ಭಾರತ ಹಾಕಿ ತಂಡದ ಮಡಿಲಿಗೆ 5ನೇ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ

KannadaprabhaNewsNetwork |  
Published : Sep 18, 2024, 01:57 AM IST
ಫೈನಲ್‌ನಲ್ಲಿ ಚೀನಾವನ್ನು ಸೋಲಿಸಿ ಪ್ರಶಸ್ತಿ ಎತ್ತಿಹಿಡಿದ ಭಾರತ ಹಾಕಿ ತಂಡ.  | Kannada Prabha

ಸಾರಾಂಶ

ಫೈನಲ್‌ನಲ್ಲಿ ಚೀನಾ ವಿರುದ್ಧ 1-0 ಗೋಲಿನ ಗೆಲುವು. ಪಂದ್ಯ ಮುಕ್ತಾಯಗೊಳ್ಳಲು 9 ನಿಮಿಷ ಬಾಕಿ ಇದ್ದಾಗ ಗೋಲು ಬಾರಿಸಿ ಗೆಲುವು ದಾಖಲಿಸಿದ ಭಾರತ. ಸತತ 2ನೇ ಬಾರಿಗೆ ಚಾಂಪಿಯನ್‌ ಪಟ್ಟ.

ಹುಲುನ್‌ಬ್ಯುರ್‌(ಚೀನಾ): ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಮಂಗಳವಾರ ಚೀನಾ ವಿರುದ್ಧ ನಡೆದ ಫೈನಲ್‌ನಲ್ಲಿ 1-0 ಗೋಲಿನಿಂದ ಗೆಲುವು ಸಾಧಿಸಿದ ಭಾರತ, 5ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಿತು.

ಭಾರತ, ಟೂರ್ನಿಯಲ್ಲಿ ಆಡಿದ ಎಲ್ಲಾ 7 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಟ್ರೋಫಿಗೆ ಮುತ್ತಿಟ್ಟಿತು. ಡಿಫೆಂಡರ್‌ ಜುಗರಾಜ್‌ ಸಿಂಗ್‌ರ ಅಪರೂಪದ ಫೀಲ್ಡ್‌ ಗೋಲು, ಭಾರತವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿತು.

ಹರ್ಮನ್‌ಪ್ರೀತ್‌ ಸಿಂಗ್‌ ಪಡೆಗೆ ಫೈನಲ್‌ ಗೆಲುವು ಅಷ್ಟು ಸುಲಭವಾಗಿ ದಕ್ಕಲಿಲ್ಲ. ಪಂದ್ಯದ ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಚೀನಾದ ರಕ್ಷಣಾ ಪಡೆಯನ್ನು ಭೇದಿಸಲು ಭಾರತೀಯರಿಗೆ ಸಾಧ್ಯವಾಗಲಿಲ್ಲ.

ಕೊನೆಗೂ 51ನೇ ನಿಮಿಷದಲ್ಲಿ ಜುಗರಾಜ್‌ ಗೋಲು ಬಾರಿಸಿದರು. ಆ ಗೋಲು ಪ್ಯಾರಿಸ್‌ ಒಲಿಂಪಿಕ್ಸ್ ಕಂಚು ವಿಜೇತ ಭಾರತಕ್ಕೆ ಗೆಲುವಿನ ಗೋಲಾಯಿತು.

ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಕೇವಲ 2ನೇ ಬಾರಿಗೆ ಫೈನಲ್‌ನಲ್ಲಿ ಆಡಿದರೂ, ಚೀನಾ ತೋರಿದ ಪ್ರಬುದ್ಧತೆ, ಹೋರಾಟ ಭಾರತೀಯರ ಮನವನ್ನೂ ಗೆದ್ದಿತು. ಇದಕ್ಕೂ ಮುನ್ನ ಚೀನಾ ಟೂರ್ನಿವೊಂದರ ಫೈನಲ್‌ನಲ್ಲಿ ಆಡಿದ್ದು 2006ರ ಏಷ್ಯನ್‌ ಗೇಮ್ಸ್‌ನಲ್ಲಿ. ಆಗಲೂ ಚೀನಾ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

ಗೆಲ್ಲುವ ಫೇವರಿಟ್ಸ್‌ ಎನಿಸಿಕೊಂಡು ಭಾರತ ಫೈನಲ್‌ಗೆ ಕಾಲಿಟ್ಟಿತು. ಲೀಗ್‌ ಹಂತದ ಪಂದ್ಯದಲ್ಲಿ ಚೀನಾವನ್ನು 3-0 ಗೋಲುಗಳಿಂದ ಮಣಿಸಿದ್ದ ಭಾರತ, ಈ ಪಂದ್ಯವನ್ನೂ ದೊಡ್ಡ ಅಂತರದಲ್ಲಿ ಗೆಲ್ಲುವ ನಿರೀಕ್ಷೆಯಿತ್ತು. ಆದರೆ, ಚೀನಾದಿಂದ ಪ್ರಬಲ ಪೈಪೋಟಿ ಎದುರಾಯಿತು.

ಪಂದ್ಯದ ಆರಂಭದಲ್ಲೇ ರಾಜ್‌ಕುಮಾರ್‌ ಪಾಲ್‌ ಗೋಲು ಬಾರಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ 10ನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್‌ ದೊರೆಯಿತು. ಆ ಅವಕಾಶವೂ ವ್ಯರ್ಥವಾಯಿತು. 2 ನಿಮಿಷ ಬಳಿಕ ನೀಲಕಂಠ ಶರ್ಮಾ ಅವರ ಗೋಲು ಬಾರಿಸುವ ಪ್ರಯತ್ನವನ್ನು ಚೀನಾದ ವಾಂಗ್‌ ವಿಫಲಗೊಳಿಸಿದರು. ಮೊದಲ ಕ್ವಾರ್ಟರ್‌ ಮುಗಿಯಲು ಕೆಲವೇ ಸೆಕೆಂಡ್‌ಗಳು ಬಾಕಿ ಇದ್ದಾಗ, ಭಾರತ ಮೊದಲ ಪೆನಾಲ್ಟಿ ಕಾರ್ನರ್‌ ಬಿಟ್ಟುಕೊಟ್ಟಿತು. ಆದರೆ, ಚೀನಾಕ್ಕೆ ಗೋಲು ಬಾರಿಸಲು ಭಾರತದ ಗೋಲ್‌ ಕೀಪರ್‌ ಕೃಷನ್‌ ಪಾಠಕ್‌ ಬಿಡಲಿಲ್ಲ.

2ನೇ ಕ್ವಾರ್ಟರ್‌ನಲ್ಲೂ ಭಾರತ ಚೆಂಡಿನ ಮೇಲೆ ಹೆಚ್ಚು ಹಿಡಿತ ಸಾಧಿಸಿದರೂ, ಚೀನಾದಿಂದ ಉತ್ತಮ ರಕ್ಷಣೆ ಕಂಡುಬಂತು. ದ್ವಿತೀಯಾರ್ಧದಲ್ಲಿ ಭಾರತ ಹೆಚ್ಚು ಆಕ್ರಮಣಕಾರಿಯಾಗಿ ಆಡಿದರೂ, ಚೀನಾದಿಂದ ಧೃತಿಗೆಡಲಿಲ್ಲ. ಆದರೆ ನಿಗದಿತ ಸಮಯ ಮುಕ್ತಾಯಗೊಳ್ಳಲು ಕೇವಲ 9 ನಿಮಿಷ ಬಾಕಿ ಇದ್ದಾಗ, ಭಾರತ ಗೋಲು ಬಾರಿಸಿ ಗೆಲುವಿನ ಸಂಭ್ರಮ ಆಚರಿಸಿತು.ಅತಿಹೆಚ್ಚು ಬಾರಿ ಟ್ರೋಫಿ

ಗೆದ್ದ ತಂಡ ಭಾರತ!

ಭಾರತಕ್ಕಿದು 5ನೇ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ. 2011ರ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿದ್ದ ಭಾರತ, 2016ರಲ್ಲಿ 2ನೇ ಬಾರಿಗೆ ಪ್ರಶಸ್ತಿ ಜಯಿಸಿತ್ತು. 2018ರಲ್ಲಿ ಪಾಕಿಸ್ತಾನದೊಂದಿಗೆ ಟ್ರೋಫಿ ಹಂಚಿಕೊಂಡಿದ್ದ ಭಾರತ, 2023ರಲ್ಲಿ ಚೆನ್ನೈನಲ್ಲಿ ನಡೆದ ಟೂರ್ನಿಯಲ್ಲಿ 4ನೇ ಬಾರಿಗೆ ಚಾಂಪಿಯನ್‌ ಆಗಿತ್ತು. ಇದೀಗ 5ನೇ ಸಲ ಪ್ರಶಸ್ತಿ ಗೆದ್ದು, ಟೂರ್ನಿ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಚಾಂಪಿಯನ್‌ ಆದ ತಂಡ ಎನ್ನುವ ದಾಖಲೆಯನ್ನು ಮುಂದುವರಿಸಿದೆ. ಪಾಕಿಸ್ತಾನ 3, ದ.ಕೊರಿಯಾ 1 ಬಾರಿ ಗೆದ್ದಿದೆ.ಆಟಗಾರರಿಗೆ ₹3 ಲಕ್ಷ ಬಹುಮಾನ

ಘೋಷಿಸಿದ ಹಾಕಿ ಇಂಡಿಯಾ!

ಭಾರತ ಚಾಂಪಿಯನ್‌ ಆಗುತ್ತಿದ್ದಂತೆ ಹಾಕಿ ಇಂಡಿಯಾ ನಗದು ಬಹುಮಾನ ಘೋಷಿಸಿತು. ಪ್ರತಿ ಆಟಗಾರರಿಗೆ ₹3 ಲಕ್ಷ ಹಾಗೂ ಪ್ರತಿ ಸಹಾಯಕ ಸಿಬ್ಬಂದಿಗೆ ₹1.5 ಲಕ್ಷ ಬಹುಮಾನ ನೀಡುವುದಾಗಿ ಪ್ರಕಟಿಸಿದೆ.==

ಪಾಕ್‌ಗೆ 3ನೇ ಸ್ಥಾನ

ಫೈನಲ್‌ಗೂ ಮುನ್ನ ನಡೆದ 3-4ನೇ ಸ್ಥಾನಕ್ಕಾಗಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಮಾಜಿ ಚಾಂಪಿಯನ್‌ ಪಾಕಿಸ್ತಾನ 5-2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!