;Resize=(412,232))
ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ನಡುವೆ ಫೆ.15ರ ಟಿ20 ವಿಶ್ವಕಪ್ ಪಂದ್ಯ ಖಚಿತವಾಗುತ್ತಿದ್ದಂತೆಯೇ ಭಾರತದ ಪ್ರಮುಖ ನಗರಗಳಿಂದ ಶ್ರೀಲಂಕಾದ ಕೊಲಂಬೊಗೆ ತೆರಳುವ ವಿಮಾನಗಳ ದರ ಗಗನಕ್ಕೇರಿದೆ. ಬೆಂಗಳೂರಿನಿಂದ ಫೆ.14ರಂದು ಕೊಲಂಬೊಗೆ ಹೋಗಿ ಪಂದ್ಯದ ಮರುದಿನ ಅಂದರೆ ಫೆ.16ಕ್ಕೆ ವಾಪಸಾಗಲು ರೌಂಡ್ ಟ್ರಿಪ್ ಟಿಕೆಟ್ ದರ 85 ಸಾವಿರದಿಂದ ₹1.03 ಲಕ್ಷದ ವರೆಗೂ ಇದೆ.
ಇಂಡಿಗೋ ಹಾಗೂ ಏರ್‌ಇಂಡಿಯಾ ವಿಮಾನ ದರಗಳನ್ನು ಪರಿಶೀಲಿಸಿದಾಗ, ಸಾಮಾನ್ಯ ದಿನಗಳ ರೌಂಡ್ ಟ್ರಿಪ್ ದರ ₹40000-₹50000 ಇದೆ. ಆದರೆ ಫೆ.14-16ರ ರೌಂಡ್ ಟ್ರಿಪ್ ದರದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಲ್ಲದೆ, ಕೆಲ ವಿಮಾನಗಳ ಟಿಕೆಟ್‌ಗಳು ಈಗಾಗಲೇ ಸೋಲ್ಡ್‌ಔಟ್ ಆಗಿದ್ದಾಗಿ ತೋರಿಸುತ್ತಿದೆ. ಇನ್ನು, ಮುಂಬೈ ಹಾಗೂ ಕೊಲಂಬೊ ರೌಂಡ್ ಟ್ರಿಪ್ ದರ ₹85000-₹107000 ವರೆಗೂ ಇದೆ. ಈ ಎರಡು ನಗರಗಳಿಂದಲೇ ಹೆಚ್ಚಾಗಿ ಐಟಿ ಉದ್ಯೋಗಿಗಳು, ಉದ್ಯಮಿಗಳು ಪ್ರಯಾಣ ಬೆಳೆಸುವುದರಿಂದ ವಿಮಾನ ದರ ಬೇರೆ ನಗರಗಳಿಗಿಂತ ಹೆಚ್ಚಾಗಿವೆ. ಇದೇ ವೇಳೆ ಚೆನ್ನೈ-ಕೊಲಂಬೊ ರೌಂಡ್ ಟ್ರಿಪ್ ದರ ₹55000, ಕೋಲ್ಕತಾ-ಕೊಲಂಬೊ ರೌಂಡ್ ಟ್ರಿಪ್ ₹65000, ನವದೆಹಲಿ-ಕೊಲಂಬೊ ರೌಂಡ್ ಟ್ರಿಪ್ ದರ ₹65000 ಇದೆ.
ಪಂದ್ಯದಿಂದಾಗಿ ಕೊಲಂಬೊದಲ್ಲಿ ಈಗಾಗಲೇ ಹೋಟೆಲ್ ಕೋಣೆಗಳ ದರ ಕೂಡಾ ಗಗನಕ್ಕೇರಿದ್ದು, ಶ್ರೀಲಂಕಾದ ಪ್ರವಾಸೋದ್ಯಮ ಕೂಡಾ ಭಾರೀ ಆದಾಯ ನಿರೀಕ್ಷೆಯಲ್ಲಿದೆ.