ಹೈದರಾಬಾದ್: 5 ಪಂದ್ಯಗಳ ಟೆಸ್ಟ್ ಸರಣಿ ಆಡಲು ಭಾರತಕ್ಕೆ ಆಗಮಿಸಿರುವ ಇಂಗ್ಲೆಂಡ್ ತಂಡಕ್ಕೆ ನಿರೀಕ್ಷೆಯಂತೆಯೇ ಆರಂಭಿಕ ಟೆಸ್ಟ್‌ನಲ್ಲಿ ಸ್ಪಿನ್ ಸವಾಲು ಎದುರಾಗುವ ಸಾಧ್ಯತೆಯಿದೆ.
ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಜೊತೆಗೆ ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್ ಕೂಡಾ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುವ ಸುಳಿವು ನೀಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್, ‘ಪಿಚ್ ಬಗ್ಗೆ ಈಗಲೇ ನಿರ್ಧಾರಕ್ಕೆ ಬರುವುದು ಕಷ್ಟ. ಪಂದ್ಯ ಸಾಗಿದಂತೆ ಪಿಚ್ ಹೇಗೆ ವರ್ತಿಸಲಿದೆ ಎಂಬುದು ಗೊತ್ತಾಗಲಿದೆ.
ಆದರೆ ಪಿಚ್ ಸ್ವಲ್ಪ ತಿರುವು ಇರಬಹುದು. ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಬಹುದು’ ಎಂದಿದ್ದಾರೆ.ಸಾಮಾನ್ಯವಾಗಿ ಹೈದರಾಬಾದ್ ಪಿಚ್ ಬ್ಯಾಟರ್‌ಗಳಿಗೆ ನೆರವಾಗುತ್ತದೆ.
ಆದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಪಿಚ್‌ಗಳನ್ನು ಸ್ಪಿನ್ನರ್‌ಗಳಿಗೆ ನೆರವಾಗುವಂತೆ ತಯಾರಿಸಲಾಗಿದೆ ಎಂದು ಮಾಧ್ಯಮಗಳು ತಿಳಿಸಿದೆ. ಹೀಗಾಗಿ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಪಂದ್ಯದಲ್ಲೇ ಭಾರತದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾರಿಂದ ಭಾರೀ ಸವಾಲು ಎದುರಾಗುವ ಸಾಧ್ಯತೆ ಹೆಚ್ಚು.
ಇಂಗ್ಲೆಂಡ್ ತಂಡದಲ್ಲೂ ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳಿದ್ದು, ಭಾರತೀಯ ಬ್ಯಾಟರ್‌ಗಳು ಹೇಗೆ ಅವರನ್ನು ಎದುರಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.
ರಾಹುಲ್ ಕೀಪಿಂಗ್ ಮಾಡಲ್ಲ: ದ್ರಾವಿಡ್
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಕೀಪರ್ ಆಗಿ ಆಡಲ್ಲ ಎಂದು ಕೋಚ್ ದ್ರಾವಿಡ್ ಖಚಿತಪಡಿಸಿದ್ದಾರೆ.
ರಾಹುಲ್ ತಜ್ಞ ಬ್ಯಾಟರ್ ಆಗಿ ಆಡಿಸುತ್ತೇವೆ. ತಂಡದಲ್ಲಿರುವ ಇತರ ಇಬ್ಬರನ್ನು(ಕೆ.ಎಸ್.ಭರತ್ ಮತ್ತು ಧ್ರುವ್ ಜುರೆಲ್) ವಿಕೆಟ್ ಕೀಪರ್ ಸ್ಥಾನಕ್ಕೆ ಪರಿಗಣಿಸುತ್ತೇವೆ ಎಂದು ದ್ರಾವಿಡ್ ತಿಳಿಸಿದ್ದಾರೆ.