್ನ ಅನರ್ಹರಾದರು. ಜಾವೆಲಿನ್‌ನಲ್ಲಿ ನೀರಜ್ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತಾದರೂ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. 

ಹಲವು ಪದಕಗಳು ಜಸ್ಟ್‌ ಮಿಸ್‌!

ಭಾರತಕ್ಕೆ ಈ ಬಾರಿ ಹಲವು ಪದಕಗಳು ಅಲ್ಪದರಲ್ಲೇ ಕೈ ತಪ್ಪಿವೆ. ಹಲವರು 4ನೇ ಸ್ಥಾನ ಪಡೆದು ಕಂಚು ಗೆಲ್ಲುವ ಅವಕಾಶ ಕಳೆದುಕೊಂಡರು. ಮಹಿಳೆಯರ 25 ಮೀ. ಏರ್ ಪಿಸ್ತೂಲ್‌ನಲ್ಲಿ ಮನು ಭಾಕರ್‌, ಪುರುಷರ 10 ಮೀ. ಏರ್ ರೈಫಲ್‌ನಲ್ಲಿ ಅರ್ಜುನ್‌ ಬಾಬುತಾ, ಆರ್ಚರಿಯ ಮಿಶ್ರ ತಂಡ ವಿಭಾಗದಲ್ಲಿ ಧೀರಜ್‌-ಅಂಕಿತಾ, ಸ್ಕೀಟ್‌ ಶೂಟಿಂಗ್‌ನ ಮಿಶ್ರ ತಂಡ ವಿಭಾಗದಲ್ಲಿ ಅನಂತ್‌ಜೀತ್‌-ಮಹೇಶ್ವರಿ, ಬ್ಯಾಡ್ಮಿಂಟನ್‌ ಪುರುಷರ ತಂಡ ವಿಭಾಗದಲ್ಲಿ ಲಕ್ಷ್ಯ ಸೇನ್‌, ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಕೂಡಾ 4ನೇ ಸ್ಥಾನ ಪಡೆದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಮುಳುಗುತ್ತಿದ್ದ ಭಾರತಕ್ಕೆ ಬೆಳಕಾದ ‘ಸೂರ್ಯ’!
ಪಾಕಿಸ್ತಾನದಿಂದ ಯು-ಟರ್ನ್‌: ಟಿ20 ವಿಶ್ವಕಪ್ಪಲ್ಲಿ ಭಾರತ ವಿರುದ್ಧ ಕಣಕ್ಕೆ?