ಬೆಂಗಳೂರಿನಲ್ಲಿ ವಿಶ್ವದ 3ನೇ ಅತಿ ದೊಡ್ಡ ಸ್ಟೇಡಿಯಂ : 80000 ಆಸನ ಸಾಮರ್ಥ್ಯ, ₹1650 ಕೋಟಿ ವೆಚ್ಚ

KannadaprabhaNewsNetwork |  
Published : Aug 10, 2025, 01:30 AM ISTUpdated : Aug 10, 2025, 09:56 AM IST
ಸಿದ್ದರಾಮಯ್ಯ | Kannada Prabha

ಸಾರಾಂಶ

ಬೊಮ್ಮಸಂದ್ರ ಬಳಿ 100 ಎಕರೆ ಜಾಗದಲ್ಲಿ, ₹1,650 ಕೋಟಿ ವೆಚ್ಚದ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆಚಿನ್ನಸ್ವಾಮಿ ಬಳಿ ಕಾಲ್ತುಳಿತ ಬೆನ್ನಲ್ಲೇ ಸರ್ಕಾರ ಮಹತ್ವದ ಹೆಜ್ಜೆ । 80000 ಆಸನ ಸಾಮರ್ಥ್ಯ, ಭಾರತದ 2ನೇ ಅತಿದೊಡ್ಡ ಕ್ರೀಡಾಂಗಣ

 ಬೆಂಗಳೂರು :   ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಇತ್ತೀಚೆಗೆ ನಡೆದ ಭೀಕರ ಕಾಲ್ತುಳಿತದ ಬೆನ್ನಲ್ಲೇ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿದೆ. ಇದು 80 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದು, ಭಾರತದ 2ನೇ, ವಿಶ್ವದ 3ನೇ ಅತಿ ದೊಡ್ಡ ಕ್ರೀಡಾಂಗಣ ಎನಿಸಿಕೊಳ್ಳಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಿಂದ 28 ಕಿ.ಮೀ. ದೂರದ ಬೊಮ್ಮಸಂದ್ರ ಬಳಿ ಸೂರ್ಯ ನಗರದ 100 ಎಕರೆ ಜಾಗದಲ್ಲಿ, 1,650 ಕೋಟಿ ರು. ವೆಚ್ಚದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ) ನಿರ್ಧರಿಸಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದು, ಕೆಲ ತಿಂಗಳಲ್ಲೇ ಯೋಜನೆ ಅನುಷ್ಠಾನಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗುತ್ತದೆ. ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರಿಗೆ ಕೆಎಚ್‌ಬಿ ಅಧಿಕಾರಿಗಳು ಕ್ರೀಡಾಂಗಣದ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಕ್ರೀಡಾಂಗಣವನ್ನು ಕರ್ನಾಟಕ ಗೃಹ ಮಂಡಳಿಯಿಂದಲೇ ನಿರ್ಮಿಸಲಾಗುತ್ತದೆ. ಇದಕ್ಕೆ ಸರ್ಕಾರ ಆರ್ಥಿಕ ನೆರವು ನೀಡುವುದಿಲ್ಲ. ಎಲ್ಲಾ ಖರ್ಚನ್ನು ಗೃಹ ಮಂಡಳಿ ನೋಡಿಕೊಳ್ಳಲಿದೆ. ಅಲ್ಲದೆ, ನಿರ್ವಹಣೆಯನ್ನೂ ಗೃಹ ಮಂಡಳಿಯೇ ಮಾಡಲಿದೆ ಎಂದು ತಿಳಿದುಬಂದಿದೆ.16 ಕ್ರೀಡಾಂಗಣ!:

ಪ್ರಸ್ತಾವಿತ ಕ್ರೀಡಾ ಕೇಂದ್ರದಲ್ಲಿ ಕ್ರಿಕೆಟ್‌ ಕ್ರೀಡಾಂಗಣದ ಜೊತೆಗೆ ಇತರ ಕ್ರೀಡೆಗಳ ಕ್ರೀಡಾಂಗಣವೂ ಇರಲಿದೆ. ಕ್ರಿಕೆಟ್‌ ಸ್ಟೇಡಿಯಂ ಸೇರಿದಂತೆ 8 ಒಳಾಂಗಣ, 8 ಹೊರಾಂಗಣ ಕ್ರೀಡೆಗಳಿಗೆ ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಹಾಸ್ಟೇಲ್, ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ ಅತಿಥಿಗೃಹಗಳು, ಜಿಮ್‌, ತರಬೇತಿ ವ್ಯವಸ್ಥೆ, ಈಜುಕೊಳ, ಗೆಸ್ಟ್‌ಹೌಸ್‌, ರೆಸ್ಟೋರೆಂಟ್‌, ಇಂಟರ್‌ನ್ಯಾಷನಲ್‌ ಸೆಮಿನಾರ್‌ ಹಾಲ್‌ ಕೂಡಾ ನಿರ್ಮಾಣಗೊಳ್ಳಲಿದೆ ಎಂದು ತಿಳಿದುಬಂದಿದೆ. ಅತಿ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣ

ಕ್ರೀಡಾಂಗಣಸಾಮರ್ಥ್ಯ

ಅಹಮದಾಬಾದ್‌132000

ಮೆಲ್ಬರ್ನ್‌100000

ಬೆಂಗಳೂರು*80000*

ಕೋಲ್ಕತಾ68000

ರಾಯ್ಪುರ65000

ಕ್ರೀಡಾ ಕೇಂದ್ರದ ವಿಶೇಷತೆಗಳು1. 80000 ಆಸನ ಸಾಮರ್ಥ್ಯದ ಕ್ರಿಕೆಟ್‌ ಕ್ರೀಡಾಂಗಣ.2. 8 ಹೊರಾಂಗಣ, 8 ಒಳಾಂಗಣ ಕ್ರೀಡೆಯ ಕ್ರೀಡಾಂಗಣ.3. ಪುರುಷ, ಮಹಿಳೆಯರಿಗೆ ಪ್ರತ್ಯೇಕ ಹಾಸ್ಟೆಲ್‌.4. ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ ಅತಿಥಿಗೃಹ.5. ಜಿಮ್‌, ಈಜುಕೊಳ, ರೆಸ್ಟೋರೆಂಟ್‌.6. ಇಂಟರ್‌ನ್ಯಾಷನಲ್‌ ಸೆಮಿನಾರ್‌ ಹಾಲ್‌.

ಭೀಕರ ಕಾಲ್ತುಳಿತ ಪರಿಣಾಮ: ಚಿನ್ನಸ್ವಾಮಿ ಸ್ಟೇಡಿಯಂ ಶಿಫ್ಟ್‌?

ಇತ್ತೀಚೆಗೆ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಹೊರ ವಲಯಕ್ಕೆ ಸ್ಥಳಾಂತರಿಸುವ ಬಗ್ಗೆ ತೀವ್ರ ಚರ್ಚೆಯಾಗುತ್ತಿವೆ. ಕಾಲ್ತುಳಿತ ಘಟನೆ ಕುರಿತು ವಿಚಾರಣೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಆಯೋಗ ಕೂಡಾ ಕ್ರಿಕೆಟ್ ಮೈದಾನದವನ್ನು ಹೊರ ವಲಯಕ್ಕೆ ಸ್ಥಳಾಂತರಿಸಲು ಶಿಫಾರಸು ಮಾಡಿತ್ತು. ಇದೇ ಕಾರಣಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಬೇರೆಡೆಗೆ ಸ್ಥಳಾಂತರಿಸಲು ಮತ್ತು ಹೊಸ ಕ್ರೀಡಾಂಗಣವನ್ನು ಬೊಮ್ಮಸಂದ್ರ ಬಳಿ ನಿರ್ಮಿಸಲು ಸರ್ಕಾರ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸರಣಿ, ಟೂರ್ನಿಗಳು ನಡೆಯುತ್ತಿಲ್ಲ. ಭವಿಷ್ಯದಲ್ಲಿ ಅಂ.ರಾ. ಮಟ್ಟದ ಪಂದ್ಯಗಳನ್ನು ಹೊಸ ಕ್ರೀಡಾಂಗಣದಲ್ಲೇ ನಡೆಸುವ ಸಾಧ್ಯತೆಯಿದೆ.

(ಚಿನ್ನಸ್ವಾಮಿ ಕ್ರೀಡಾಂಗಣ ಸ್ಥಳಾಂತರಗೊಳ್ಳುವ ಬಗ್ಗೆ ಕನ್ನಡಪ್ರಭ ಆ.8ರಂದೇ ವಿಶೇಷ ವರದಿ ಪ್ರಕಟಿಸಿತ್ತು.)

PREV
Read more Articles on

Recommended Stories

ಕೊಹ್ಲಿ, ರೋಹಿತ್‌ ನಿವೃತ್ತಿ ವದಂತಿ : 2027ರ ಏಕದಿನ ವಿಶ್ವಕಪ್‌ ಆಡಲ್ವಾ ದಿಗ್ಗಜರು?
ಸಿಮ್‌ ಎಡವಟ್ಟು: ರಜತ್‌ ಎಂದು ಛತ್ತೀಸ್‌ಗಢದ 21ರ ವ್ಯಕ್ತಿಗೆ ಕೊಹ್ಲಿ, ವಿಲಿಯರ್ಸ್‌ ಕರೆ!