ಇನ್ನಿಂಗ್ಸ್ ಲೀಡ್‌ಗೆ ರಾಜ್ಯ ಹೋರಾಟ

Published : Nov 10, 2025, 09:57 AM IST
Sports

ಸಾರಾಂಶ

ಮಹಾರಾಷ್ಟ್ರ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಇನ್ನಿಂಗ್ಸ್‌ ಮುನ್ನಡೆಗಾಗಿ ಹೋರಾಟ ನಡೆಸುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ರಾಜ್ಯ ತಂಡ 313 ರನ್‌ಗೆ ಆಲೌಟಾದರೆ,   ಮಹಾರಾಷ್ಟ್ರ 2ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 200 ರನ್‌ ಕಲೆಹಾಕಿದೆ.

 ಪುಣೆ: ಮಹಾರಾಷ್ಟ್ರ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಇನ್ನಿಂಗ್ಸ್‌ ಮುನ್ನಡೆಗಾಗಿ ಹೋರಾಟ ನಡೆಸುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ರಾಜ್ಯ ತಂಡ 313 ರನ್‌ಗೆ ಆಲೌಟಾದರೆ, ಇದಕ್ಕೆ ಉತ್ತರವಾಗಿ ಬ್ಯಾಟ್‌ ಮಾಡುತ್ತಿರುವ ಮಹಾರಾಷ್ಟ್ರ 2ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 200 ರನ್‌ ಕಲೆಹಾಕಿದೆ. ತಂಡ ಇನ್ನೂ 113 ರನ್‌ ಹಿನ್ನಡೆಯಲ್ಲಿದೆ.

ಮೊದಲ ದಿನ 5 ವಿಕೆಟ್‌ಗೆ 257 ರನ್‌ ಗಳಿಸಿದ್ದ ರಾಜ್ಯಕ್ಕೆ ಭಾನುವಾರ ಆಘಾತ ಎದುರಾಯಿತು. 47 ರನ್‌ ಗಳಿಸಿದ್ದ ಅಭಿನವ್‌ ತಂಡದ ಸ್ಕೋರ್ 276 ಆಗಿದ್ದಾಗ ಔಟಾಗುವುದರೊಂದಿಗೆ ರಾಜ್ಯ ದಿಢೀರ್‌ ಕುಸಿತ ಕಂಡಿತು. ತಂಡ ಕೇವಲ 15 ರನ್‌ ಅಂತರದಲ್ಲಿ 4 ವಿಕೆಟ್‌ ನಷ್ಟಕ್ಕೊಳಗಾಯಿತು. ವೆಂಕಟೇಶ್‌ ಎಂ., ಮೊಹ್ಸಿನ್‌ ಖಾನ್‌ ಹಾಗೂ ಅಭಿಲಾಶ್‌ ಶೆಟ್ಟಿ ರನ್‌ ಖಾತೆ ತೆರೆಯುವ ಮೊದಲೇ ನಿರ್ಗಮಿಸಿದರು. ಕೊನೆ ವಿಕೆಟ್‌ಗೆ ವಿದ್ವತ್‌ ಜೊತೆಗೂಡಿದ ಶ್ರೇಯಸ್‌ ಗೋಪಾಲ್‌, 22 ರನ್‌ ಸೇರಿಸಿದರು. ಶ್ರೇಯಸ್‌ 71 ರನ್‌ ಗಳಿಸಿ ತಂಡಕ್ಕೆ ಉತ್ತಮ ಮೊತ್ತ ಕಲೆಹಾಕಲು ನೆರವಾದರು. ಜಲಜ್‌ ಸಕ್ಸೇನಾ 4, ಮುಕೇಶ್‌ ಚೌಧರಿ 3 ವಿಕೆಟ್‌ ಪಡೆದರು.

ಉತ್ತಮ ಆರಂಭ:

ಬಳಿಕ ಇನ್ನಿಂಗ್ಸ್‌ ಆರಂಭಿಸಿದ ಮಹಾರಾಷ್ಟ್ರ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಪೃಥ್ವಿ ಶಾ ಹಾಗೂ ಅರ್ಶಿನ್‌ ಕುಲ್ಕರ್ಣಿ 98 ರನ್‌ ಸೇರಿಸಿದರು. ಆದರೆ ಅರ್ಶಿನ್‌ 34 ರನ್‌ ಗಳಿಸಿ ಔಟಾದ ಬಳಿಕ ಕರ್ನಾಟಕ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಮಹಾರಾಷ್ಟ್ರ ಕೇವಲ 16 ರನ್‌ ಅಂತರದಲ್ಲಿ 4 ವಿಕೆಟ್‌ ಕಳೆದುಕೊಂಡಿತು. 92 ಎಸೆತಕ್ಕೆ 71 ರನ್ ಗಳಿಸಿದ್ದ ಪೃಥ್ವಿ ಶಾ, ರಾಜ್ಯದ ಸ್ಪಿನ್ನರ್‌ ಮೊಹ್ಸಿನ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದರೆ, ಉಳಿದ ಮೂವರನ್ನು ಶ್ರೇಯಸ್‌ಗೆ ಪೆವಿಲಿಯನ್‌ಗೆ ಅಟ್ಟಿದರು. ಸದ್ಯ ಜಲಜ್‌ ಸಕ್ಸೇನಾ(ಔಟಾಗದೆ 34) ಹಾಗೂ ವಿಕಿ ಓಸ್ವಾಲ್‌(ಔಟಾಗದೆ 4) 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಶ್ರೇಯಸ್‌ 4, ಮೊಹ್ಸಿನ್‌ 2 ವಿಕೆಟ್‌ ಪಡೆದಿದ್ದು, ಸೋಮವಾರ ಮಹಾರಾಷ್ಟ್ರವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವ ವಿಶ್ವಾಸದಲ್ಲಿದ್ದಾರೆ.

ಸ್ಕೋರ್: ಕರ್ನಾಟಕ ಮೊದಲ ಇನ್ನಿಂಗ್ಸ್‌ 313/10 (ಶ್ರೇಯಸ್‌ 71, ಅಭಿನವ್‌ 47, ಜಲಜ್‌ 4-94), ಮಹಾರಾಷ್ಟ್ರ ಮೊದಲ ಇನ್ನಿಂಗ್ಸ್‌ 200/6 (2ನೇ ದಿನದಂತ್ಯಕ್ಕೆ) (ಪೃಥ್ವಿ ಶಾ 71, ಅರ್ಶಿನ್‌ 34, ಜಲಜ್‌ ಔಟಾಗದೆ 34, ಶ್ರೇಯಸ್‌ 4-46, ಮೊಹ್ಸಿನ್‌ 2-56)

18ನೇ ಫಿಫ್ಟಿ

ಶ್ರೇಯಸ್‌ ಗೋಪಾಲ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 18ನೇ ಅರ್ಧಶತಕ ಪೂರೈಸಿದರು. ಅವರು 6 ಶತಕ ಕೂಡಾ ಬಾರಿಸಿದ್ದಾರೆ.

PREV
Read more Articles on

Recommended Stories

8ರಲ್ಲಿ 8 ಸಿಕ್ಸರ್‌, 11 ಎಸೆತಕ್ಕೆ ಫಿಫ್ಟಿ : ಆಕಾಶ್‌ ವಿಶ್ವ ದಾಖಲೆ!
ತೇಜಸ್ವಿ, ಅಣ್ಣಾಮಲೈ ಐರನ್‌ಮ್ಯಾನ್‌!