ಚೆನ್ನೈ: ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಬಹುನಿರೀಕ್ಷಿತ 17ನೇ ಆವೃತ್ತಿ ಐಪಿಎಲ್‌ಗೂ ಶುಕ್ರವಾರ ವರ್ಣರಂಜಿತ ಚಾಲನೆ ಲಭಿಸಿದೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಈ ಬಾರಿಯ ಚುಟುಕು ಕ್ರಿಕೆಟ್ ಹಬ್ಬ ಅಧಿಕೃತವಾಗಿ ಆರಂಭಗೊಂಡಿತು.
ಸಂಜೆ 6.30ಕ್ಕೆ ಪ್ರಾರಂಭವಾದ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ತಾರೆಯರು ಪ್ರೇಕ್ಷಕರ ಮನರಂಜಿಸಿದರು. ಖ್ಯಾತ ಗಾಯಕರಾದ ಎ.ಆರ್.ರೆಹಮಾನ್ ಹಾಗೂ ಸೋನು ನಿಗಂ ತಮ್ಮ ಹಾಡಿನ ಮೂಲಕ ಕ್ರೀಡಾಂಗಣದ ಕಳೆ ಹೆಚ್ಚಿಸಿದರು.
ಸೋನು ನಿಗಮ್ ‘ವಂದೇ ಮಾತರಂ'''' ಹಾಡಿನೊಂದಿಗೆ ಪ್ರೇಕ್ಷಕರ ಮನಸೂರೆಗೊಳಿಸಿದರೆ, ರೆಹಮಾನ್ ಅವರು ಸೂಪರ್‌ಸ್ಟಾರ್ ರಜನಿಕಾಂತ್‌ರ ಶಿವಾಜಿ ದಿ ಬಾಸ್ ಸಿನಿಮಾದ ಬಲ್ಲೆ ಲಕ್ಕಾ ಹಾಡಿನೊಂದಿಗೆ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ವಿವಿಧ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದಲ್ಲದೇ, ಸ್ಟಂಟ್ ಮೂಲಕ ಎಲ್ಲರ ಗಮನ ಸೆಳೆದರು.
ಬಳಿಕ ತ್ರಿವರ್ಣ ಧ್ವಜದೊಂದಿಗೆ ಬೈಕ್‌ನಲ್ಲಿ ಮೈದಾನದ ಸುತ್ತಲೂ ತಿರುಗಾಡಿದರು. ಸಮಾರಂಭದ ವೇಳೆ ಅತ್ಯಾಕರ್ಷಕ ಲೈಟ್ ಶೋ, ಸಿಡಿಮದ್ದು ಪ್ರದರ್ಶನ ಪ್ರಮುಖ ಆಕರ್ಷಣೆ ಎನಿಸಿಕೊಂಡಿತು.
ಇದೇ ವೇಳೆ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿ ಹಾಗೂ ಚೆನ್ನೈ ನಾಯಕ ಋತುರಾಜ್ ಗಾಯಕ್ವಾಡ್, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಸೇರಿದಂತೆ ಪ್ರಮುಖರು ಐಪಿಎಲ್ ಟ್ರೋಫಿ ಜೊತೆ ಪೋಸ್ ವೇದಿಕೆಯಲ್ಲಿ ಕಾಣಿಸಿಕೊಂಡರು.
ಗಮನ ಸೆಳೆದ ‘ಚಂದ್ರಯಾನ-3’: ಸಮಾರಂಭದ ವೇಳೆ ಭಾರತದ ಚಂದ್ರಯಾನ-3 ಯಶಸ್ಸಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ಚಂದ್ರನ ಮೇಲೆ ಮೂನ್ ಲ್ಯಾಂಡರ್ ಇಳಿಯುವ ದೃಶ್ಯಗಳನ್ನು ಹೊಲೊಗ್ರಾಮ್ ಮೂಲಕ ಪ್ರದರ್ಶಿಸಿದ್ದು ಗಮನ ಸೆಳೆಯಿತು.
ಇಂಡಿಯಾ ಗೇಟ್ ಅನ್ನು ಕೂಡಾ ವಿಶೇಷ ತಂತ್ರಜ್ಞಾನದೊಂದಿಗೆ ತೋರಿಸಲಾಯಿತು. ಕ್ರೀಡಾಂಗಣದಲ್ಲಿ ಪ್ರದರ್ಶನಕ್ಕೆ ಇಟ್ಟಿದ ಐಪಿಎಲ್ ಟ್ರೋಫಿಯ ಕಲಾಕೃತಿ ಪ್ರಮುಖ ಆಕರ್ಷಣೆ ಎನಿಸಿತು.