ಭಾರತದ ಆಲ್ರೌಂಡ್‌ ಆಟಕ್ಕೆ ಶರಣಾದ ಪಾಕಿಸ್ತಾನ

KannadaprabhaNewsNetwork |  
Published : Oct 06, 2025, 01:00 AM IST
10 ಓವರಲ್ಲಿ ಕೇವಲ 20 ರನ್‌ ನೀಡಿ 3 ವಿಕೆಟ್‌ ಕಿತ್ತ ಭಾರತದ ಕ್ರಾಂತಿ ಗೌಡ್‌  | Kannada Prabha

ಸಾರಾಂಶ

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಸತತ 2ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಭಾನುವಾರ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ 88 ರನ್‌ಗಳ ಸುಲಭ ಗೆಲುವು ದಾಖಲಿಸಿತು.

ಕೊಲಂಬೊ: ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಸತತ 2ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಭಾನುವಾರ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ 88 ರನ್‌ಗಳ ಸುಲಭ ಗೆಲುವು ದಾಖಲಿಸಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರಲ್ಲಿ 247 ರನ್‌ಗೆ ಆಲೌಟ್‌ ಆಯಿತು. ಪಾಕಿಸ್ತಾನ 43 ಓವರಲ್ಲಿ 159 ರನ್‌ ಗಳಿಸಿ ಸರ್ವಪತನಗೊಂಡು, ಸತತ 2ನೇ ಸೋಲುಂಡಿತು.

ಭಾರತ ಪರ ಹರ್ಲೀನ್‌ ಡಿಯೋಲ್‌ 46, ಜೆಮಿಮಾ ರೋಡ್ರಿಗ್ಸ್‌ 32, ಪ್ರತಿಕಾ ರಾವಲ್‌ 31 ರನ್‌ ಗಳಿಸಿದರು. ಆದರೆ 8ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದರೂ ಸ್ಫೋಟಕ ಆಟವಾಡಿದ ರಿಚಾ ಘೋಷ್‌ 20 ಎಸೆತದಲ್ಲಿ 35 ರನ್‌ ಸಿಡಿಸಿ ತಂಡ ಗೌರವ ಮೊತ್ತ ದಾಖಲಿಸಲು ಕಾರಣರಾದರು.

ಭಾರತ ವಿರುದ್ಧ ಹಿಂದಿನ 11 ಪಂದ್ಯಗಳಲ್ಲೂ 200 ರನ್ ದಾಟದ ಪಾಕಿಸ್ತಾನಕ್ಕೆ 248 ರನ್‌ ಗುರಿ ಬೃಹತ್‌ ಮೊತ್ತ ಎನಿಸಿತು. ನಿಧಾನಗತಿಯ ಆರಂಭ ಪಡೆದ ಪಾಕ್‌, ಕಳಪೆ ಮೊತ್ತಕ್ಕೆ ಕುಸಿಯದಂತೆ ಕಾಪಾಡಿದ್ದು ಸಿದ್ರಾ ಅಮಿನ್‌. 3ನೇ ಕ್ರಮಾಂಕದಲ್ಲಿ ಆಡಿದ ಸಿದ್ರಾ 81 ರನ್‌ ಗಳಿಸಿದರು. ಭಾರತ ಪರ ಕ್ರಾಂತಿ ಗೌಡ್‌ 10 ಓವರಲ್ಲಿ 3 ಮೇಡನ್‌ ಸಹಿತ ಕೇವಲ 20 ರನ್‌ ನೀಡಿ 3 ವಿಕೆಟ್‌ ಕಿತ್ತರು. ಸ್ಕೋರ್‌: ಭಾರತ 50 ಓವರಲ್ಲಿ 247/10 (ಹರ್ಲೀನ್‌ 46, ರಿಚಾ 35*, ಡಯಾನಾ 4-69), ಪಾಕಿಸ್ತಾನ 43 ಓವರಲ್ಲಿ 159/10 (ಸಿದ್ರಾ ಅಮೀನ್‌ 81, ನತಾಲಿಯಾ 33, ಕ್ರಾಂತಿ 3-20)

ಪಾಕ್‌ಗೆ ನೋ ಹ್ಯಾಂಡ್‌ಶೇಕ್‌!

ಪಹಲ್ಗಾಂ ಉಗ್ರ ದಾಳಿ ಖಂಡಿಸಿ ಏಷ್ಯಾಕಪ್‌ನಲ್ಲಿ ಪಾಕಿಸ್ತಾನಿ ಕ್ರಿಕೆಟಿಗರಿಗೆ ಹ್ಯಾಂಡ್‌ ಶೇಕ್‌ ನೀಡುವುದರಿಂದ ಭಾರತ ತಂಡ ದೂರ ಉಳಿದಿತ್ತು. ಸದ್ಯ ಚಾಲ್ತಿಯಲ್ಲಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲೂ ಅದು ಮುಂದುವರಿದಿದೆ. ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಆಟಗಾರ್ತಿಯರು ಪಾಕಿಗಳ ಜತೆ ಹ್ಯಾಂಡ್‌ ಶೇಕ್‌ ಮಾಡಲಿಲ್ಲ.

ಟಾಸ್‌ ವೇಳೆ ಭಾರತದ ನಾಯಕಿ ಹರ್ಮನ್‌ಪ್ರೀತ್‌ ಕೌರ್, ಪಾಕ್‌ ನಾಯಕಿ ಫಾತಿಮಾ ಸನಾ ಜೊತೆ ಹ್ಯಾಂಡ್‌ ಶೇಕ್‌ ಮಾಡಲಿಲ್ಲ. ಅಲ್ಲದೇ ಪಂದ್ಯದುದ್ದಕ್ಕೂ ಭಾರತೀಯ ಆಟಗಾರ್ತಿಯರು ಪಾಕ್‌ ಆಟಗಾರ್ತಿಯರ ಜೊತೆ ಯಾವುದೇ ಸಂವಹನ ನಡೆಸಲಿಲ್ಲ.

ಟಾಸ್‌ ವೇಳೆ ರೆಫ್ರಿ ಎಡವಟ್ಟು!

ರೆಫ್ರಿ ಮಾಡಿದ ಎಡವಟ್ಟಿನಿಂದ ಪಾಕಿಸ್ತಾನ ಟಾಸ್‌ ಜಯಿಸಿತು. ಭಾರತದ ಹರ್ಮನ್‌ಪ್ರೀತ್‌ ನಾಣ್ಯ ಚಿಮ್ಮಿಸಿದರು. ಪಾಕ್‌ನ ಫಾತಿಮಾ ‘ಟೇಲ್ಸ್‌’ ಎಂದರು. ಆದರೆ ರೆಫ್ರಿ ‘ಹೆಡ್ಸ್‌’ ಎಂದು ಘೋಷಿಸಿ, ಪಾಕ್‌ ಟಾಸ್‌ ಗೆದ್ದಿದೆ ಎಂದರು. ಹರ್ಮನ್‌ಪ್ರೀತ್‌ರಿಂದಲೂ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ.

ಕೀಟಗಳ ಕಾಟ: ಆಟ

15 ನಿಮಿಷ ಸ್ಥಗಿತ!

ಭಾರತದ ಇನ್ನಿಂಗ್ಸ್‌ನುದ್ದಕ್ಕೂ ಮೈದಾನದಲ್ಲಿ ಕೀಟಗಳು ಓಡಾಡುತ್ತಿದ್ದವು. ಎರಡೂ ತಂಡಗಳ ಆಟಗಾರ್ತಿಯರಿಗೆ ಇದರಿಂದ ಸಮಸ್ಯೆ ಎದುರಾಯಿತು. ಒಂದು ಹಂತದಲ್ಲಿ ಆಟಗಾರ್ತಿಯರನ್ನು ಮೈದಾನದಿಂದ ಹೊರಕಳುಹಿಸಿ ಸಿಬ್ಬಂದಿ ರಾಸಾಯನಿಕ ಸಿಂಪಡಿಸಿದರು. ಇದರಿಂದ 15 ನಿಮಿಷ ಆಟ ಸ್ಥಗಿತಗೊಂಡಿತ್ತು.

ಪಾಕಿಸ್ತಾನ ವಿರುದ್ಧ

ಸತತ 12ನೇ ಜಯ!

ಪಾಕಿಸ್ತಾನ ವಿರುದ್ಧ ಏಕದಿನದಲ್ಲಿ ಭಾರತ ಸೋತೇ ಇಲ್ಲ. ಭಾನುವಾರದ ಗೆಲುವು ತಂಡಕ್ಕೆ ದೊರೆತ 12ನೇ ಜಯ. ಆಡಿರುವ ಎಲ್ಲ 12 ಪಂದ್ಯಗಳಲ್ಲೂ ಭಾರತ ಗೆದ್ದಿದೆ. ವಿಶ್ವಕಪ್‌ನಲ್ಲಿ ಇದು 5ನೇ ಜಯ.

PREV
Read more Articles on

Recommended Stories

ಏಕದಿನಕ್ಕಿನ್ನು ರೋಹಿತ್ ಶರ್ಮಾ ಅಲ್ಲ, ಗಿಲ್‌ ನಾಯಕ : ಕೊಹ್ಲಿಗೆ ತಂಡದಲ್ಲಿ ಸ್ಥಾನ
ಇಂದು ಭಾರತ vs ಪಾಕ್‌ ಮಹಿಳಾ ವಿಶ್ವಕಪ್ ಫೈಟ್‌ : ಮತ್ತೆ ನೋ ಶೇಕ್‌ಹ್ಯಾಂಡ್‌?