ಮಾ.30ರಿಂದ ಕೊಡವ ಹಾಕಿ ಹಬ್ಬ: ದಾಖಲೆಯ 360 ತಂಡ ನೋಂದಣಿ

KannadaprabhaNewsNetwork |  
Published : Mar 23, 2024, 01:03 AM IST
ಚಿತ್ರ : 22ಎಂಡಿಕೆ1: ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಮಾತನಾಡಿದರು. | Kannada Prabha

ಸಾರಾಂಶ

ಕೊಡವ ಹಾಕಿ ಹಬ್ಬ 1977ರಿಂದಲೂ ನಡೆದುಕೊಂಡು ಬರುತ್ತಿದೆ. ಈ ಬಾರಿ ದಾಖಲೆಯ 360 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಕೂರ್ಗ್ 11 ಮತ್ತು ಇಂಡಿಯನ್ ನೇವಿ ನಡುವೆ ಉದ್ಘಾಟನಾ ಪಂದ್ಯ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಕುಟುಂಬಗಳ ನಡುವಿನ ಪ್ರತಿಷ್ಠಿತ ಕುಂಡ್ಯೋಳಂಡ ಹಾಕಿ ಹಬ್ಬ ಮಾ.30 ರಿಂದ ಏ.28 ರ ವರೆಗೆ ನಾಪೋಕ್ಲು ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ದಾಖಲೆಯ 360 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ಕೂರ್ಗ್ 11 ಮತ್ತು ಇಂಡಿಯನ್ ನೇವಿ ನಡುವೆ ಉದ್ಘಾಟನಾ ಪಂದ್ಯ ಆಯೋಜಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ, ಕ್ರೀಡಾಕೂಟದ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಅಧ್ಯಕ್ಷ ರಮೇಶ್ ಮುದ್ದಯ್ಯ ಹಾಗೂ ಪ್ರಮುಖರು ಕೊಡವ ಹಾಕಿ ಅಕಾಡೆಮಿ 26 ವರ್ಷಗಳ ಹಿಂದೆ ಕೊಡವ ಹಾಕಿ ಹಬ್ಬದ ಜನಕ ದಿ. ಪಾಂಡಂಡ ಕುಟ್ಟಣಿ ಅವರ ನೇತೃತ್ವದಲ್ಲಿ 1997 ರಲ್ಲಿ ಸ್ಥಾಪಿತಗೊಂಡಿತು. ಅಂದಿನಿಂದ ಇಂದಿನವರೆಗೆ ಕೊಡವ ಕುಟುಂಬಗಳ ನಡುವಿನ ವಿಶ್ವದಾಖಲೆಯ ಹಾಕಿ ಹಬ್ಬ ಆಯೋಜಿಸುತ್ತಾ ಬರುತ್ತಿದೆ ಎಂದರು.ಈ ವರ್ಷ 24ನೇ ಹಾಕಿ ಹಬ್ಬವನ್ನು ಕುಂಡ್ಯೋಳಂಡ ಕುಟುಂಬದ ಸಾರಥ್ಯದಲ್ಲಿ ನಡೆಸಲಾಗುತ್ತಿದೆ. ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್, ಹಾಕಿ ಕರ್ನಾಟಕ ಹಾಗೂ ಸ್ಥಳೀಯ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡುತ್ತಿದ್ದು, ಕುಂಡ್ಯೋಳಂಡ ಹಾಕಿ ಕಾರ್ನಿವಲ್ 2024 ರ ಅಂತಿಮ ಪಂದ್ಯಾಟವನ್ನು ಸುಮಾರು 50 ಸಾವಿರ ಕ್ರೀಡಾಭಿಮಾನಿಗಳು ವೀಕ್ಷಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಭಾರತೀಯ ಹಾಕಿಯ ತೊಟ್ಟಿಲು ಎಂದೇ ಪರಿಗಣಿಸಲ್ಪಟ್ಟಿರುವ ಕೊಡಗು ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ಶ್ರೀಮಂತ ಪರಂಪರೆ ಹೊಂದಿದೆ. 50ಕ್ಕೂ ಹೆಚ್ಚು ಕೊಡವ ಅಂತಾರಾಷ್ಟ್ರೀಯ ಹಾಕಿ ಆಟಗಾರರು ಹಾಕಿ ಕ್ರೀಡೆಯ ಪರಂಪರೆಗೆ ಕೊಡುಗೆ ನೀಡಿದ್ದಾರೆ. ಪಾಂಡಂಡ ಕುಟ್ಟಣ್ಣಿ ಹಾಗೂ ಅವರ ಸಹೋದರ ಕಾಶಿಯವರಿಂದ ಕೊಡವ ಹಾಕಿ ಉತ್ಸವ ಆರಂಭವಾಯಿತು. 1997 ರಲ್ಲಿ ಕರಡದಲ್ಲಿ ಪಾಂಡಂಡ ಕುಟುಂಬ ಮೊದಲ ಬಾರಿಗೆ ಆಯೋಜಿಸಿದ್ದ ಹಾಕಿಹಬ್ಬದಲ್ಲಿ 60 ತಂಡಗಳು ಪಾಲ್ಗೊಂಡಿದ್ದವು ಎಂದು ವಿವರಿಸಿದರು. ಈ ಬಾರಿಯ ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ 360 ತಂಡಗಳ ನೋಂದಣಿಯೊಂದಿಗೆ ಹೊಸ ದಾಖಲೆ ಸೃಷ್ಟಿಸುವ ಮೂಲಕ ಪ್ರತಿಷ್ಠಿತ ಕಪ್ ಗಾಗಿ ಸೆಣಸಾಡುತ್ತಿರುವುದು ವಿಶೇಷ. ಕುಂಡ್ಯೋಳಂಡ ಕುಟುಂಬಸ್ಥರು ಹಾಗೂ ಕೊಡವ ಹಾಕಿ ಅಕಾಡೆಮಿ ಹಾಕಿ ಹಬ್ಬ ಆಯೋಜಿಸುವ ಮೂಲಕ ಸಮುದಾಯದ ಬಾಂಧವ್ಯ ಬೆಳೆಸುವ ಮತ್ತು ಕೊಡವ ಪರಂಪರೆ ಸಂರಕ್ಷಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.ಹಾಕಿ ಜೊತೆ ವಿವಿಧ ಆಕರ್ಷಣೆ: ಹಾಕಿ ಹಬ್ಬದೊಂದಿಗೆ ಮ್ಯಾರಥಾನ್ ಓಟ, ವಧುವರರ ಸಮಾವೇಶ, ಆಹಾರ ಉತ್ಸವ, ಆರೋಗ್ಯ ಶಿಬಿರ, ವೃತ್ತಿ ಮಾರ್ಗದರ್ಶನ, ಹಾಕಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಆಟಗಾರರ ಪುನರ್ ಮಿಲನ ಮತ್ತು ಬಾಳೋಪಾಟ್ ತರಬೇತಿ ಮತ್ತಿತರ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಅನೇಕ ಆಕರ್ಷಕ ಸ್ಟಾಲ್ ಗಳು ಗಮನ ಸೆಳೆಯಲಿವೆ. ಪ್ರತಿಷ್ಠಿತ ವಿವಿಧ ವಾಹನ ಸಂಸ್ಥೆಗಳು, ಕಾಫಿ ಸಂಸ್ಥೆಗಳು ಸೇರಿದಂತೆ ವೈವಿಧ್ಯಮಯ ಸ್ಟಾಲ್ ಗಳು ಇರಲಿವೆ.

ಉದ್ಘಾಟನಾ ಪಂದ್ಯ: ಮಾ.30ರಂದು ಕೂರ್ಗ್ 11 ಮತ್ತು ಇಂಡಿಯನ್ ನೇವಿ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಕೂರ್ಗ್ 11 ತಂಡದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆಡುವ ಸಾಧ್ಯತೆಗಳಿದೆ. ಇದಕ್ಕೂ ಮೊದಲು ಸಾಯಿ ಮಡಿಕೇರಿ ಮತ್ತು ಸಾಯಿ ಪೊನ್ನಂಪೇಟೆ ಬಾಲಕಿಯರ ತಂಡಗಳ ನಡುವೆ ಪಂದ್ಯಾಟ ಆಯೋಜಿಸಲಾಗಿದೆ.

ಕೊಡವ ಹಾಕಿ ಅಕಾಡೆಮಿ ಕಳೆದ ವರ್ಷದಿಂದ ಒಂದು ಕೆ.ಜಿ. ಬೆಳ್ಳಿಯ ರೋಲಿಂಗ್ ಟ್ರೋಫಿ ನೀಡಿದೆ. ಈ ಬಾರಿಯ ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ ‘ಮ್ಯಾನ್ ಆಫ್ ದಿ ಫೆಸ್ಟಿವಲ್’ ಆಟಗಾರನಿಗೆ ‘ಏತರ್’ ಸ್ಕೂಟರ್ ಸಂಸ್ಥೆ ಎಲೆಕ್ಟ್ರಿಕ್ ಸ್ಕೂಟರ್ ನ್ನು ಬಹುಮಾನವಾಗಿ ನೀಡಲಿದೆ. ಬೆಂಗಳೂರಿನ ಪ್ರತಿಷ್ಠಿತ ಆರ್.ವಿ ವಿಶ್ವ ವಿದ್ಯಾನಿಲಯ ಹಾಕಿ ಪಂದ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಕಿ ತಂಡವನ್ನು ರಚನೆ ಮಾಡಲು ಮುಂದಾಗಿದೆ. ಕೊಡವ ಹಾಕಿ ಅಕಾಡೆಮಿ ಶಿಫಾರಸ್ ಮಾಡುವ ಹಾಕಿಪಟುವಿಗೆ ಕಾಲೇಜ್ ನಲ್ಲಿ ಓದಲು ಅವಕಾಶ ಮತ್ತು ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಿದೆ ಎಂದು ಪ್ರಮುಖರು ತಿಳಿಸಿದರು.ಮುಂದಿನ ವರ್ಷ ಮುದ್ದಂಡ ಹಾಕಿ ಹಬ್ಬ: ಹಾಕಿ ಅಕಾಡೆಮಿ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ, ಹಾಕಿ ಅಕಾಡೆಮಿಯು 2025 ರಲ್ಲಿ 25ನೇ ಆವೃತ್ತಿಯ ಕೊಡವ ಕುಟುಂಬಗಳ ನಡುವಿನ ಹಾಕಿಹಬ್ಬ ನಡೆಸಲು ಮುದ್ದಂಡ ಕುಟುಂಸ್ಥರಿಗೆ ಅವಕಾಶ ನೀಡಿದೆ. ಈ ಹಾಕಿಹಬ್ಬ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವುದು ವಿಶೇಷ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಇದ್ದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!