;Resize=(412,232))
ನವದೆಹಲಿ: ಪಾಕಿಸ್ತಾನ ವಿರುದ್ಧ ಪಂದ್ಯಕ್ಕೂ ಮುನ್ನ ರಿಹರ್ಸಲ್ ಎಂಬಂತಿದ್ದ, ಈ ಬಾರಿ ಟಿ20 ವಿಶ್ವಕಪ್‌ನ ತನ್ನ 2ನೇ ಪಂದ್ಯದಲ್ಲಿ ಭಾರತ ತಂಡ ಗುರುವಾರ ನಮೀಬಿಯಾ ವಿರುದ್ಧ 93 ರನ್ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅಮೋಘ ಪ್ರದರ್ಶನ ನೀಡಿದ ತಂಡ, ಸತತ 2ನೇ ಗೆಲುವಿನೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತ 9 ವಿಕೆಟ್‌ಗೆ 209 ರನ್ ಕಲೆಹಾಕಿತು. ಭಾರತದ ಆರಂಭ ಗಮನಿಸಿದರೆ ತಂಡದ ಸ್ಕೋರ್ 250 ದಾಟುವ ನಿರೀಕ್ಷೆಯಿತ್ತು. 7ನೇ ಓವರ್‌ನಲ್ಲೇ ತಂಡ 100ರ ಗಡಿ ದಾಟಿತ್ತು. ಸಂಜು ಸ್ಯಾಮ್ಸನ್ 8 ಎಸೆತಕ್ಕೆ 22 ರನ್ ಗಳಿಸಿದರೆ, 20 ಎಸೆತದಲ್ಲೇ ಅರ್ಧಶತಕ ಪೂರೈಸಿದ ಇಶಾನ್ ಕಿಶನ್ 26 ಎಸೆತಕ್ಕೆ 61 ರನ್ ಸಿಡಿಸಿ ನಿರ್ಗಮಿಸಿದರು. ಬಳಿಕ ರನ್ ವೇಗಕ್ಕೆ ಕಡಿವಾಣ ಬಿತ್ತು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರದ ಆಟವಾಡಿ 28 ಎಸೆತಕ್ಕೆ 52 ರನ್ ಚಚ್ಚಿದರು. ತಿಲಕ್ 25, ದುಬೆ 23 ರನ್ ಕೊಡುಗೆ ನೀಡಿದರು.
ದೊಡ್ಡ ಗುರಿ ಬೆನ್ನತ್ತಿದ ನಮೀಬಿಯಾವನ್ನು ಭಾರತ ಸುಲಭದಲ್ಲಿ ಕಟ್ಟಿಹಾಕಿತು. ತಂಡ 18.2 ಓವರ್‌ನಲ್ಲಿ 116 ರನ್‌ಗೆ ಆಲೌಟಾಯಿತು. ಲಾರೆನ್ ಸ್ಟೀನ್‌ಕ್ಯಾಂಪ್(29(, ಜಾನ್ ಫ್ರೈಲಿಂಕ್(22) ಮಾತ್ರ 20ರ ಗಡಿ ದಾಟಿದರು. ಸ್ಪಿನ್ ಅಸ್ತ್ರದ ಮೂಲಕ ಮಿಂಚಿದ ವರುಣ್ ಚಕ್ರವರ್ತಿ 7 ರನ್‌ಗೆ 3 ವಿಕೆಟ್ ಕಿತ್ತರು. ಹಾರ್ದಿಕ್, ಅಕ್ಷರ್ ತಲಾ 2 ವಿಕೆಟ್ ಪಡೆದರು.
ಸ್ಕೋರ್: ಭಾರತ 20 ಓವರ್‌ನಲ್ಲಿ 209/9 (ಇಶಾನ್ 61, ಹಾರ್ದಿಕ್ 52, ಎರಾಸ್ಮಸ್ 4-20), ನಮೀಬಿಯಾ 18.2 ಓವರ್‌ನಲ್ಲಿ 116/10 (ಲಾರೆನ್ 29, ವರುಣ್ 3-7, ಅಕ್ಷರ್ 2-20, ಹಾರ್ದಿಕ್ 2-21)
86 ರನ್
ಭಾರತ ಮೊದಲ 6 ಓವರ್‌ನಲ್ಲಿ 86 ರನ್ ಗಳಿಸಿತು. ಇದು ಟಿ20 ಪಂದ್ಯದ ಪವರ್‌ಪ್ಲೇನಲ್ಲಿ ಭಾರತದ 3ನೇ ಗರಿಷ್ಠ. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ 95 ರನ್ ಸಿಡಿಸಿತ್ತು.
ಇಶಾನ್ 20 ಎಸೆತಕ್ಕೆ 50 ರನ್ ಬಾರಿಸಿದ್ದು ಭಾರತದ ಪರ ಟಿ20 ವಿಶ್ವಕಪ್‌ನಲ್ಲಿ 5ನೇ ಅತಿ ವೇಗದ ಫಿಫ್ಟಿ. 2007ರಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ 12 ಎಸೆತಕ್ಕೆ 50 ಸಿಡಿಸಿದ್ದರು.
ಭಾರತ ತಂಡ ಕೊನೆ 2 ಓವರ್‌ನಲ್ಲಿ 5 ವಿಕೆಟ್ ಕಳೆದುಕೊಂಡಿತು. 18 ಓವರ್‌ನಲ್ಲಿ 199 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ತಂಡ ಬಳಿಕ 2 ಓವರಲ್ಲಿ 10 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿತು.
ಭಾರತದಿಂದ 47ನೇ
ಬಾರಿ 200+ ಸ್ಕೋರ್
ಭಾರತ ಪುರುಷರ ತಂಡ ಟಿ20 ಕ್ರಿಕೆಟ್‌ನಲ್ಲಿ 47ನೇ ಬಾರಿ 200+ ರನ್ ಕಲೆಹಾಕಿತು. ಇದು ಗರಿಷ್ಠ. ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ದ.ಆಫ್ರಿಕಾ 29 ಬಾರಿ ಈ ಸಾಧನೆ ಮಾಡಿದೆ. ನ್ಯೂಜಿಲೆಂಡ್ 28, ಆಸ್ಟ್ರೇಲಿಯಾ 25, ವೆಸ್ಟ್‌ಇಂಡೀಸ್ 25 ಬಾರಿ.