ಐಪಿಎಲ್‌: ಲಖನೌ ಸೂಪರ್‌ಜೈಂಟ್ಸ್‌ ತಂಡಕ್ಕೆ ವಿಂಡೀಸ್‌ನ ಶಮಾರ್‌ ಜೊಸೆಫ್‌

KannadaprabhaNewsNetwork |  
Published : Feb 11, 2024, 01:51 AM IST
ಐಪಿಎಲ್‌: ಲಖನೌ ಲಖನೌ ಸೂಪರ್‌ಜೈಂಟ್ಸ್‌ ತಂಡಕ್ಕೆ ವಿಂಡೀಸ್‌ನ ಶಮಾರ್‌ ಜೊಸೆಫ್‌ | Kannada Prabha

ಸಾರಾಂಶ

ಇತ್ತೀಚೆಗೆ ಆಸ್ಟ್ರೇಲಿಯಾ ನೆಲದಲ್ಲಿ ವಿಂಡೀಸ್‌ 27 ವರ್ಷ ಬಳಿಕ ಟೆಸ್ಟ್‌ ಪಂದ್ಯವನ್ನು ಗೆಲ್ಲಲು ನೆರವಾಗಿದ್ದ ವೇಗಿ ಶಮಾರ್‌ ಜೋಸೆಫ್‌ 2024ರ ಐಪಿಎಲ್‌ನಲ್ಲಿ ಲಖನೌ ಸೂಪರ್‌ಜೈಂಟ್ಸ್‌ ಪರ ಆಡಲಿದ್ದಾರೆ

ನವದೆಹಲಿ: ಇತ್ತೀಚೆಗೆ ಆಸ್ಟ್ರೇಲಿಯಾ ನೆಲದಲ್ಲಿ ವಿಂಡೀಸ್‌ 27 ವರ್ಷ ಬಳಿಕ ಟೆಸ್ಟ್‌ ಪಂದ್ಯವನ್ನು ಗೆಲ್ಲಲು ನೆರವಾಗಿದ್ದ ವೇಗಿ ಶಮಾರ್‌ ಜೋಸೆಫ್‌ 2024ರ ಐಪಿಎಲ್‌ನಲ್ಲಿ ಲಖನೌ ಸೂಪರ್‌ಜೈಂಟ್ಸ್‌ ಪರ ಆಡಲಿದ್ದಾರೆ.

3 ಕೋಟಿ ರು.ಗೆ ಅವರು ಲಖನೌಗೆ ಸೇರ್ಪಡೆಗೊಂಡಿರುವುದಾಗಿ ಶನಿವಾರ ಐಪಿಎಲ್‌ ಆಡಳಿತ ಮಂಡಳಿ ಪ್ರಕಟಣೆ ಮೂಲಕ ತಿಳಿಸಿದೆ. ಇಂಗ್ಲೆಂಡ್‌ ವೇಗಿ ಮಾರ್ಕ್‌ ವುಡ್‌ ಬದಲು ಜೋಸೆಫ್‌ ತಂಡ ಸೇರಿದ್ದಾರೆ. ಕಳೆದ ತಿಂಗಳು ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಶಮಾರ್ ಜೋಸೆಫ್‌ 7 ವಿಕೆಟ್‌ ಕಬಳಿಸಿ ತಂಡ 8 ರನ್‌ಗಳ ರೋಚಕ ಗೆಲುವು ಸಾಧಿಸಲು ದೊಡ್ಡ ಮಟ್ಟದ ಕೊಡುಗೆ ನೀಡಿದ್ದರು. ಬ್ಯಾಟಿಂಗ್‌ ವೇಳೆ ಕಾಲು ಬೆರಳು ಮುರಿದರೂ ಲೆಕ್ಕಿಸದೆ ಗಂಟೆಗೆ 140-145 ಕಿ.ಮೀ. ವೇಗದಲ್ಲಿ ಬೌಲ್‌ ಮಾಡಿ ಕಾಂಗರೂ ಬ್ಯಾಟರ್‌ಗಳನ್ನು ನಡುಗಿಸಿದ್ದರು.

ಹಣ್ಣು, ಬಾಟಲಿಯನ್ನು ಬಾಲ್‌ ಮಾಡಿ ಆಡುತ್ತಿದ್ದ ಶಮಾರ್‌!

ವಿಂಡೀಸ್‌ನ ಶಮಾರ್‌ ಜೋಸೆಫ್‌ರ ಕ್ರಿಕೆಟ್‌ ಪಯಣ ಯಾವ ಸಿನಿಮಾ ಕಥೆಗೂ ಕಡಿಮೆಯೇನಲ್ಲ. ಕಾಡಲ್ಲಿ ಮರ ಕಡಿಯುವೊಂದೇ ವೃತ್ತಿ ಮಾಡಿಕೊಂಡಿರುವ, ಕೇವಲ 400 ಜನಸಂಖ್ಯೆಯುಳ್ಳ ಕೆರಿಬಿಯನ್‌ನ ಹಳ್ಳಿಯೊಂದರ ಪ್ರತಿಭೆಯಾಗಿರುವ ಶಮಾರ್‌, 2021ರ ವರೆಗೂ ಬಾರ್ಬಿಸ್‌ ಎಂಬಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.

ಶಮಾರ್‌ರ ಗ್ರಾಮಕ್ಕೆ ತೆರಳಬೇಕಿದ್ದರೆ 2 ಗಂಟೆ ಬೋಟ್‌ನಲ್ಲಿ ಸಂಚರಿಸಬೇಕಿದ್ದು, 2018ರ ವರೆಗೂ ಅವರ ಊರಿನಲ್ಲಿ ಮೊಬೈಲ್, ಇಂಟರ್ನೆಟ್‌ ಸೇವೆ ಇರಲಿಲ್ಲ. ಪ್ಲಾಸ್ಟಿಕ್‌ ಬಾಟಲ್‌, ಹಣ್ಣುಗಳನ್ನೇ ಎಸೆದು ಬೌಲಿಂಗ್‌ ಮಾಡುತ್ತಿದ್ದ ಶಮಾರ್‌, ಕಳೆದ ವರ್ಷದವರೆಗೂ ವೃತ್ತಿಪರ ಕ್ರಿಕೆಟರೇ ಆಗಿರಲಿಲ್ಲ ಎನ್ನುವುದು ಹಲವರಿಗೆ ಗೊತ್ತಿಲ್ಲ. ಯಾವುದೇ ವೃತ್ತಿಪರ ಕ್ರಿಕೆಟ್‌ ಆಟದೆ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ಗೆ ಆಯ್ಕೆಯಾದ ಬಳಿಕ ಶಮಾರ್‌ರ ಬದುಕಿನ ದಿಕ್ಕೇ ಬದಲಾಗಿದೆ. ಊರಲ್ಲಿ ಕೆಲಸದ ವೇಳೆ ತಮ್ಮ ಮೇಲೆ ಮರ ಬೀಳುವುದರಿಂದ ಅಲ್ಪದರಲ್ಲೇ ಪಾರಾಗಿ, ಸಾವಿನಿಂದ ಬಚಾವಾಗಿದ್ದ ಶಮಾರ್‌ ಸದ್ಯ ವಿಂಡೀಸ್‌ ಕ್ರಿಕೆಟ್‌ ತಂಡದ ಹೀರೋ. ಸದ್ಯದಲ್ಲೇ ಅವರು ಐಪಿಎಲ್‌ನಲ್ಲೂ ಹೀರೋ ಆಗಿ ಮಿನುಗಬೇಕು ಎನ್ನುವುದು ಕ್ರಿಕೆಟ್‌ ಅಭಿಮಾನಿಗಳ ಮಹದಾಸೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಐಪಿಎಲ್‌ : ಗ್ರೀನ್‌ಗೆ ₹25.2, ಪತಿರನಗೆ ₹18 ಕೋಟಿ ಜಾಕ್‌ಪಾಟ್‌
ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ