;Resize=(412,232))
ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಬಾಂಗ್ಲಾದೇಶವನ್ನು ಬೆಂಬಲಿಸುತ್ತಿರುವ ಪಾಕಿಸ್ತಾನ ತಂಡ ಒಂದು ವೇಳೆ ಟೂರ್ನಿಯನ್ನು ಬಹಿಷ್ಕರಿಸಿದರೆ, ಅದು ಯಾರನ್ನೋ ರಕ್ಷಿಸಲು ಹೋಗಿ ತಾನೇ ಹಳ್ಳಕ್ಕೆ ಬಿದ್ದಂತೆ. ಯಾಕೆಂದರೆ, ಪಾಕ್ ತಂಡ ಟೂರ್ನಿ ಬಹಿಷ್ಕರಿಸಿದರೆ ಬದಲಿ ತಂಡವಾಗಿ ಬಾಂಗ್ಲಾದೇಶವೇ ವಿಶ್ವಕಪ್‌ಗೆ ವಾಪಸ್ ಆಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಭದ್ರತೆ ಸಮಸ್ಯೆ ಇದೆ, ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಬೇಕು ಎಂದು ಪಟ್ಟುಹಿಡಿದಿದ್ದ ಬಾಂಗ್ಲಾ ಈಗ ಟೂರ್ನಿಯಿಂದಲೇ ಹೊರಬಿದ್ದಿದೆ. ಬದಲಾಗಿ ಸ್ಕಾಟ್ಲೆಂಡ್ ಟೂರ್ನಿಗೆ ಪ್ರವೇಶಿಸಿದೆ. ಮತ್ತೊಂದೆಡೆ ಬಾಂಗ್ಲಾಕ್ಕೆ ಬೆಂಬಲವಾಗಿ ನಿಂತಿರುವ ಪಾಕ್ ಕ್ರಿಕೆಟ್, ಟೂರ್ನಿಯನ್ನು ಬಹಿಷ್ಕರಿಸುವ ಬೆದರಿಕೆ ಒಡ್ಡುತ್ತಿದೆ. ಆದರೆ ತಂಡ ಟೂರ್ನಿ ಬಹಿಷ್ಕರಿಸುವ ಸಾಧ್ಯತೆ ತೀರಾ ಕಡಿಮೆ. ಒಂದು ವೇಳೆ ಬಹಿಷ್ಕಾರ ನಿರ್ಧಾರ ತೆಗೆದುಕೊಂಡರೆ ಅದು ಪಾಕ್‌ಗೆ ಮುಳುವಾಗುವುದು ಖಚಿತ.
ಪಾಕ್ ತಂಡ ಈಗ ‘ಎ’ ಗುಂಪಿನಲ್ಲಿದೆ. ತಂಡದ ಎಲ್ಲಾ ಪಂದ್ಯಗಳು ಲಂಕಾದಲ್ಲಿ ನಿಗದಿಯಾಗಿದೆ. ಪಾಕ್ ತಂಡ ಟೂರ್ನಿ ಬಹಿಷ್ಕರಿಸಿದರೆ, ಬದಲಿ ತಂಡವಾಗಿ ಬಾಂಗ್ಲಾದೇಶ ಟೂರ್ನಿಗೆ ಪ್ರವೇಶಿಸಬಹುದು. ಬಾಂಗ್ಲಾಗೆ ಭಾರತದಲ್ಲಿ ಆಡಲು ಸಮಸ್ಯೆಯಿದೆ ಹೊರತು ಶ್ರೀಲಂಕಾದಲ್ಲಿ ಅಲ್ಲ. ಹೀಗಾಗಿ ಪಾಕ್ ಹೊರಬಿದ್ದರೆ, ಬಾಂಗ್ಲಾ ಕ್ರಿಕೆಟ್ ಮಂಡಳಿಯ ಬೇಡಿಕೆಯಂತೆ ಬಾಂಗ್ಲಾ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದು, ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.