ಟೆಸ್ಟ್‌ನಲ್ಲಿ ಭಾರತಕ್ಕೆ ಅಗ್ರಸ್ಥಾನ : ಫೈನಲ್‌ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?

KannadaprabhaNewsNetwork |  
Published : Sep 24, 2024, 01:49 AM ISTUpdated : Sep 24, 2024, 04:26 AM IST
ಭಾರತ ತಂಡ | Kannada Prabha

ಸಾರಾಂಶ

ಟೆಸ್ಟ್‌ನಲ್ಲಿ ಬಾಂಗ್ಲಾದೇಶವನ್ನು ಮಣಿಸಿರುವ ಭಾರತ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಒಟ್ಟು 10 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿರುವ ಭಾರತ 86 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.  

ದುಬೈ: ಟೆಸ್ಟ್‌ನಲ್ಲಿ ಗೆಲುವಿನ ಓಟ ಮುಂದುವರಿಸಿರುವ ಟೀಂ ಇಂಡಿಯಾ, 2023-25ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಭಾನುವಾರ ಬಾಂಗ್ಲಾದೇಶ ವಿರುದ್ಧದ ಗೆಲುವಿನ ಮೂಲಕ 12 ಅಂಕಗಳನ್ನು ಪಡೆದಿರುವ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ ಗೆಲುವಿನ ಪ್ರತಿಶತವನ್ನು ಶೇಕಡಾ 71.67ಕ್ಕೆ ಹೆಚ್ಚಿಸಿಕೊಂಡಿದೆ.

ಭಾರತ ಈ ಬಾರಿ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 10 ಪಂದ್ಯಗಳನ್ನಾಡಿದೆ. 7 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ತಂಡ, 2ರಲ್ಲಿ ಸೋಲನುಭವಿಸಿ, 1 ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ತಂಡ ಒಟ್ಟಾರೆ 88 ಅಂಕ ಗಳಿಸಿತ್ತಾದರೂ, ನಿಧಾನಗತಿ ಬೌಲಿಂಗ್‌ ಕಾರಣಕ್ಕೆ 2 ಅಂಕ ಕಳೆದುಕೊಂಡಿರುವ ಕಾರಣ ಸದ್ಯ 86 ಅಂಕಗಳನ್ನು ಹೊಂದಿದೆ.

ಪಟ್ಟಿಯಲ್ಲಿ ಸದ್ಯ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದೆ. ಕಳೆದ ಬಾರಿ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಚಾಂಪಿಯನ್‌ ಆಗಿದ್ದ ಆಸ್ಟ್ರೇಲಿಯಾ ಸದ್ಯ ಶೇಕಡಾ 62.50 ಗೆಲುವಿನ ಪ್ರತಿಶತ ಹೊಂದಿದೆ. 

ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಗೆದ್ದ ಶ್ರೀಲಂಕಾ(ಶೇ.50 ಗೆಲುವಿನ ಪ್ರತಿಶತ) 3ನೇ ಸ್ಥಾನದಲ್ಲಿದ್ದರೆ, ಮಾಜಿ ಚಾಂಪಿಯನ್‌ ನ್ಯೂಜಿಲೆಂಡ್‌ ಶೇ.42.86 ಗೆಲುವಿನ ಪ್ರತಿಶತದೊಂದಿಗೆ 4ನೇ ಸ್ಥಾನದಲ್ಲಿದೆ.ಕಳೆದೆರಡು ಬಾರಿ ಫೈನಲ್‌ ಪ್ರವೇಶಿಸಲು ವಿಫಲವಾಗಿರುವ ಇಂಗ್ಲೆಂಡ್‌ ತಂಡ ಸದ್ಯ ಶೇ.42.19 ಜಯದ ದಾಖಲೆಯೊಂದಿಗೆ 5ನೇ, ಬಾಂಗ್ಲಾದೇಶ(ಶೇಕಡಾ 39.29) 6ನೇ ಸ್ಥಾನಕ್ಕೆ ಕುಸಿದಿದೆ. ದಕ್ಷಿಣ ಆಫ್ರಿಕಾ (ಶೇಕಡಾ 38.89), ಪಾಕಿಸ್ತಾನ (ಶೇಕಡಾ 19.05) ಹಾಗೂ ವೆಸ್ಟ್‌ಇಂಡೀಸ್‌ (ಶೇಕಡಾ 18.52) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

ಫೈನಲ್‌ ಮೇಲೆ ಭಾರತ ಕಣ್ಣು: ಲೆಕ್ಕಾಚಾರ ಹೇಗೆ?

ಭಾರತ ತಂಡ ಕಳೆದೆರಡು ಆವೃತ್ತಿಗಳಲ್ಲಿ ಫೈನಲ್‌ ಪ್ರವೇಶಿಸಿತ್ತು. ಆದರೆ ಕ್ರಮವಾಗಿ ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಸೋತು ಪ್ರಶಸ್ತಿ ತಪ್ಪಿಸಿಕೊಂಡಿತ್ತು. ಭಾರತ ಈ ಬಾರಿಯೂ ಫೈನಲ್‌ಗೇರುವ ಫೇವರಿಟ್‌ ತಂಡ ಎನಿಸಿಕೊಂಡಿದೆ. ರೋಹಿತ್ ಪಡೆಗೆ ಇನ್ನು 9 ಟೆಸ್ಟ್ ಪಂದ್ಯಗಳು ಬಾಕಿ ಇವೆ. ಬಾಂಗ್ಲಾ ವಿರುದ್ಧ ಒಂದು, ಅಕ್ಟೋಬರ್‌-ನವೆಂಬರ್‌ನಲ್ಲಿ ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ 3 ಪಂದ್ಯಗಳನ್ನು ಆಡಲಿವೆ. 

ಬಳಿಕ ನ.22ರಿಂದ 2025ರ ಜ.7ರ ವರೆಗೆ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ನಿರ್ಣಾಯಕ ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಭಾರತ ಉಳಿದ 9 ಪಂದ್ಯಗಳ ಪೈಕಿ 5ರಲ್ಲಿ ಗೆದ್ದರೂ ನಿರಾಯಾಸವಾಗಿ ಫೈನಲ್‌ಗೇರಲಿದೆ. 4ರಲ್ಲಿ ಗೆದ್ದು, 1 ಪಂದ್ಯದಲ್ಲಿ ಡ್ರಾ ಸಾಧಿಸಿದರೂ ತಂಡದ ಗೆಲುವಿನ ಪ್ರತಿಶತ ಶೇ.60ಕ್ಕಿಂತ ಹೆಚ್ಚಿರಲಿದೆ. ಆಗಲೂ ಭಾರತ ಫೈನಲ್‌ ಪ್ರವೇಶಿಸುವ ಸಾಧ್ಯತೆ ಹೆಚ್ಚು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ
ಕ್ರಿಕೆಟಿಂದಲೇ ಪಾಕ್‌ ಹೊರಗಟ್ಟುವ ಟೈಂ ಬಂತಾ?