ಇಂಡಿಯನ್‌ ಗಾಲ್ಫ್‌ ಪ್ರೀಮಿಯರ್‌ ಲೀಗ್‌: ಬೆಂಗಳೂರು ಸ್ಟಾಲಿಯನ್ಸ್ ಜಿಸಿ ತಂಡ ಅನಾವರಣ

KannadaprabhaNewsNetwork |  
Published : Sep 18, 2026, 01:15 AM IST
ಗಾಲ್ಫ್‌ | Kannada Prabha

ಸಾರಾಂಶ

ತ್ರಿಶೂಲ್ ಚಿನ್ನಪ್ಪ, ವೀರ್ ಗಣಪತಿ, ಸನ್ಹಿತ್ ಬಿಷ್ನೋಯಿ, ಸುಧೀರ್ ಶರ್ಮ ಒಳಗೊಂಡ ತಂಡ

ಬೆಂಗಳೂರು: ಸೆಪ್ಟೆಂಬರ್ 23ರಂದು ಆರಂಭವಾಗಲಿರುವ ಎಎಮ್ ಗ್ರೀನ್ ಐಜಿಪಿಎಲ್ ಎರಡನೇ ಆವೃತ್ತಿಗೆ ಗಾಲ್ಫ್‌ಕೊನೆಲ್ಟ್ ಮಾಲೀಕತ್ವದ ದಿ ಬೆಂಗಳೂರು ಸ್ಟಾಲಿಯನ್ಸ್ ತಂಡವನ್ನು ಗುರುವಾರ ಅನಾವರಣಗೊಳಿಸಲಾಯಿತು. ಇದೇ ವೇಳೆ ತ್ರಿಶೂಲ್ ಚಿನ್ನಪ್ಪ, ವೀರ್ ಗಣಪತಿ, ಸನ್ಹಿತ್ ಬಿಷ್ನೋಯಿ ಹಾಗೂ ಸುಧೀರ್ ಶರ್ಮ ಒಳಗೊಂಡ ತಂಡದ ಜೆರ್ಸಿಯನ್ನು ಬಿಡುಗಡೆ ಮಾಡಲಾಯಿತು.ಸೆ.23ರಂದು ಯುಎಇಯ ರಾಸ್ ಅಲ್ ಖೈಮಾದಲ್ಲಿ ಎರಡನೇ ಆವೃತ್ತಿಗೆ ಚಾಲನೆ ಸಿಗಲಿದ್ದು, ಬೆಂಗಳೂರು ಸ್ಟಾಲಿಯನ್ಸ್ ತಂಡ ತನ್ನ ತವರಿನ ಚರಣವನ್ನು ಡಿಸೆಂಬರ್ 1 ರಿಂದ 5ರವರೆಗೆ ಆಯೋಜಿಸಲಿದೆ. ಎಎಲ್ ಗ್ರೀನ್ ಐಜಿಪಿಎಲ್ ಆಹ್ವಾನಿತ ಚರಣವೂ ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ನಲ್ಲಿ (ಕೆಜಿಎ) ನಡೆಯಲಿದೆ. ಬೆಂಗಳೂರು ಸ್ಟಾಲಿಯನ್ಸ್ ತಂಡವು ತ್ರಿಶೂಲ್ ಚಿನ್ನಪ್ಪ, ವೀರ್ ಗಣಪತಿ, ಸನ್ಹಿತ್ ಬಿಷ್ಣೋಯಿ ಮತ್ತು ಸುಧೀರ್ ಶರ್ಮ ಅವರನ್ನೊಳಗೊಂಡ ಅನುಭವಿ ಹಾಗೂ ಯುವ ಪ್ರತಿಭೆಗಳ ಮಿಶ್ರಿತ ತಂಡವಾಗಿದೆ. ತ್ರಿಶೂಲ್ ಚಿನ್ನಪ್ಪ ಅವರು ಭಾರತ ಮತ್ತು ವಿದೇಶಗಳಲ್ಲಿ ಸ್ಪರ್ಧಿಸಿರುವ ಅನುಭವಿ ವೃತ್ತಿಪರ ಆಟಗಾರರಾಗಿದ್ದಾರೆ. ಭಾರತದ ಗಾಲ್ಫ್ ಆಟಗಾರ ಮತ್ತು ತರಬೇತುದಾರ ರಾಹುಲ್ ಗಣಪತಿ ಅವರ ಪುತ್ರ ವೀರ್ ಗಣಪತಿ, ಕಳೆದ ವರ್ಷದವರೆಗೂ ಭಾರತದ ನಂಬರ್ 1 ಜೂನಿಯರ್ ಗಾಲ್ಫರ್ ಆಗಿದ್ದರು. ಬಿಷ್ಣೋಯಿ ಮತ್ತು ಶರ್ಮ ತಮ್ಮದೇ ಆದ ವಿಶಿಷ್ಟ ಸಾಮರ್ಥ್ಯ ಹೊಂದಿರುವ ಇನ್ನಿಬ್ಬರು ಆಟಗಾರರಾಗಿದ್ದಾರೆ. ಐಜಿಪಿಎಲ್ ಭಾರತದ ಮೊದಲ ಫ್ರಾಂಚೈಸಿ ಆಧಾರಿತ ವೃತ್ತಿಪರ ಗಾಲ್ಫ್ ಲೀಗ್ ಆಗಿದ್ದು, ಹತ್ತು ನಗರ ಆಧಾರಿತ ತಂಡಗಳು 9 ಪಂದ್ಯಗಳ ಪೂರ್ಣ ಋತುವಿನಲ್ಲಿ ಸ್ಪರ್ಧಿಸಲಿವೆ. ಪ್ರತಿಯೊಂದು ಪಂದ್ಯವು 54-ಹೋಲ್, ಮೂರು ದಿನಗಳ ಸ್ಪರ್ಧೆಯಾಗಿದ್ದು, ಪ್ರತಿ ದಿನ ಪ್ರತಿ ತಂಡದ ನಾಲ್ಕು ಆಟಗಾರರಲ್ಲಿ ಅತ್ಯುತ್ತಮ ಇಬ್ಬರ ಸ್ಕೋರ್‌ಗಳನ್ನು ತಂಡದ ಒಟ್ಟು ಮೊತ್ತವಾಗಿ ಪರಿಗಣಿಸಲಾಗುತ್ತದೆ.ಐಪಿಎಲ್‌ನಲ್ಲಿ ಆರ್ಸಿಬಿ ಇರುವಂತೆಯೇ, ನಾವು ಕೂಡ ಗಾಲ್ಫ್‌ಗೆ ಸಂಬಂಧಿಸಿದ ತಂಡಕ್ಕೆ ಸಮಾನಾಗಿದ್ದೇವೆ ಎಂದು ಗಾಲ್ಫರ್ ತ್ರಿಶೂಲ್ ಚಿನ್ನಪ್ಪ ಹೇಳಿದರು. ಇಂದಿನವರೆಗೂ ಗಾಲ್ಫ್ ಕೇವಲ ಶ್ರೀಮಂತರಿಗೆ ಮಾತ್ರ ಎಂಬ ಭಾವನೆ ಇದೆ. ಆದರೆ ಅದು ಈಗ ಬದಲಾಗುತ್ತಿದೆ. ಭಾರತ ಬದಲಾಗುತ್ತಿದೆ ಮತ್ತು ಕ್ರೀಡೆಯೂ ಬದಲಾಗುತ್ತಿದೆ. ನಮ್ಮ ಜೀವನವನ್ನೆಲ್ಲಾ ಸಾಧ್ಯವಾದಷ್ಟು ಶ್ರೇಷ್ಠರಾಗಲು ವಿನಿಯೋಗಿಸಿದ್ದೇವೆ. ನಮ್ಮೆಲ್ಲರ ಬಳಿಯೂ ಹೇಳಲು ಕಥೆಗಳಿದ್ದು, ಅದನ್ನು ಹೇಳುವ ಒಂದು ಹಾದಿ ಇದಾಗಿದೆ ಎಂದರು. ಗಾಲ್ಫ್ ಒಂದು ವೈಯಕ್ತಿಕ ಕ್ರೀಡೆ. ನಾನು ಅಗ್ರಸ್ಥಾನದಲ್ಲಿರಬೇಕು ಎಂದು ಹೇಳುವುದು ನಮಗೆ ಅಭ್ಯಾಸವಾಗಿದೆ. ಆದರೆ ಇದ್ದಕ್ಕಿದ್ದಂತೆ ನಾವು ಅಗ್ರಸ್ಥಾನದಲ್ಲಿರಬೇಕು ಎಂದು ಹೇಳುತ್ತಿದ್ದೇವೆ. ನಾನು ನನ್ನ ಸಹ ಆಟಗಾರರ ಬಗ್ಗೆಯೂ ಗಮನ ಹರಿಸಲು ಪ್ರಾರಂಭಿಸಿದ್ದೇನೆ. ಇದೊಂದು ಹೊಸ ಅನುಭವ ಮತ್ತು ಇದು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ ಎಂದು ತಂಡದ ರಚನೆಯ ಕುರಿತು ಅನುಭವವನ್ನು ತ್ರಿಶೂಲ್ ಚಿನ್ನಪ್ಪ ಹಂಚಿಕೊಂಡರು. ಭಾರತದಿಂದ ಹೊರಗೆ ಆಡುವುದು ತುಂಬಾ ದುಬಾರಿಯಾಗಿದೆ. ಐಜಿಪಿಎಲ್ ಜೂನಿಯರ್ಗಳಿಗೆ ಮತ್ತು ಹವ್ಯಾಸಿ ಆಟಗಾರರಿಗೆ ಉತ್ತಮ ವೇದಿಕೆ ಆಗಿದೆ. ಮೊರಾಕ್ಕೊದಲ್ಲಿ ವಿಪರೀತ ಗಾಳಿಯಿತ್ತು, ಅಂತಹ ವಾತಾವರಣ ಭಾರತದಲ್ಲಿ ಸಿಗುವುದಿಲ್ಲ. ಹೊಸದಾಗಿ ಬೆಳೆಯುತ್ತಿರುವ ಆಟಗಾರರಿಗೆ ತಮ್ಮ ಆಟವನ್ನು ಸುಧಾರಿಸಿಕೊಳ್ಳಲು ಇದು ಅತ್ಯುತ್ತಮ ವೇದಿಕೆಯಾಗಿದೆ. ನಾವೆಲ್ಲರೂ ನಮ್ಮದೇ ಆದ ಆಟವನ್ನು ಆಡುತ್ತೇವೆ, ಈ ಋತುವಿನಲ್ಲಿ ವಿಜೇತರಾಗಿ ಹೊರಹೊಮ್ಮುತ್ತೇವೆ ಎಂಬ ಭರವಸೆ ಇದೆ ಎಂದು ಸನ್ಹಿತ್ ಬಿಷ್ಣೋಯ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಐಜಿಪಿಎಲ್ ತರಬೇತುದಾರರನ್ನು ಶಾಲೆಗಳು ಮತ್ತು ವಸತಿ ಸಮುದಾಯಗಳಿಗೆ ಕರೆದೊಯ್ಯುವ ಮೂಲಕ ಮೂಲ ಹಂತದ ಕಾರ್ಯಕ್ರಮಗಳನ್ನು ನಡೆಸುತ್ತದೆ. ಪ್ರತಿಯೊಂದು ಪಂದ್ಯಾವಳಿಯು ಪ್ರೋ-ಆಮ್ ದಿನಗಳನ್ನು ಒಳಗೊಂಡಿರುತ್ತದೆ. ಅಲ್ಲಿ ಹವ್ಯಾಸಿ, ಜೂನಿಯರ್‌ ಮತ್ತು ಉದ್ಯಮಿಗಳು ವೃತ್ತಿಪರ ಆಟಗಾರರೊಂದಿಗೆ ಜತೆಯಾಗಿ ಆಡಬಹುದಾಗಿದೆ. ಬೆಂಗಳೂರು ಸ್ಟಾಲಿಯನ್ಸ್ ಜಿಸಿ ತಂಡವು ಡಿಸೆಂಬರ್ 1 ರಿಂದ ಡಿಸೆಂಬರ್ 5 ರವರೆಗೆ ಕೆಜಿಎ ಮೈದಾನದಲ್ಲಿ ತಮ್ಮ ನೆಚ್ಚಿನ ತವರೂರಿನ ತಂಡವನ್ನು ಪ್ರೋತ್ಸಾಹಿಸಲು ಮತ್ತು ಭಾರತದಲ್ಲಿ ಬೆಳೆಯುತ್ತಿರುವ ವೃತ್ತಿಪರ ಗಾಲ್ಫ್‌ನ ಉತ್ಸಾಹವನ್ನು ಅನುಭವಿಸಲು ಅಭಿಮಾನಿಗಳು, ಕುಟುಂಬಗಳು ಮತ್ತು ಉದಯೋನ್ಮುಖ ಗಾಲ್ಫ್ ಆಟಗಾರರನ್ನು ಆಹ್ವಾನಿಸುತ್ತದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಇಂದು 2026ರ ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ಗೆ ಅದ್ಧೂರಿ ಚಾಲನೆ
ಸೆ.27ರಂದು 13ನೇ ವಿಪ್ರೋ ಬೆಂಗಳೂರು ಮ್ಯಾರಥಾನ್: 45,000+ ಓಟಗಾರರು ಭಾಗಿ