ಬೆಂಗ್ಳೂರಲ್ಲಿಂದು ಆರ್‌ಸಿಬಿ vs ಚೆನ್ನೈ ಬಹು ನಿರೀಕ್ಷಿತ ನಾಕೌಟ್‌ ಕದನ

KannadaprabhaNewsNetwork |  
Published : May 18, 2024, 12:37 AM ISTUpdated : May 18, 2024, 04:11 AM IST
ಮ್ಯಾಕ್ಸ್‌ವೆಲ್‌ ಅಭ್ಯಾಸ (ಚಿತ್ರ: ಕೆ.ರವಿ) | Kannada Prabha

ಸಾರಾಂಶ

ಮಳೆ ಭೀತಿಯ ನಡುವೆಯೇ ಬಹುನಿರೀಕ್ಷಿತ ಹಣಾಹಣಿಗೆ ಸಜ್ಜಾದ ಚಿನ್ನಸ್ವಾಮಿ ಕ್ರೀಡಾಂಗಣ. ಇತ್ತಂಡಕ್ಕೂ ಮಾಡು ಇಲ್ಲವೇ ಮಡಿ ಪಂದ್ಯ. ದೊಡ್ಡ ಅಂತರದಲ್ಲಿ ಗೆದ್ದರಷ್ಟೇ ಆರ್‌ಸಿಬಿ ಪ್ಲೇ-ಆಫ್‌ಗೆ. ಚೆನ್ನೈಗೂ ಜಯ ಅನಿವಾರ್ಯ. ಮಳೆಯಿಂದ ಪಂದ್ಯ ರದ್ದಾದ್ರೆ ಚೆನ್ನೈ ನಾಕೌಟ್‌ಗೆ

  ಬೆಂಗಳೂರು : 17ನೇ ಆವೃತ್ತಿ ಐಪಿಎಲ್‌ನ ಬಹುನಿರೀಕ್ಷಿತ, ಸಾಂಪ್ರದಾಯಿಕ ಬದ್ಧವೈರಿಗಳಾದ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ನಿರ್ಣಾಯಕ ಹಣಾಹಣಿಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. 

ಉಭಯ ತಂಡಗಳಿಗೂ ಈ ಪಂದ್ಯ ಮಾಡು ಇಲ್ಲವೇ ಮಾಡಿ ಎನಿಸಿಕೊಂಡಿದ್ದು, ಮಳೆ ಭೀತಿ ನಡುವೆಯೇ ರಣರೋಚಕ ಪೈಪೋಟಿಗೆ ಸಾಕ್ಷಿಯಾಗಲು ಅಭಿಮಾನಿಗಳೂ ತುದಿಗಾಲಲ್ಲಿ ನಿಂತಿದ್ದಾರೆ.ಈ ಬಾರಿ 3 ತಂಡಗಳು ಪ್ಲೇ-ಆಫ್‌ಗೇರಿದ್ದು, ಮತ್ತೊಂದು ಸ್ಥಾನಕ್ಕಾಗಿ ಚೆನ್ನೈ-ಆರ್‌ಸಿಬಿ ಸೆಣಸಾಡಲಿವೆ. 

ಆರ್‌ಸಿಬಿಯ ಈ ಬಾರಿಯ ಪ್ರದರ್ಶನ ಯಾವ ಥ್ರಿಲ್ಲರ್‌ ಸಿನಿಮಾಕ್ಕೂ ಕಡಿಮೆಯೇನಲ್ಲ. ಮೊದಲಾರ್ಧದಲ್ಲಿ 8 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದು, ಇನ್ನೇನು ಪ್ಲೇ-ಆಫ್‌ ರೇಸ್‌ನಿಂದ ಹೊರಬಿತ್ತು ಅನ್ನುವಷ್ಟರಲ್ಲಿ ಗೇರ್‌ ಬದಲಿಸಿ ಹೈಸ್ಪೀಡ್‌ನಲ್ಲಿ ಓಡಲು ಶುರುವಿಟ್ಟ ತಂಡ ಸದ್ಯ ಸತತ 5, ಒಟ್ಟಾರೆ 6 ಗೆಲುವಿನೊಂದಿಗೆ 12 ಅಂಕ ಸಂಪಾದಿಸಿದೆ. ಪ್ಲೇ-ಆಫ್‌ಗೇರಲು ಈ ಪಂದ್ಯದಲ್ಲಿ 18 ರನ್‌ನಿಂದ ಅಥವಾ 11 ಎಸೆತ ಬಾಕಿ ಉಳಿಸಿ ಗೆಲ್ಲಬೇಕಿದ್ದು, ಸೋತರೆ ರೇಸ್‌ನಿಂದ ಹೊರಬೀಳಲಿದೆ.

ಅತ್ತ ಚೆನ್ನೈ 13 ಪಂದ್ಯಗಳಲ್ಲಿ 7ರಲ್ಲಿ ಜಯಭೇರಿ ಬಾರಿಸಿದ್ದು, 14 ಅಂಕಗಳನ್ನು ಹೊಂದಿದೆ. ಆರ್‌ಸಿಬಿ(+0.387)ಗಿಂತ ನೆಟ್‌ ರನ್‌ರೇಟ್‌ನಲ್ಲಿ ಮುಂದಿರುವ ಚೆನ್ನೈ(+0.528) ಈ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್‌ಗೇರಲಿದೆ. ಸೋತರೂ ತಂಡದ ನೆಟ್‌ ರನ್‌ರೇಟ್‌ ಆರ್‌ಸಿಬಿಗಿಂತ ಕಡಿಮೆಯಾಗದಿದ್ದರೆ ನಾಕೌಟ್‌ಗೇರುವ ಅವಕಾಶ ಸಿಗಲಿದೆ.

ಗ್ರೇಟ್‌ ಕಮ್‌ಬ್ಯಾಕ್‌: ಆರ್‌ಸಿಬಿ ಪಾಲಿಗೆ ಚೆನ್ನೈ ನುಂಗಲಾರದ ತುತ್ತು. ಚೆನ್ನೈ ವಿರುದ್ಧ ತಂಡದ ಸಾಧನೆಯೇನೂ ಉತ್ತಮವಾಗಿಲ್ಲ. ಆದರೆ ಸತತ ಸೋಲುಗಳ ಬಳಿಕ ಕಮ್‌ಬ್ಯಾಕ್‌ ಮಾಡಿದ ಆರ್‌ಸಿಬಿಯ ಕಳೆದ 5 ಪಂದ್ಯಗಳ ಆಟ ನೋಡಿದರೆ ಈ ಪಂದ್ಯದಲ್ಲೂ ಆರ್‌ಸಿಬಿಯೇ ಗೆಲ್ಲುವ ಫೇವರಿಟ್‌. ಕೊಹ್ಲಿ ಅಭೂತಪೂರ್ವ ಲಯದಲ್ಲಿದ್ದು, ನಿರ್ಣಾಯಕ ಪಂದ್ಯದಲ್ಲೂ ತಂಡದ ಕೈಹಿಡಿಯಬೇಕಿದೆ. ವಿಲ್‌ ಜ್ಯಾಕ್ಸ್ ತವರಿಗೆ ಮರಳಿರುವ ಹಿನ್ನೆಲೆಯಲ್ಲಿ ಸದ್ಯ ಎಲ್ಲರ ಚಿತ್ತ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮೇಲಿದೆ. ರಜತ್‌ ಪಾಟೀದಾರ್‌ ಕೂಡಾ ಅಬ್ಬರಿಸುತ್ತಿರುವುದು ಆರ್‌ಸಿಬಿಗೆ ಪ್ಲಸ್‌ ಪಾಯಿಂಟ್‌.ಬೌಲಿಂಗ್‌ ವಿಭಾಗವಂತೂ ಎದುರಾಳಿಗಳನ್ನು ಬೆಚ್ಚಿ ಬೀಳಿಸುವಂತಿದ್ದು, ಮಹತ್ವದ ಪಂದ್ಯದಲ್ಲಿ ತಂಡಕ್ಕೆ ನೆರವಾಗಬೇಕಿದೆ.

ಬೌಲಿಂಗ್‌ ಚಿಂತೆ: ಚೆನ್ನೈ ಟೂರ್ನಿಯುದ್ದಕ್ಕೂ ವೇಗದ ಬೌಲಿಂಗ್‌ ವಿಭಾಗದಲ್ಲಿ ಸಮಸ್ಯೆ ಎದುರಿಸುತ್ತಿದೆ. ಪ್ರಮುಖರಾದ ಮುಸ್ತಾಫಿಜುರ್‌, ಪತಿರನ, ದೀಪಕ್‌ ಚಹರ್‌ ಗೈರಿನಿಂದ ತಂಡದ ಬೌಲಿಂಗ್‌ ವಿಭಾಗ ಸೊರಗಿದೆ. ಆದರೆ ಸಿಮ್‌ಜೀತ್‌ ಸಿಂಗ್‌, ತುಷಾರ್‌ ದೇಶಪಾಂಡೆ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ನಾಯಕ ಋತುರಾಜ್‌ ಗಾಯಕ್ವಾಡ್‌ ಮಿಂಚುತ್ತಿದ್ದರೂ, ರಚಿನ್ ರವೀಂದ್ರ, ಶಿವಂ ದುಬೆ ಕೂಡಾ ಲಯಕ್ಕೆ ಮರಳಿ ಅಬ್ಬರಿಸಬೇಕಿದೆ.ಒಟ್ಟು ಮುಖಾಮುಖಿ: 32ಆರ್‌ಸಿಬಿ: 10ಚೆನ್ನೈ: 21ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಡು ಪ್ಲೆಸಿ(ನಾಯಕ), ಕೊಹ್ಲಿ, ರಜತ್‌, ಮ್ಯಾಕ್ಸ್‌ವೆಲ್‌, ಗ್ರೀನ್‌, ಲೊಮ್ರೊರ್, ಕಾರ್ತಿಕ್‌, ಕರ್ಣ್‌, ಸಿರಾಜ್‌, ಫರ್ಗ್ಯೂಸನ್‌, ಯಶ್‌ ದಯಾಲ್‌.ಚೆನ್ನೈ: ರಚಿನ್‌, ಋತುರಾಜ್‌(ನಾಯಕ), ಮಿಚೆಲ್‌, ಮೊಯೀನ್‌, ದುಬೆ, ಜಡೇಜಾ, ಧೋನಿ, ದೀಪಕ್‌, ಶಾರ್ದೂಲ್‌, ತುಷಾರ್‌, ಸಿಮರ್‌ಜೀತ್‌.

ಪಂದ್ಯ: ರಾತ್ರಿ 7.30ಕ್ಕೆ

ಪಿಚ್ ರಿಪೋರ್ಟ್‌: ಚಿನ್ನಸ್ವಾಮಿ ಕ್ರೀಡಾಂಗಣ ದೊಡ್ಡ ಮೊತ್ತ, ಚೇಸಿಂಗ್‌ಗೆ ಹೆಸರುವಾಸಿ. ಆದರೆ ಈ ಬಾರಿ ಟ್ರೆಂಡ್‌ ಬದಲಾಗಿದೆ. ಇಲ್ಲಿ ಈ ಆವೃತ್ತಿಯ 6 ಪಂದ್ಯಗಳ 12 ಇನ್ನಿಂಗ್ಸ್‌ಗಳಲ್ಲಿ 2 ಬಾರಿ ಮಾತ್ರ 200+ ರನ್‌ ದಾಖಲಾಗಿದೆ. ಅಲ್ಲದೆ ಕಳೆದ 4 ಪಂದ್ಯಗಳ ಪೈಕಿ 3ರಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದಿವೆ. ಹೀಗಾಗಿ ಟಾಸ್ ಮತ್ತೆ ನಿರ್ಣಾಯಕ ಪಾತ್ರ ವಹಿಸಬಹುದು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಟಿ20 ವಿಶ್ವಕಪ್‌ನಿಂದ ಉಪನಾಯಕ ಗಿಲ್‌ಗೆ ಗೇಟ್‌ಪಾಸ್‌, ಕಿಶನ್ ಆಯ್ಕೆ!
ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!