ಐಪಿಎಲ್‌: ಇಂದು ಫೈನಲ್‌ ಟಿಕೆಟ್‌ಗೆ ಕೆಕೆಆರ್‌-ಸನ್‌ರೈಸರ್ಸ್‌ ಫೈಟ್‌

KannadaprabhaNewsNetwork |  
Published : May 21, 2024, 12:37 AM ISTUpdated : May 21, 2024, 04:25 AM IST
ಐಪಿಎಲ್‌ ಪ್ಲೇ-ಆಫ್‌ ಹಂತದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಸೆಣಸಲಿರುವ ಕೋಲ್ಕತಾ ಹಾಗೂ ಸನ್‌ರೈಸರ್ಸ್‌.  | Kannada Prabha

ಸಾರಾಂಶ

ಐಪಿಎಲ್‌ ಫೈನಲ್‌ ಟಿಕೆಟ್‌ಗೆ ಸೆಣಸಲಿವೆ ಕೋಲ್ಕತಾ ನೈಟ್‌ರೈಡರ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಮೆಗಾ ಫೈಟ್‌. ಗೆಲ್ಲುವ ತಂಡ ನೇರ ಫೈನಲ್‌ಗೆ, ಸೋಲುವ ತಂಡಕ್ಕೆ ಇರಲಿದೆ ಮತ್ತೊಂದು ಅವಕಾಶ.

ಅಹಮದಾಬಾದ್‌: ಈ ಐಪಿಎಲ್‌ನಲ್ಲಿ ಅತಿವೇಗವಾಗಿ ರನ್‌ ಕಲೆಹಾಕಿರುವ ಕೋಲ್ಕತಾ ನೈಟ್‌ರೈಡರ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ನಡುವೆ ಮಂಗಳವಾರ ಫೈನಲ್‌ ಟಿಕೆಟ್‌ಗಾಗಿ ಹಣಾಹಣಿ ಏರ್ಪಡಲಿದ್ದು, ಇಲ್ಲಿನ ಮೋದಿ ಕ್ರೀಡಾಂಗಣದಲ್ಲಿ ರನ್‌ ಹೊಳೆ ಹರಿಯುವ ನಿರೀಕ್ಷೆ ಇದೆ.

ಇಂಗ್ಲೆಂಡ್‌ಗೆ ಮರಳಿರುವ ಫಿಲ್‌ ಸಾಲ್ಟ್‌ರ ಅನುಪಸ್ಥಿತಿ ಇದ್ದರೂ ಕೆಕೆಆರ್‌ ತಂಡದಲ್ಲಿ ಬಲಿಷ್ಠ ಬ್ಯಾಟರ್‌ಗಳಿಗೆ ಕೊರತೆ ಇಲ್ಲ. ಸುನಿಲ್‌ ನರೈನ್‌, ಆ್ಯಂಡ್ರೆ ರಸೆಲ್‌, ರಿಂಕು ಸಿಂಗ್‌, ಶ್ರೇಯಸ್‌ ಅಯ್ಯರ್‌ರಂತಹ ಸ್ಫೋಟಕ ಬ್ಯಾಟರ್‌ಗಳಿದ್ದಾರೆ. ಈ ಘಟಾನುಘಟಿಗಳಿಗೆ ಠಕ್ಕರ್‌ ನೀಡಬಲ್ಲ ಅಥವಾ ಅವರನ್ನು ಮೀರಿಸಬಲ್ಲ ತಾಕತ್ತು ಟ್ರ್ಯಾವಿಸ್‌ ಹೆಡ್‌, ಅಭಿಷೇಕ್‌ ಶರ್ಮಾ, ಹೈನ್ರಿಚ್‌ ಕ್ಲಾಸೆನ್‌ಗಿದೆ.

ಸನ್‌ರೈಸರ್ಸ್‌ 3ನೇ ಕ್ರಮಾಂಕದಲ್ಲಿ ರಾಹುಲ್‌ ತ್ರಿಪಾಠಿಯನ್ನು ಆಡಿಸಲು ಶುರು ಮಾಡಿದ್ದು, ಕ್ರೀಸ್‌ನಲ್ಲಿ ನೆಲೆಯೂರಿದರೆ ಅವರೆಂಥ ಆಪತ್ತು ತರಬಲ್ಲರು ಎಂಬುದು ಕೆಕೆಆರ್‌ಗಿಂತ ಚೆನ್ನಾಗಿ ಗೊತ್ತಿರುವ ತಂಡ ಇನ್ನೊಂದಿಲ್ಲ. ಆದರೆ, ಸನ್‌ರೈಸರ್ಸ್‌ನ ಅಬ್ಬರ ಎಷ್ಟರ ಮಟ್ಟಿಗೆ ಇರಬಹುದು ಎನ್ನುವುದು ಅಹಮದಾಬಾದ್‌ನ ಪಿಚ್‌ ಮೇಲೆ ನಿರ್ಧಾರವಾಗಲಿದೆ. ಕಪ್ಪು ಮಣ್ಣಿನ, ನಿಧಾನಗತಿಯ ಪಿಚ್‌ನಲ್ಲಿ ಪಂದ್ಯ ಆಡಿಸಿದರೆ, ಸನ್‌ರೈಸರ್ಸ್‌ಗೆ ಸಂಕಷ್ಟ ಎದುರಾಗಬಹುದು. ಮಾರ್ಚ್‌ನಲ್ಲಿ ಇಲ್ಲಿ ನಡೆದ ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್‌ ಕೇವಲ 162 ರನ್‌ ಕಲೆಹಾಕಲಷ್ಟೇ ಶಕ್ತವಾಗಿತ್ತು. ಇನ್ನು ಪಿಚ್‌ ಯಾವುದೇ ಇರಲಿ, ಎದುರಾಳಿ ಬ್ಯಾಟರ್‌ಗಳನ್ನು ಕಾಡುವ ಸಾಮರ್ಥ್ಯ ನರೈನ್‌ ಹಾಗೂ ವರುಣ್‌ ಚಕ್ರವರ್ತಿಗಿದೆ. ಸನ್‌ರೈಸರ್ಸ್‌ ಫೈನಲ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲು, ಇಷ್ಟೆಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಿದೆ.

ಮತ್ತೊಂದೆಡೆ ಮೇ 11ರಂದು ಪ್ಲೇ-ಆಫ್‌ ಪ್ರವೇಶಿಸಿದ್ದ ಕೆಕೆಆರ್‌ ಆ ಬಳಿಕ ಮೈದಾನಕ್ಕಿಳಿದು ಸೆಣಸಲು ಸಾಧ್ಯವಾಗಿಲ್ಲ. ತಂಡದ ಕಳೆದೆರಡು ಪಂದ್ಯ ಮಳೆಗೆ ಬಲಿಯಾಗಿದ್ದು, ಸರಿಯಾದ ಮ್ಯಾಚ್‌ ಪ್ರ್ಯಾಕ್ಟಿಸ್‌ ಇಲ್ಲದೆ ಮಹತ್ವದ ಪಂದ್ಯದಲ್ಲಿ ಆಡಬೇಕಿದೆ. ಇನ್ನು ಸಾಲ್ಟ್‌ ಅನುಪಸ್ಥಿತಿಯಲ್ಲಿ, ತಂಡ ರಹಮಾನುಲ್ಲಾ ಗುರ್ಬಾಜ್‌ರನ್ನು ಈ ಪಂದ್ಯದಲ್ಲಿ ಆರಂಭಿಕನನ್ನಾಗಿ ಆಡಿಸಲಿದೆ. ಗುರ್ಬಾಜ್‌ ಈ ಐಪಿಎಲ್‌ನಲ್ಲಿ ಒಂದೂ ಪಂದ್ಯ ಆಡಿಲ್ಲ. ಸಹಜವಾಗಿಯೇ ಆಫ್ಘನ್‌ನ ಕೀಪರ್‌-ಬ್ಯಾಟರ್‌ ಮೇಲೆ ಒತ್ತಡ ಇರಲಿದೆ. ನಿತೀಶ್‌ ರಾಣಾ ಲಯಕ್ಕೆ ಮರಳಿರುವುದು ಕೆಕೆಆರ್‌ ಪಾಳಯದಲ್ಲಿ ಖುಷಿ ಮೂಡಿಸಿದೆ. ರಿಂಕು ಸಿಂಗ್‌ಗೆ ಈ ಆವೃತ್ತಿಯಲ್ಲಿ ಹೆಚ್ಚು ಅವಕಾಶ ಸಿಕ್ಕಿಲ್ಲ. ಆದರೆ ಯಾವುದೇ ಕಾರಣಕ್ಕೂ ಅವರನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎನ್ನುವುದು ಸನ್‌ರೈಸರ್ಸ್‌ಗೆ ಚೆನ್ನಾಗಿ ತಿಳಿದಿದೆ.

ಇನ್ನು ಈ ಆವೃತ್ತಿಯ ಆರಂಭದಲ್ಲಿ ಉಭಯ ತಂಡಗಳು ಈಡನ್‌ ಗಾರ್ಡನ್ಸ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಕೆಕೆಆರ್‌ 4 ರನ್‌ಗಳ ರೋಚಕ ಜಯ ಸಾಧಿಸಿತ್ತು. ಒಟ್ಟು ಮುಖಾಮುಖಿ: 26

ಕೆಕೆಆರ್‌: 16

ಸನ್‌ರೈಸರ್ಸ್‌: 09ಸಂಭವನೀಯ ಆಟಗಾರರ ಪಟ್ಟಿ

ಕೆಕೆಆರ್‌: ನರೈನ್‌, ಗುರ್ಬಾಜ್‌, ಶ್ರೇಯಸ್‌(ನಾಯಕ), ವೆಂಕಿ ಅಯ್ಯರ್‌, ನಿತೀಶ್‌, ರಿಂಕು, ರಸೆಲ್‌, ರಮಣ್‌ದೀಪ್‌, ಸ್ಟಾರ್ಕ್‌, ಅನುಕೂಲ್‌/ವೈಭವ್‌, ಹರ್ಷಿತ್‌, ವರುಣ್‌.

ಸನ್‌ರೈಸರ್ಸ್‌: ಹೆಡ್‌, ಅಭಿಷೇಕ್‌, ತ್ರಿಪಾಠಿ, ನಿತೀಶ್‌, ಕ್ಲಾಸೆನ್‌, ಶಾಬಾಜ್‌, ಸಮದ್‌, ಸನ್‌ವೀರ್‌, ಕಮಿನ್ಸ್‌(ನಾಯಕ), ಭುವನೇಶ್ವರ್‌, ವಿಜಯಕಾಂತ್, ನಟರಾಜನ್‌.ಪಂದ್ಯ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾಪಿಚ್‌ ರಿಪೋರ್ಟ್‌

ಕೆಂಪು ಮಣ್ಣಿನ, ವೇಗ ಹಾಗೂ ಬೌನ್ಸ್‌ ಇರುವ ಪಿಚ್‌ ಆಯ್ಕೆ ಮಾಡಿದರೆ ರನ್‌ ಹೊಳೆ ಹರಿಯುವ ಸಾಧ್ಯತೆ ಹೆಚ್ಚು. ಕಪ್ಪು ಮಣ್ಣಿನ, ನಿಧಾನಗತಿಯ ಪಿಚ್‌ ಆಯ್ಕೆ ಮಾಡಿದರೆ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಲಿದ್ದು, ಕೆಕೆಆರ್‌ಗೆ ಲಾಭವಾಗುವ ಸಾಧ್ಯತೆ ಜಾಸ್ತಿ.

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌